‘ಬಸವನಗುಡಿ ವಾರ್ಡ್ ನಂ. 154 ರೆಸಿಡೆಂಟ್ಸ್ ಅಸೋಸಿಯೇಷನ್’ ಉದ್ಘಾಟನೆ ಸಮಾರಂಭ
ಬೆಂಗಳೂರು: ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳಿರುವ ಬಸವನಗುಡಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಹಾಗೂ ಪ್ರದೇಶದ ಸ್ವಚ್ಛತೆ, ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಲು ‘ಬಸವನಗುಡಿ ವಾರ್ಡ್ ನಂ. 154 ರೆಸಿಡೆಂಟ್ಸ್ ಅಸೋಸಿಯೇಷನ್’ ಶನಿವಾರದಿಂದ ಅಧಿಕೃತವಾಗಿ ಕಾರ್ಯಾರಂಭಿಸಿತು.
‘ನಮ್ಮ ಬಡಾವಣೆ, ನಮ್ಮ ಬವಣೆ, ನಮ್ಮ ಹೊಣೆ’ ಘೋಷವಾಕ್ಯದಡಿ 30 ವರ್ಷದಿಂದ 75 ವರ್ಷ ವಯಸ್ಸಿನವರ ಪದಾಧಿಕಾರಿಗಳನ್ನು ಈ ಸಂಸ್ಥೆ ಒಳಗೊಂಡಿದೆ’ ಎಂದು ಅಧ್ಯಕ್ಷೆ ಸತ್ಯಲಕ್ಷ್ಮಿ ರಾವ್ ಅವರು ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.
‘ರಸ್ತೆ ಅಭಿವೃದ್ಧಿ, ಕಸ ವಿಲೇವಾರಿ, ನೀರು ಸರಬರಾಜು ವಿಷಯಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಾಗರಿಕರು ಸಂಘಕ್ಕೆ ತಿಳಿಸಬಹುದು. ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಕೆಲಸವನ್ನು ಮಾಡುತ್ತೇವೆ. 24 ಗಂಟೆಯೂ ಸಂಘದ ಕಾರ್ಯಕ್ಕೆ ಬದ್ಧವಾಗಿರುತ್ತೇವೆ’ ಎಂದು ಸತ್ಯಲಕ್ಷ್ಮಿ ಹೇಳಿದರು.
‘ಎಲ್ಲರನ್ನೂ ಸೇರಿಸಿ ಸಂಸ್ಥೆ ಕಟ್ಟಲಾಗಿದೆ. ಮುಂದಿನ ಕಾರ್ಯಾಚರಣೆಯೇ ಸವಾಲಿನ ಕೆಲಸ. ಸರ್ಕಾರ ಅಥವಾ ಬಿಬಿಎಂಪಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಅರಿವಾಗುತ್ತದೆ. ವ್ಯವಸ್ಥೆಯಲ್ಲಿ ಕೆಲಸ ಮಾಡುವ ಅರಿವು ನಿಮಗೆಲ್ಲ ಆಗುತ್ತದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅಭಿಪ್ರಾಯಪಟ್ಟರು.
‘ಆರೋಗ್ಯ ಹಾಗೂ ಸ್ವಚ್ಛತೆಗೆ ಸಂಬಂಧಿಸಿ ಬಿಬಿಎಂಪಿ ಹಲವು ಕಾರ್ಯಗಳನ್ನು ಮಾಡುತ್ತಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸಂಸ್ಥೆಯಿಂದ ಯಾವುದಾದರೂ ಹೊಸ ಯೋಜನೆಗಳಿದ್ದರೆ ಗಮನಕ್ಕೆ ತರಬಹುದು’ ಎಂದು ಅವರು ಹೇಳಿದರು.
‘ರೋಟರಿ ಕ್ಲಬ್ ವತಿಯಿಂದ ಶಿಕ್ಷಣ, ಆರೋಗ್ಯ ವಿಷಯದಲ್ಲಿ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅಗತ್ಯವಿರುವ ಫಲಾನುಭವಿಗಳನ್ನು ಗುರುತಿಸುವುದು ನಮ್ಮಂಥ ಸಂಸ್ಥೆಗಳ ಕೆಲಸ’ ಎಂದು ರೋಟಿರಿ ಕ್ಲಬ್‌ನ ಡಿಸ್ಟ್ರಿಕ್ಟ್ ಗವರ್ನರ್ ಆರ್. ರಾಮರಾಜ್ ಅರಸ್ ಅಭಿಪ್ರಾಯಪಟ್ಟರು.
‘ಬಸವನಗುಡಿಯಲ್ಲಿ 1954ರಿಂದ ವಾಸಿಸುತ್ತಿದ್ದೇನೆ. ದಶಕದ ಹಿಂದೆ ಇಲ್ಲಿ ಪ್ರತಿ ಮನೆಯ ಮುಂದೆ ಹೂತೋಟವಿತ್ತು. ಇಂದು ಎಲ್ಲ ಕಡೆ ಕಾಂಕ್ರೀಟ್ ಆಗಿದೆ. ಗಾಂಧಿಬಜಾರ್‌ಗೆ ವಾಯುವಿಹಾರಕ್ಕೆ ಬರುತ್ತಿದ್ದೆವು. ಈಗ ದಟ್ಟಣೆ ಹೆಚ್ಚಾಗಿ, ಸ್ವಚ್ಛತೆ ಇಲ್ಲದೆ ಯಾಕೆ ಬಂದೆವೋ ಎಂಬಂತಾಗಿದೆ. ಎಲ್ಲವನ್ನೂ ಸರಿಪಡಿಸುವ ಜವಾಬ್ದಾರಿ ನಾಗರಿಕರದ್ದು. ಸಂಘ ಅಂತಹ ಕೆಲಸ ಮಾಡಲಿ’ ಎಂದು ಮಹಿಳಾ ಮಂಡಳಿ ಅಧ್ಯಕ್ಷೆ ಸುಶೀಲಮ್ಮ ರಾವ್ ಹೇಳಿದರು.
ಪದಾಧಿಕಾರಿಗಳಾದ ಹನುಮೇಶ್ ಯಾವಗಲ್, ಶ್ರೀಧರ್, ಸುಧಾಕರ್, ಗೋಪಿನಾಥ್, ಸುಧೀಂದ್ರ ರಾವ್, ಪ್ರಸನ್ನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.