ಬೆಂಗಳೂರು: ‘ಬಾಲ್ಯದಿಂದಲೇ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಆಚಾರ–ವಿಚಾರಗಳನ್ನು ಬೆಳೆಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಕರ್ನಾಟಕ ಯುವ ಸಂಘ–ಸಂಸ್ಥೆಗಳ ಒಕ್ಕೂಟ ಬುಧವಾರ ಆಯೋಜಿಸಿದ್ದ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಯುವ ಸಮ್ಮೇಳನದಲ್ಲಿ ದೇಶದಲ್ಲಿ ಪ್ರಸ್ತುತ ಸ್ಥಿತಿ–ಗತಿಗಳು, ನಿರುದ್ಯೋಗ ಸಮಸ್ಯೆ, ಬಡತನ, ಅನಕ್ಷರತೆ ಹಾಗೂ ಡ್ರಗ್ಸ್ ಕುರಿತು ಗೋಷ್ಠಿಗಳನ್ನು ಆಯೋಜಿಸಿ, ತಜ್ಞರೊಂದಿಗೆ ಚರ್ಚಿಸಬೇಕು. ಆಗ ಮಾತ್ರ ಈ ಸಮ್ಮೇಳನ ಯಶಸ್ವಿ ಆಗಲಿದೆ. ಸರ್ಕಾರದಿಂದ ಯುವ ಸಮುದಾಯದ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡುತ್ತಿದ್ದ ಜಿಲ್ಲಾ ಯುವ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗಳನ್ನು ಮತ್ತೆ ಪ್ರಾರಂಭಿಸಬೇಕು. ಸರ್ಕಾರದ ವತಿಯಿಂದ ಜನವರಿ 12ರಂದು ರಾಜ್ಯದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಬೇಕು. ಸ್ವಾಮಿ ವಿವೇಕಾನಂದ ಯುವ ಅಕಾಡೆಮಿ ಸ್ಥಾಪಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಒಕ್ಕೂಟದ ಗೌರವ ಅಧ್ಯಕ್ಷ ವಿಜಯ್ ಕುಮಾರ್ ಸೋನಾರೆ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.