ADVERTISEMENT

ಬಡವರ ಕಷ್ಟಕ್ಕೆ ಸ್ಪಂದಿಸಿ ಸರ್ಕಾರಕ್ಕೆ ಹೊರಟ್ಟಿ ಮನವಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 21:27 IST
Last Updated 4 ಏಪ್ರಿಲ್ 2020, 21:27 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ. ರಸ್ತೆ ಬದಿ ವ್ಯಾಪಾರಿಗಳು, ಆಟೊ ಚಾಲಕರು, ಕ್ಷೌರಿಕ ಸಮುದಾಯದವರು ಸೇರಿದಂತೆ ತೀರಾ ಬಡತನದಲ್ಲಿ ಬದುಕು ಸಾಗಿಸುವ ಜನರ ಕಷ್ಟಗಳಿಗೆ ಇನ್ನಷ್ಟು ಉತ್ತಮವಾಗಿ ಸ್ಪಂದಿಸಬೇಕು ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿರುವ ಅವರು, ವಿಜಯಪುರ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಪೊಲೀಸರು ತರಕಾರಿ ಮಾರುವವರ ಜತೆಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ವಿನಂತಿಸಿದ್ದಾರೆ.

ಸರ್ಕಾರ ವಿವಿಧ ನಿಗಮಗಳ ಮೂಲಕ ನೀಡಿರುವ ಕಿರುಸಾಲಗಳನ್ನು ಮನ್ನಾ ಮಾಡಬೇಕು, ಇದೇ 14ರವರೆಗೆ ಹಿರಿಯ ನಾಗರಿಕರಿಗೆ ಮಧುಮೇಹ, ರಕ್ತದೊತ್ತಡ ಪರೀಕ್ಷೆಗಳನ್ನು ಲಭ್ಯ ಇರುವ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಮಾಡಿಸಬೇಕು, ಬೇರೆ ಜಿಲ್ಲೆಗಳಲ್ಲಿನ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗೆ ಹೋಗುವ ರೈತರಿಗೆ ವ್ಯವಸ್ಥೆ ಮಾಡಿಕೊಡಬೇಕು, ಶಾಲಾ ಶುಲ್ಕ ಪಾವತಿಗೆ ಸದ್ಯ ವಿನಾಯಿತಿ ನೀಡಬೇಕು ಸಹಿತ ಹಲವಾರು ಬೇಡಿಕೆಗಳನ್ನು ಬಸವರಾಜ ಹೊರಟ್ಟಿ ಅವರು ಸರ್ಕಾರದ ಮುಂದಿಟ್ಟಿದ್ದಾರೆ.

ADVERTISEMENT

ಇಬ್ಬರು ಸಚಿವರೇ ಕ್ವಾರಂಟೈನ್‌ನಲ್ಲಿ

ಬೆಂಗಳೂರು: ‘ಕೊರೊನಾ ಸೋಂಕಿನಿಂದ ಕ್ವಾರೆಂಟೈನ್ ವ್ಯವಸ್ಥೆ ಪರಿಚಯವಾಗಿದೆ. ಮುಖ್ಯಮಂತ್ರಿ ಅವರು ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನೇ ಕ್ವಾರೆಂಟೈನ್‌ನಲ್ಲಿ ಇಟ್ಟಿದ್ದಾರೆ. ಈ ಅನುಮಾನಕ್ಕೆ ಕಾರಣ ಏನು ಎಂಬುದನ್ನು ತಿಳಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಮಂತ್ರಿಗಳು ತಮ್ಮ ನಡುವೆ ವ್ಯತ್ಯಾಸ ಇದ್ದರೂ ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು. ಮುಖ್ಯಮಂತ್ರಿ ಅವರು ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ನಿಮ್ಮ ಮೇಲೆ ಮುಖ್ಯಮಂತ್ರಿಗಳು ವಿಶ್ವಾಸ ಕಳೆದುಕೊಂಡಿರುವುದಕ್ಕೆ ಈ ರಾಜ್ಯದ ಜನಕ್ಕೆ ಸಾರ್ವಜನಿಕವಾಗಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.