ADVERTISEMENT

ರಸ್ತೆ ಬದಿಯಲ್ಲೇ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 13:55 IST
Last Updated 9 ಜುಲೈ 2020, 13:55 IST

ಬೆಂಗಳೂರು: ಬಸವೇಶ್ವರನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಬಳಿ ರಸ್ತೆ ಬದಿಯಲ್ಲೇ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಮೃತದೇಹ ಸಾಗಿಸಲು ಆಂಬುಲೆನ್ಸ್‌ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಂಗಣ ಪಕ್ಕದಿಂದ ರಾಜಾಜಿನಗರ ಕೈಗಾರಿಕಾ ಪ್ರದೇಶಕ್ಕೆ ಹೋಗಲು ರಸ್ತೆ ಇದೆ. ಅದರ ದ್ವಾರ ಬಾಗಿಲು ಬಳಿಯೇ ಗುರುವಾರ ಬೆಳಿಗ್ಗೆ ಮೃತದೇಹ ಕಂಡಿತ್ತು. ಅದನ್ನು ನೋಡಿದ್ದ ಸ್ಥಳೀಯರು, ಬಸವೇಶ್ವರನಗರ ಠಾಣೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಮೃತದೇಹದ ಮೇಲೆ ಕೆಂಪು ಬಟ್ಟೆ ಹೊದಿಸಿದ್ದರು. ಆಂಬುಲೆನ್ಸ್‌ಗೂ ಕರೆ ಮಾಡಿದ್ದರು. ನಾಲ್ಕು ಗಂಟೆಯಾದರೂ ಆಂಬುಲೆನ್ಸ್ ಬಂದಿರಲಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸ್ಥಳೀಯರು, ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದರು. ಮಧ್ಯಾಹ್ನದ ನಂತರವೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

ADVERTISEMENT

‘ಬುಧವಾರ ರಾತ್ರಿಯೇ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿ, ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಸಾವಿಗೆ ಕೊರೊನಾ ಸೋಂಕು ಕಾರಣವಾ? ಅಥವಾ ಬೇರೆ ಏನಾದರೂ ಸಮಸ್ಯೆ ಇತ್ತಾ? ಎಂಬುದು ವೈದ್ಯರ ವರದಿಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.