ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ವಿವಿಧ ವಾರ್ಡುಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆಸಿದ ಇ-ಖಾತಾ ಅಭಿಯಾನದಲ್ಲಿ 9 ಸಾವಿರಕ್ಕೂ ಹೆಚ್ಚು ನಾಗರಿಕರಿಗೆ ಇ-ಖಾತಾ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕೆಬಿಜಿ ಸ್ವಯಂಸೇವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಜಕ್ಕೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಇ-ಖಾತಾ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಸ್ತಿ ನೋಂದಣಿಯನ್ನು ಸರಳಗೊಳಿಸಲು ಹಾಗೂ ಅಕ್ರಮ ಮತ್ತು ಮೋಸದ ವ್ಯವಹಾರಗಳನ್ನು ತಡೆಗಟ್ಟುವ ಉದ್ದೇಶದಿಂದ ಇ-ಖಾತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ನಾಗರಿಕರು ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಂಡು ಆದಷ್ಟು ಬೇಗನೆ ಇ-ಖಾತಾ ಪಡೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಗರ ಸ್ಥಳೀಯಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯಿದೆ ಮತ್ತು ನಿಯಮಗಳನ್ನು ಸರಳೀಕೃತಗೊಳಿಸಲಾಗಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ಕಂದಾಯ ಇಲಾಖೆಯ ಕೆಲಸಗಳು ಸುಲಭವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಇ-ಖಾತಾ ಅಭಿಯಾನ ಏರ್ಪಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ನಿವೇಶನ, ವಾಸದಮನೆ, ಆಸ್ತಿ ಹೊಂದಿರುವವರು ಯಾವುದೇ ಖರ್ಚಿಲ್ಲದೆ ಶೀಘ್ರವಾಗಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಕಾಂಗ್ರೆಸ್ ಮುಖಂಡರಾದ ಎಚ್.ಎ.ಶಿವಕುಮಾರ್, ಜಿ.ಆಂಜಿನಪ್ಪ, ಕೃಷ್ಣಪ್ಪ, ವಿನೋದ್‌ಕುಮಾರ್ ವ್ಯಾಸ, ಇ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.