ಬೆಂಗಳೂರು: ರಸ್ತೆಯ ಬದಿ ಹಾಗೂ ಮನೆಗಳ ಎದುರು ನಿಲುಗಡೆ ಮಾಡುತ್ತಿದ್ದ ವಿವಿಧ ಮಾದರಿಯ ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಬೇಗೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಬ್ಯಾವರ ತಾಲ್ಲೂಕಿನ ಕೋಟಾಡ ಗ್ರಾಮದ ಸುರೇಂದ್ರ ಕುಮಾರ್(33), ರಾಮನಗರದ ಶೆಟ್ಟಿಹಳ್ಳಿಯ ತೌಸೀಫ್ (30) ಹಾಗೂ ರಾಮನಗರದ ಶೆಟ್ಟಿಹಳ್ಳಿ ಬೀದಿ ಎರಡನೇ ಅಡ್ಡರಸ್ತೆಯ ಆರೀಫ್ ಉಲ್ಲಾ ಖಾನ್(50) ಬಂಧಿತರು. ಬಂಧಿತರಿಂದ ವಿವಿಧ ಮಾದರಿಯ 24 ವಾಹನಗಳ ಬ್ಯಾಟರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಬೆಂಗಳೂರಿನ ಶಾನುಬೋಗನಹಳ್ಳಿ ಕೋಳಿ ಫಾರಂ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ಮೂವರು ನೆಲಸಿದ್ದರು. ಮೂವರು ಸೇರಿಕೊಂಡು ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ವಾಹನಗಳ ಬ್ಯಾಟರಿಗಳನ್ನು ಬಿಚ್ಚಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
‘ಬೇಗೂರು ಮುಖ್ಯ ರಸ್ತೆಯ ಝಡಿಯೊ ಸ್ಟೋರ್‌ನ ನೆಲ ಮಹಡಿಯಲ್ಲಿದ್ದ ಎರಡು ಬ್ಯಾಟರಿಗಳ ಕಳ್ಳತನ ನಡೆದಿತ್ತು. ಸ್ಟೋರ್‌ನ ವ್ಯವಸ್ಥಾಪಕ ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಬೇಗೂರು ಕೊಪ್ಪ ರಸ್ತೆಯಲ್ಲಿ ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬ ಓಡಾಟ ನಡೆಸುತ್ತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಜತೆಗೂಡಿ ಬ್ಯಾಟರಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿ ಸುರೇಂದ್ರಕುಮಾರ್ ವಿರುದ್ಧ ಬೆಂಗಳೂರು ನಗರದ ಬ್ಯಾಟರಾಯನಪುರ, ಮಂಗಳೂರಿನ ಉರ್ವ, ತುಮಕೂರು ಜಿಲ್ಲೆಯ ತುರುವೇಕೆರೆ ಹಾಗೂ ತೌಸೀಫ್ ವಿರುದ್ದ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಕಾಟನ್‌ಪೇಟೆ, ಜಯನಗರ, ಕಲಾಸಿಪಾಳ್ಯ, ಕೆ.ಪಿ.ಅಗ್ರಹಾರ, ಉಪ್ಪಾರಪೇಟೆ, ಮೈಸೂರು ಜಿಲ್ಲೆಯ ನರಸಿಂಹರಾಜ ಸೇರಿ ರಾಜ್ಯದ ವಿವಿಧೆಡೆ 18 ಪ್ರಕರಣಗಳು ದಾಖಲಾಗಿದ್ದವು. ಆರೀಫ್ ಉಲ್ಲಾ ಖಾನ್ ವಿರುದ್ಧ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ, ಮಂಗಳೂರು ನಗರದ ಉರ್ವ, ಬೆಂಗಳೂರಿನ ಕಬ್ಬನ್‌ಪಾರ್ಕ್, ಕೊಡಗು ಜಿಲ್ಲೆಯ ಕುಶಾಲನಗರ, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ, ಬ್ಯಾಟರಿ ಕಳ್ಳತನ, ಡಕಾಯಿತಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.
‘ಕೊಪ್ಪಳ ಹಾಗೂ ಹರಪನಹಳ್ಳಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೀಫ್ ಉಲ್ಲಾ ಖಾನ್ ಜೈಲಿಗೆ ಹೋಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಅದೇ ಕೃತ್ಯ ಎಸಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.