ADVERTISEMENT

ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ: ಆಯುಕ್ತ ಎಚ್ಚರಿಕೆ

ಅಧಿವೇಶನಕ್ಕೇ ಮಾಹಿತಿ ನೀಡದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 20:07 IST
Last Updated 1 ಮಾರ್ಚ್ 2020, 20:07 IST

ಬೆಂಗಳೂರು: ವಿಧಾನಸಭೆಯಲ್ಲಿ ನಿಯಮ 69ರಡಿ ಶಾಸಕರು ಕೇಳಿದ ಪ್ರಶ್ನೆಗೆ ಉತ್ತರ ನೀಡದ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ಮುಂದಿನ ದಿನಗಳಲ್ಲಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಜೆಡಿಎಸ್‌ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ಕೆ.ಶ್ರೀನಿವಾಸಗೌಡ, ಕೆ.ಎಂ.ಶಿವಲಿಂಗೇಗೌಡ ಹಾಗೂ ಇತರರು ನಿಯಮ 69ರಡಿ ಚರ್ಚೆಗೆ ಅವಕಾಶ ಕೋರಿದ್ದರು.ಈ ಸಂಬಂಧ ಪೂರಕ ಮಾಹಿತಿಗಳನ್ನು ನಿಗದಿತ ಸಮಯದೊಳಗೆ ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿತ್ತು. ಆದರೆ, ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. ಬಿಬಿಎಂಪಿ ಪ್ರಧಾನ ಮುಖ್ಯ ಎಂಜಿನಿಯರ್‌, ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ ಹಾಗೂ ಮುಖ್ಯ ಎಂಜಿನಿಯರ್‌ಗಳ (ಕೆರೆ, ಯೋಜನೆ, ರಾಜಕಾಲುವೆ) ಧೋರಣೆಗೆ ನಗರಾಭಿವೃದ್ಧಿ ಇಲಾಖೆ ಅಸಮಾಧಾನ ವ್ಯಕ್ತಪಡಿಸಿತ್ತು.

ಅಧಿವೇಶನದಲ್ಲಿ ಮಂಡಿಸಲ್ಪಡುವ ಗಮನ ಸೆಳೆಯುವ ಸೂಚನೆಗಳು ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ನೋಡಲ್‌ ಅಧಿಕಾರಿಗಳು ವಿಶೇಷ ಆಯುಕ್ತರ ಮೂಲಕ ಮಾಹಿತಿ ನೀಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.