ADVERTISEMENT

ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರ: ತನಿಖೆ ಆರಂಭ

ನಕ್ಷೆ ಉಲ್ಲಂಘನೆ: ಖೊಟ್ಟಿ ಪ್ರಮಾಣ ಪತ್ರದಿಂದ ತೇಪೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 19:18 IST
Last Updated 26 ಮೇ 2019, 19:18 IST

ಬೆಂಗಳೂರು: ಬಿಬಿಎಂಪಿ ನೀಡುವ ಮಾದರಿಯಲ್ಲೇ ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರ ವಿತರಣೆ ಮಾಡುವ ದಂಧೆ ನಡೆಯುತ್ತಿರುವ ದೂರು ಆಧರಿಸಿ ನಗರಾಭಿವೃದ್ಧಿ ಇಲಾಖೆ ತನಿಖೆ ಆರಂಭಿಸಿದೆ.

ಕಟ್ಟಡ ನಿರ್ಮಾಣಕ್ಕೂ ಮೊದಲು ಅದರ ನೀಲನಕ್ಷೆ ಸಿದ್ಧಪಡಿಸಿ ಬಿಬಿಎಂಪಿಯಿಂದ ಅನುಮೋದನೆ ಪಡೆಯುವುದು ಕೆಎಂಸಿ ಕಾಯ್ದೆಯ ನಿಯಮಾವಳಿ ಪ್ರಕಾರ ಕಡ್ಡಾಯ.ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಪರಿಶೀಲಿಸಿ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಬೇಕು. ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಹಾಗೂ ಇತರ ಸೌಕರ್ಯ ಪಡೆಯಲು ಈ ಪ್ರಮಾಣ ಪತ್ರ ಬೇಕೇಬೇಕು.

ಆದರೆ,ಬಿಬಿಎಂಪಿ ಮಂಜೂರು ಮಾಡಿದ ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದವರು, ಆ ತಪ್ಪನ್ನು ಮರೆಮಾಚಲು ನಕಲಿ ಪ್ರಮಾಣ ಪತ್ರದ ಮೊರೆ ಹೋಗುತ್ತಾರೆ.

ADVERTISEMENT

ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಭ್ರಷ್ಟಾಚಾರ ನಿರ್ಮೂಲನೆ ಮತ್ತು ಭೂ ರಕ್ಷಣಾ ಸಮಿತಿ ಅಧ್ಯಕ್ಷ ಆರ್. ರಮೇಶ್ ಅವರುಬಿಬಿಎಂಪಿ ಮತ್ತು ಬೆಸ್ಕಾಂನಿಂದ ಪಡೆದುಕೊಂಡಿದ್ದಾರೆ. ಸ್ವಾಧೀನಾನುಭವ ಪತ್ರ ನೀಡಿಲ್ಲ ಎಂದು ಬಿಬಿಎಂಪಿ ಹಿಂಬರಹ ನೀಡಿದ್ದರೆ, ಮಾಲೀಕರು ನೀಡಿರುವ ಪ್ರಮಾಣ ಪತ್ರಗಳ ಪ್ರತಿಯನ್ನು ಬೆಸ್ಕಾಂ ಒದಗಿಸಿದೆ.

‘ಇದನ್ನು ಗಮನಿಸಿದರೆ ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ತಯಾರಿಸಿಕೊಡುವ ಜಾಲವೇ ಇರುವುದು ಗೊತ್ತಾಗುತ್ತದೆ. ಇದಕ್ಕಾಗಿ ಏಜೆಂಟರುಗಳೂ ಇದ್ದಾರೆ, ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಪ್ರತಿ ಪ್ರಮಾಣಪತ್ರಕ್ಕೆ ₹2ರಿಂದ ₹3 ಲಕ್ಷ ನಡೆಯುತ್ತಿದೆ’ ಎಂದು ರಮೇಶ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ದೂರು ನೀಡಿದ್ದರು.

ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಕಾರ್ಯದರ್ಶಿ ಅವರು, ತನಿಖೆ ನಡೆಸಲು ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಬಿಬಿಎಂಪಿ ಮಹದೇವಪುರ ವಲಯ ಅಧಿಕಾರಿಗಳು ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ನೋಟಿಸ್ ನೀಡಿರುವ ನಗರಾಭಿವೃದ್ಧಿ ಇಲಾಖೆ, ವಿಚಾರಣೆ ಆರಂಭಿಸಿದೆ. ಈ ದಂಧೆ ಬಗ್ಗೆ ಏಪ್ರಿಲ್ 27ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.