ADVERTISEMENT

ಕರಗಲೇ ಇಲ್ಲ ಹೂಳು, ಕರಗಿತು ಹಣ!

ರಾಜಕಾಲುವೆಗಳಿಂದ 2.3 ಲಕ್ಷ ಟನ್‌ ಹೂಳು ಎತ್ತಲಾಗಿದೆ: ಬಿಬಿಎಂಪಿ ಅಧಿಕಾರಿಗಳ ಮಾಹಿತಿ

ಗುರು ಪಿ.ಎಸ್‌
Published 13 ಜೂನ್ 2019, 19:46 IST
Last Updated 13 ಜೂನ್ 2019, 19:46 IST
ಟಿ.ದಾಸರಹಳ್ಳಿಯ ರುಕ್ಮಿಣಿನಗರದಲ್ಲಿ ಚರಂಡಿಯ ಹೂಳನ್ನು ಎತ್ತಿ ದಡದಲ್ಲೇ ರಾಶಿ ಹಾಕಿರುವುದು–ಪ್ರಜಾವಾಣಿ ಚಿತ್ರ
ಟಿ.ದಾಸರಹಳ್ಳಿಯ ರುಕ್ಮಿಣಿನಗರದಲ್ಲಿ ಚರಂಡಿಯ ಹೂಳನ್ನು ಎತ್ತಿ ದಡದಲ್ಲೇ ರಾಶಿ ಹಾಕಿರುವುದು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಾನಗರದಲ್ಲಿ ಕಳೆದ ಬಾರಿ ಮಳೆ ಸುರಿದಾಗ ಪ್ರವಾಹ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣ ಹೂಳು ತುಂಬಿದ್ದ ರಾಜಕಾಲುವೆಗಳು. ಈ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದುಹೋಗದ ಪರಿಣಾಮ ಜನ ಸಂಕಷ್ಟ ಎದುರಿಸಬೇಕಾಯಿತು. ಮಳೆಗೂ ಮುನ್ನವೇ ಈ ಬಾರಿ ಹೂಳೆತ್ತಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬುದು ರಾಜಕಾಲುವೆಗಳ ಆಸುಪಾಸಿನ ನಿವಾಸಿಗಳ ದೂರು.

‘ರಾಜಕಾಲುವೆ ಅಥವಾ ಕೆರೆಗಳ ಹೂಳೆತ್ತುವ ಕಾರ್ಯದ ಗುತ್ತಿಗೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ನೀಡಬೇಕು. ಅವರಿಗೆ ಈ ವಿಚಾರದಲ್ಲಿ ಹೆಚ್ಚು ತಿಳಿವಳಿಕೆ ಇರುತ್ತದೆ. ಆದರೆ, ರಸ್ತೆ ಮಾಡುವವರು, ಫುಟ್‌ಪಾತ್‌ ನಿರ್ಮಿಸುವಂತಹ ಕಂಟ್ರಾಕ್ಟರ್‌ಗಳಿಗೆ ಇದರ ಗುತ್ತಿಗೆ ನೀಡಲಾಗಿದೆ. ಹೀಗಾಗಿ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ದೂರುತ್ತಾರೆ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್.

‘ರಾಜಕಾಲುವೆಗಳಿಂದ ತೆಗೆದ ಹೂಳನ್ನು ಎಲ್ಲಿ ಹಾಕಲಾಗುತ್ತಿದೆ ಎಂಬ ಮಾಹಿತಿಯೂ ಇಲ್ಲ. ಹೂಳನ್ನು ಕ್ವಾರಿಯಲ್ಲಿ ಸುರಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಅಲ್ಲದೆ, ಸ್ಥಳೀಯರ ಅನುಮತಿಯನ್ನೂ ಪಡೆಯಬೇಕು. ಈ ಅಂಶಗಳನ್ನು ಪಾಲಿಸದೆಯೇ 2.3 ಲಕ್ಷ ಟನ್‌ ಹೂಳನ್ನು ಕಾಲುವೆಗಳಿಂದ ಎತ್ತಿ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವ ಗಮನಿಸಿದರೆ, ಇಷ್ಟು ಹೂಳು ವಿಲೇವಾರಿ ಆಗಿಲ್ಲದಿರುವುದು ಗಮನಕ್ಕೆ ಬರುತ್ತದೆ’ ಎಂದು ಅವರು ಹೇಳುತ್ತಾರೆ.

ADVERTISEMENT

ವಾರ್ಷಿಕ ನಿರ್ವಹಣಾ ಕೇಂದ್ರ:ಹೂಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗಿದೆ. ಜೋರು ಮಳೆಯಾದರೂ, ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಎಲ್ಲ ವಲಯಗಳಲ್ಲಿಯೂ ಪ್ರತಿದಿನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈಗಾಗಲೇ 11,700ಕ್ಕೂ ಹೆಚ್ಚು ಟ್ರಕ್‌ ಲೋಡ್‌ಗಳಷ್ಟು ಹೂಳನ್ನು ಹೊರತೆಗೆಯಲಾಗಿದೆ. ಇದಕ್ಕಾಗಿಯೇ ವಾರ್ಷಿಕ ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ಕಳೆದ ಬಾರಿ ನಾಯಂಡಹಳ್ಳಿ, ಓಕಳಿಪುರ ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಬಾರಿ ಈ ಪ್ರದೇಶಗಳಲ್ಲಿ ಅಂತಹ ಸಮಸ್ಯೆಯಾಗಿಲ್ಲ’ ಎಂದು ಅವರು ತಿಳಿಸಿದರು.

‘ಮಡಿವಾಳ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಅಗರಕೆರೆ, ಜಕ್ಕಸಂದ್ರದಲ್ಲಿಯೂ ಹೂಳು ತೆಗೆಯಲಾಗಿದೆ. ಆದರೆ, ಜನ ಮತ್ತೆ ಕಸ ಸುರಿಯುತ್ತಿರುವುದರಿಂದ ಸಮಸ್ಯೆಯಾಗಿದೆ’ ಎಂದು ಅವರು ಹೇಳಿದರು.

‘ಮಹಾನಗರದ ಉತ್ತರ ಭಾಗದ ಹೂಳು ಅಥವಾ ತ್ಯಾಜ್ಯವನ್ನು ಯಲಹಂಕದ ಬೆಟ್ಟಹಲಸೂರು ಪ್ರದೇಶದಲ್ಲಿ ಹಾಕಲಾಗುತ್ತಿದೆ. ಬೆಲ್ಲಹಳ್ಳಿ ಕ್ವಾರಿಯಲ್ಲಿ ಪ್ಲಾಸ್ಟಿಕ್‌, ಕಸ, ಬಟ್ಟೆ ಮುಂತಾದ ಘನತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ದಕ್ಷಿಣ ಭಾಗದಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಅಂಜನಾಪುರ ಕ್ವಾರಿಗೆ ಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದರು.

‘ತೆಗೆದ ಹೂಳು ರಾಮನಗರ ಬೆಟ್ಟದಂತಾಗಬೇಕಿತ್ತು’
‘135 ದಿನಗಳಲ್ಲಿ 11,733 ಟ್ರಕ್ ಲೋಡ್‌ಗಳಷ್ಟು ಅಂದರೆ, 2.3 ಲಕ್ಷ ಟನ್‌ಗಳಷ್ಟು ಹೂಳನ್ನು ತೆಗೆದು ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂದರೆ, ಈ ಹೂಳನ್ನು ಹಾಕಿದ ಪ್ರದೇಶ ರಾಮನಗರ ಬೆಟ್ಟದಂತೆ ಕಾಣಬೇಕು. ಆದರೆ, ಇಷ್ಟು ಹೂಳು ಎಲ್ಲಿಯೂ ಕಾಣುತ್ತಿಲ್ಲ’ ಎನ್ನುತ್ತಾರೆ ಅಮರೇಶ್‌.

‘135 ದಿನಗಳಲ್ಲಿ ಇಷ್ಟು ಪ್ರಮಾಣದ ಹೂಳು ತೆಗೆದಿರಬೇಕೆಂದರೆ, ಪ್ರತಿ ದಿನ 85 ಲೋಡ್‌ ಸಾಗಿಸಬೇಕು. ಬೆಂಗಳೂರಿನಲ್ಲಿ ಇಷ್ಟು ಟಿಪ್ಪರ್‌ಗಳು ಇಲ್ಲ. ಇದ್ದರೂ, ಇಷ್ಟು ಹೂಳು ಸಾಗಣೆಯಾಗಿದ್ದರೆ ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಆದರೆ, ಇದು ಯಾರ ಗಮನಕ್ಕೂ ಬಂದಿಲ್ಲ. ರಾಜಕಾಲುವೆಗಳ ನಿರ್ವಹಣೆಗೆಂದೇ ₹38 ಕೋಟಿಯನ್ನು ವ್ಯಯಿಸಲಾಗಿದೆ’ ಎಂದರು.

ಹೂಳು ತೆಗೆಯುವ ಕಾರ್ಯದಲ್ಲಿ ಖಂಡಿತಾ ಅವ್ಯವಹಾರವಾಗಿದೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಅವರು ದೂರು ನೀಡಿದ್ದಾರೆ.

‘ಹೂಳೆತ್ತುವ ಕಾರ್ಯದ ಗುತ್ತಿಗೆ ಪಡೆದವರು, ಪ್ರತಿಯೊಂದು ವಲಯಕ್ಕೂ ಸುಮಾರು 800 ಕಾರ್ಮಿಕರನ್ನು ಒದಗಿಸಿ ಕೆಲಸ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದರೆ, ಒಟ್ಟು 8 ವಲಯಗಳಿಂದ 6,400 ಮಂದಿ ಈ ಕಾರ್ಯ ನಿರ್ವಹಿಸಿದಂತಾಗುತ್ತದೆ. ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು’ ಎಂದು ಅವರು ಒತ್ತಾಯಿಸಿದರು.
ಜಿಯೊ ಸ್ಟ್ಯಾಂಪ್‌–ಸೆನ್ಸರ್‌ ನೆರವು

ಮಳೆ ಹಾನಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕಾರಿಗಳು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

‘ಮಳೆ ಹಾನಿ ಪರಿಹಾರ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ಒಂದನ್ನು ರಚಿಸಲಾಗಿದೆ. ಜಿಯೊ ಸ್ಟ್ಯಾಂಪ್‌ ಆ್ಯಪ್‌ ಮೂಲಕ ಫೋಟೊ ತೆಗೆದು ಈ ಗ್ರೂಪ್‌ನಲ್ಲಿ ಹಾಕಲಾಗುತ್ತಿದೆ. ಈ ಆ್ಯಪ್‌ ಮೂಲಕ ತೆಗೆದ ಫೋಟೊದಲ್ಲಿ ಸ್ಥಳದ ಮಾಹಿತಿ, ಸಮಯ ಎಲ್ಲವೂ ದಾಖಲಾಗುತ್ತಿದೆ. ಯಾವ ಮೋರಿ ಮೊದಲು ಹೇಗಿತ್ತು, ಹೂಳು ಎತ್ತಿದ ಮೇಲೆ ಹೇಗಾಗಿದೆ ಎಂಬ ಚಿತ್ರಣ ಇದರಲ್ಲಿ ಸಿಗುತ್ತದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಹೇಳಿದರು.

ಸೆನ್ಸರ್‌ ಅಳವಡಿಕೆ:‘ನಗರದ ನಾಲ್ಕು ದಿಕ್ಕುಗಳಲ್ಲಿ ಸೆನ್ಸರ್‌ ಅಳವಡಿಸಿ, ಮೊಬೈಲ್‌ ಫೋನ್‌ಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ನಗರದ ದಕ್ಷಿಣ ಭಾಗದಲ್ಲಿ ಮಳೆ ಬಂದಾಗ, ಉತ್ತರದಲ್ಲಿ ಇರುವುದಿಲ್ಲ. ಅದೇ ರೀತಿ, ಪೂರ್ವ ಭಾಗದಲ್ಲಿ ಮಳೆ ಇರದಿದ್ದರೂ, ಪಶ್ಚಿಮದಲ್ಲಿ ಸುರಿಯುತ್ತಿರುತ್ತದೆ. ಈ ಸೆನ್ಸರ್‌ಗಳನ್ನು ಅಳವಡಿಸುವುದರಿಂದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಮೊಬೈಲ್‌ಗೆ ರವಾನೆಯಾಗುತ್ತದೆ. ಒಂದೊಂದು ವಲಯದಲ್ಲಿ 10 ಕಾರ್ಮಿಕರನ್ನು ನಿಯೋಜಿಸುವ ಬದಲು, ಯಾವ ಭಾಗದಲ್ಲಿ ಮಳೆ ಬರುತ್ತದೆಯೋ ಎಲ್ಲರನ್ನೂ ಅಲ್ಲಿಗೇ ಕಳುಹಿಸಿದರೆ ಪರಿಹಾರ ಕಾರ್ಯ ಸುಲಭವಾಗುತ್ತದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.