ADVERTISEMENT

ಪರಿಷತ್‌ಗೆ ಬುಲೇವಾರ್ಡ್‌ ಜಾಗ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:25 IST
Last Updated 9 ಜುಲೈ 2019, 19:25 IST
ನ್ಯಾಷನಲ್‌ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಜಾಗ
ನ್ಯಾಷನಲ್‌ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಜಾಗ   

ಬೆಂಗಳೂರು: ಸುಂಕೇನಹಳ್ಳಿ ವಾರ್ಡ್‌ನಲ್ಲಿ ನ್ಯಾಷನಲ್‌ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನೀಡುವ ಪ್ರಸ್ತಾವಕ್ಕೆ ಸ್ಥಳೀಯರು ಆಕ್ಷೆಪ ವ್ಯಕ್ತಪಡಿಸಿದ್ದಾರೆ.

ಕೆ.ಆರ್‌.ರಸ್ತೆ ಪಕ್ಕದಲ್ಲಿರುವ 142 x47 ಅಡಿ ಜಾಗವನ್ನು ನೀಡುವಂತೆ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕವು ಎರಡು ವರ್ಷಗಳ ಹಿಂದೆ ಪಾಲಿಕೆಯನ್ನು ಕೋರಿತ್ತು. ಸಾಹಿತ್ಯ ಪರಿಷತ್‌ನ ಕಚೇರಿ ನಿರ್ಮಾಣಕ್ಕೆ ಈ ಜಾಗವನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡುವಂತೆ ಜಿಲ್ಲಾ ಘಟಕವು ವಿನಂತಿಸಿತ್ತು. ಬಿಬಿಎಂಪಿಯಲ್ಲಿ ಬುಧವಾರ ನಡೆಯುವ ಕೌನ್ಸಿಲ್‌ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಈ ವಿಚಾರ ಇದೆ. ಈ ಪ್ರಸ್ತಾವವನ್ನು ಕೈಬಿಡಬೇಕು ಎಂದು ಮೇಯರ್‌ ಗಂಗಾಂಬಿಕೆ ಅವರಿಗೆ ಶಂಕರಪುರದ ನಾಗರಿಕರು ಹಾಗೂ ಆಟಗಾರರು ಮನವಿ ಮಾಡಿದ್ದಾರೆ.

ಇದು ಪಾಲಿಕೆಯ ಬುಲೇವಾರ್ಡ್‌ ಜಾಗ. ಇಲ್ಲಿ ಈ ಹಿಂದೆ ಸಾಕಷ್ಟು ಮರಗಳಿದ್ದವು. ಮೆಟ್ರೊ ಕಾಮಗಾರಿ ಸಲುವಾಗಿ ಈ ಜಾಗವನ್ನು ಬಿಟ್ಟುಕೊಡಲಾಗಿತ್ತು. ಅಲ್ಲಿ ಮತ್ತೆ ಬುಲೇವಾರ್ಡ್‌ ನಿರ್ಮಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ADVERTISEMENT

‘ಇಲ್ಲಿ ಜಲಮಂಡಳಿ ಕಚೇರಿಯಿಂದ ಮಹಿಳಾ ಸಮಾಜ ಶಾಲೆಯವರೆಗೂ ಉದ್ಯಾನ ಇತ್ತು. ಮೆಟ್ರೊ ನಿಲ್ದಾಣಕ್ಕಾಗಿ ಸಾಕಷ್ಟು ಮರಗಳನ್ನು
ಕಳೆದುಕೊಂಡಿದ್ದೇವೆ. ಬುಲೇವಾರ್ಡ್‌ನ ಜಾಗದಲ್ಲಿ ಮತ್ತೆ ಗಿಡ ನೆಟ್ಟು, ಮರ ಬೆಳೆಸಬೇಕು. ಕಟ್ಟಡ ನಿರ್ಮಿಸುವುದಕ್ಕೆ ಈ ಜಾಗವನ್ನು ಬಳಸುವುದು ಒಳ್ಳೆಯದಲ್ಲ. ಈ ಪರಿಸರದಲ್ಲಿ ಇನ್ನಷ್ಟು ಕಟ್ಟಡಗಳು ಬರುವುದು ಬೇಡ’ ಎಂದು ಸ್ಥಳೀಯ ನಿವಾಸಿ ಮುರಳಿ ತಿಳಿಸಿದರು.

‘ಈ ಬುಲೇವಾರ್ಡ್‌ನಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಬೆಳೆಸಬೇಕು. ಮಾತ್ರವಲ್ಲ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವ್ಯಾಯಾಮ ಪರಿಕರಗಳನ್ನೂ ಈ ಉದ್ಯಾನದಲ್ಲಿ ಅಳವಡಿಸಬೇಕು’ ಎಂದು ಅವರು ಆಗ್ರಹಿಸಿದರು.

ನಗರಾಭಿವೃದ್ಧಿ ಇಲಾಖೆಯು 2011ರಲ್ಲೇ ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಬಯಲು ಪ್ರದೇಶ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ– 1985ರ ಪ್ರಕಾರ ಪಾಲಿಕೆ ವ್ಯಾಪ್ತಿಯ ಉದ್ಯಾನ ಹಾಗೂ ಆಟದ ಮೈದಾನಗಳನ್ನು ಗುರುತಿಸಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಉದ್ಯಾನಗಳ ಪಟ್ಟಿಯಲ್ಲಿ ಕೆ.ಆರ್‌.ರಸ್ತೆ ಪಕ್ಕದ ಬುಲೇವಾ‌ರ್ಡ್‌ಗಳೂ ಸೇರಿವೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಉದ್ಯಾನ ಎಂದು ಗುರುತಿಸಿದ ಜಾಗವನ್ನು ಮಾರಾಟ ಮಾಡುವುದು, ಉಡುಗೊರೆ ನೀಡುವುದು, ಅಡಮಾನ ಇಡುವುದು, ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡುವುದಕ್ಕೆ ಅವಕಾಶವಿಲ್ಲ. ಇಲ್ಲಿ ಕಟ್ಟಡ ಕಟ್ಟುವುದಕ್ಕೆ ಅನುಮತಿಯನ್ನೂ ನೀಡುವಂತಿಲ್ಲ. ಒಂದು ವೇಳೆ ಅನುಮತಿ ನೀಡಿದರೂ ಅದು ಅನೂರ್ಜಿತವಾಗುತ್ತದೆ ಎಂದು ಅವರು ತಿಳಿಸಿದರು.

* ಒಂದು ವೇಳೆ ಈ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿದರೆ ಪಾಲಿಕೆಯ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ.

ಮುರಳಿ,ಶಂಕರಪುರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.