ADVERTISEMENT

ಬಿಬಿಎಂಪಿ: ಐದು ವಲಯದಲ್ಲಿ 6 ಲಕ್ಷ ಮರ ಗಣತಿ

ಆರ್. ಮಂಜುನಾಥ್
Published 29 ಏಪ್ರಿಲ್ 2025, 0:23 IST
Last Updated 29 ಏಪ್ರಿಲ್ 2025, 0:23 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಐದು ವಲಯಗಳಲ್ಲಿ ಆರು ಲಕ್ಷ ಗಿಡ–ಮರಗಳ ಗಣತಿಯಾಗಿದ್ದು, ಇನ್ನೂ ಮೂರು ವಲಯಗಳಲ್ಲಿ ಹೊಸದಾಗಿ ಆರಂಭವಾಗಬೇಕಿದೆ.

ಒಂದು ವರ್ಷದ ಮುನ್ನವೇ ಮುಗಿಯಬೇಕಿದ್ದ ಗಿಡ–ಮರಗಳ ಗಣತಿ ಕಾರ್ಯ ಐದು ವಲಯಗಳಲ್ಲಿ ಪ್ರಗತಿಯಲ್ಲಿದೆ. ಇನ್ನೂ ಮೂರು ವಲಯಗಳಲ್ಲಿ ಹೊಸದಾಗಿ ಟೆಂಡರ್‌ ಆಹ್ವಾನಿಸಲಾಗಿದ್ದು, ಅದರ ನಂತರ ಪ್ರಕ್ರಿಯೆ ಆರಂಭವಾಗಬೇಕಿದೆ.

ಬೆಂಗಳೂರಿನಲ್ಲಿರುವ ಮರಗಳ ಗಣತಿ ಮಾಡಿ, ಅದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮೂರು ತಿಂಗಳಲ್ಲಿ ಗಣತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಹೈಕೋರ್ಟ್‌ 2019ರಲ್ಲಿ ಬಿಬಿಎಂಪಿಗೆ ಸೂಚಿಸಿತ್ತು. ಆದರೆ, ಗಣತಿ ಇನ್ನೂ ಮುಗಿದಿಲ್ಲ.

ADVERTISEMENT

2023ರ ಅಕ್ಟೋಬರ್‌ನಲ್ಲಿ ಎಂಟು ವಲಯಗಳಲ್ಲಿ ಗಿಡ–ಮರ ಗಣತಿ ಕಾರ್ಯ ಆರಂಭವಾಗಿತ್ತು. 2024ರ ಮಾರ್ಚ್‌ ಅಂತ್ಯಕ್ಕೆ ಮುಗಿಯಬೇಕಿದ್ದ ಗಣತಿ ಕಾರ್ಯ ಆರಂಭವಾದಾಗಿನಿಂದ ಒಂದು ವರ್ಷ ನಿಧಾನಗತಿಯಲ್ಲಿತ್ತು.  2024ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಸಿದ್ಧಪಡಿಸಿದ ಮೊಬೈಲ್‌ ಆ್ಯಪ್‌ನಿಂದ ವೇಗ ದೊರೆಯಿತು. ಇಷ್ಟಾದರೂ, ಮಹದೇವಪುರ, ದಾಸರಹಳ್ಳಿ, ಪೂರ್ವ ವಲಯದಲ್ಲಿ ಟೆಂಡರ್ ಪಡೆದ ಗುತ್ತಿಗೆದಾರರ ವೈಫಲ್ಯದಿಂದ ಗಣತಿ ನಡೆದಿಲ್ಲ. ಹೀಗಾಗಿ, ಈ ಮೂರು ವಲಯಗಳಲ್ಲಿ ಗಣತಿಗೆ ಹೊಸದಾಗಿ ಟೆಂಡರ್‌ ಕರೆಯಲಾಗಿದೆ. 

ನಗರದಲ್ಲಿ ನಡೆಸಲಾಗಿರುವ ಗಿಡ–ಮರಗಳ ಗಣತಿಯ ವಿವರಗಳನ್ನು ತಿಳಿಯಲು ನಾಗರಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಗಿಡ– ಮರದ ವಯಸ್ಸು, ಅದರ ಜಾತಿ, ಹೆಸರು– ಜೈವಿಕ ಹೆಸರು, ಅದರ ಸುತ್ತಳತೆ ಸೇರಿದಂತೆ ಮರದ ಮಾಹಿತಿಗಳನ್ನು ಪಡೆಯಲು ಪ್ರಾಯೋಗಿಕವಾಗಿ https://kgis.ksrsac.in/test/ನಲ್ಲಿ ಪ್ರಕಟಿಸಲಾಗಿದೆ. 

ಮರದ ಚಿತ್ರದೊಂದಿಗೆ ಅದರ ಮಾಹಿತಿಯನ್ನು ವಾರ್ಡ್‌ವಾರು ಪಡೆಯ ಬಹುದು. ವಿಸ್ತಾರವಾದ ನಕ್ಷೆಯಲ್ಲಿ ವಾರ್ಡ್‌ ಆಯ್ಕೆ ಮಾಡಿಕೊಂಡು, ಅಡ್ಡ ರಸ್ತೆ ಅಥವಾ ಮುಖ್ಯ ರಸ್ತೆಯಲ್ಲಿ ಗುರು ತಿಸಲಾದ ಮರದ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ಅದರ ಮಾಹಿತಿ ಸಿಗುತ್ತದೆ. ಪ್ರತಿಯೊಂದು ಮರಕ್ಕೂ ವಾರ್ಡ್‌ ಹೆಸರು ಹಾಗೂ ಸಂಖ್ಯೆಗಳನ್ನು ನೀಡಲಾಗಿದೆ.

‘ವೆಬ್‌ಸೈಟ್‌ ಪ್ರಾಯೋಗಿಕ ಹಂತ ದಲ್ಲಿದ್ದು ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಅದ್ದರಿಂದ ನಾಗರಿಕರು ಸಲಹೆಗಳನ್ನು ಕಳುಹಿಸ ಬಹುದು. ಇದೀಗ ಇಂಗ್ಲಿಷ್‌ನಲ್ಲಿ ಮಾತ್ರ ಮಾಹಿತಿ ಲಭ್ಯವಿದೆ. ಅಂತಿಮವಾಗಿ ವೆಬ್‌ಸೈಟ್‌ ಅಧಿಕೃತವಾಗಿ ಅನಾವರಣವಾಗುವ ಸಂದರ್ಭದಲ್ಲಿ ಕನ್ನಡದಲ್ಲೂ ಮಾಹಿತಿ ಸಿಗಲಿದೆ’ ಎಂದು ಅರಣ್ಯ ವಿಭಾಗದ ಡಿಸಿಎಫ್‌ ಬಿ.ಎಲ್‌.ಜಿ. ಸ್ವಾಮಿ ಹೇಳಿದರು.

5.5 ಸೆಂ.ಮೀ ಸುತ್ತಳತೆ ಅಥವಾ 1 ಮೀಟರ್‌ ಎತ್ತರವಿರುವ ಎಲ್ಲ ಮರ–ಗಿಡಗಳ ಗಣತಿ, ಪ್ರಭೇದದ ಸೇರಿದಂತೆ ಹಲವು ಮಾಹಿತಿ ಸಂಗ್ರಹ ನಡೆಯುತ್ತಿದೆ. ಗಣತಿ ಸಂದರ್ಭದಲ್ಲೇ ಪ್ರತಿ ಮರದ ಮೇಲೆ ಸಂಖ್ಯೆ ನಮೂದಿಸಲಾಗುತ್ತದೆ. ಎಲ್ಲವೂ ಅಂತಿಮವಾದ ಮೇಲೆ, ಮರದ ಚಿತ್ರ, ಅದರ ಸಂಖ್ಯೆ ಜತೆಗೆ ಅದರ ವಯಸ್ಸು, ಪ್ರಭೇದದ ಮಾಹಿತಿಯನ್ನು ಬಾರ್‌ಕೋಡ್‌ನಲ್ಲಿ ಮೂಲಕ ಪಡೆದುಕೊಳ್ಳಬಹುದು. ರಸ್ತೆಯ ಒಂದು ಬದಿ ನಿಂತರೆ ಕಾಣುವ ಮರಗಳಿಗೆ ಸಂಬಂಧಿಸಿದ ಬಾರ್‌ಕೋಡ್‌/ ಕ್ಯೂಆರ್‌ ಕೋಡ್‌ ಫಲಕವನ್ನು ಹಾಕಲಾಗುತ್ತದೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಪ್ರದೇಶದಲ್ಲಿರುವ ಮರಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.

ಮೂರು ತಿಂಗಳಲ್ಲಿ ಪೂರ್ಣ: ಸ್ವಾಮಿ

‘ನಮ್ಮ ಯೋಜನೆಯಂತೆ ಈ ವೇಳೆಗೆ ಗಿಡ–ಮರಗಳ ಗಣತಿ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಮೂರು ವಲಯಗಳಲ್ಲಿ ಗಣತಿ ಗುತ್ತಿಗೆ ಪಡೆದಿದ್ದ ಸಂಸ್ಥೆಗಳು ನಿರೀಕ್ಷಿತ ಪ್ರಮಾಣದಲ್ಲಿ ಗಣತಿ ಕಾರ್ಯ ಕೈಗೊಳ್ಳಲಿಲ್ಲ. ಇವೇ ಸಂಸ್ಥೆಗಳು ಬೇರೆ ವಲಯದಲ್ಲೂ ಗುತ್ತಿಗೆ ಪ‍ಡೆದಿದ್ದವು. ಅಲ್ಲಿ ಪ್ರಗತಿಯಲ್ಲಿ ಗಣತಿ ಕಾರ್ಯ, ಮೂರು ವಲಯದಲ್ಲಿ ಕಾಣಲಿಲ್ಲ. ಹೀಗಾಗಿ ಗುತ್ತಿಗೆಯನ್ನು ರದ್ದುಪಡಿಸಲಾಗಿದ್ದು, ದಾಸರಹಳ್ಳಿ, ಪಶ್ಚಿಮ ಹಾಗೂ ಮಹದೇಪುರ ವಲಯದಲ್ಲಿ ಗಿಡ–ಮರ ಗಣತಿಗೆ ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಎಲ್ಲವನ್ನೂ ಇನ್ನು ಮೂರು ತಿಂಗಳಲ್ಲಿ ಮುಗಿಸಲಾಗು ತ್ತದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್‌ ಬಿ.ಎಲ್‌.ಜಿ. ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.