ADVERTISEMENT

ಮಳೆ ನಿರ್ವಹಣೆ– ಬಿಬಿಎಂಪಿ ವಲಯಕ್ಕೊಬ್ಬ ಮೇಲ್ವಿಚಾರಕರ ನೇಮಕ: ತುಷಾರ್‌ ಸೂಚನೆ

ಮಳೆಗಾಲದಲ್ಲಿ ವಿಪತ್ತು ನಿಯಂತ್ರಣ– ಇಲಾಖೆಗಳ ನಡುವೆ ಸಮನ್ವಯವಿರಲಿ: ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 17 ಮೇ 2022, 14:39 IST
Last Updated 17 ಮೇ 2022, 14:39 IST
ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ತಡೆಯಲು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಮಂಗಳವಾರ ನಡೆದ ಸಭೆಯಲ್ಲಿ ತುಷಾರ್‌ ಗಿರಿನಾಥ್‌ ಮಾತನಾಡಿದರು. ಪಿ.ಎನ್‌.ರವೀಂದ್ರ ಇದ್ದಾರೆ
ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ತಡೆಯಲು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಮಂಗಳವಾರ ನಡೆದ ಸಭೆಯಲ್ಲಿ ತುಷಾರ್‌ ಗಿರಿನಾಥ್‌ ಮಾತನಾಡಿದರು. ಪಿ.ಎನ್‌.ರವೀಂದ್ರ ಇದ್ದಾರೆ   

ಬೆಂಗಳೂರು: ಮಳೆಗಾಲದಲ್ಲಿ ಪರಿಸ್ಥಿತಿ ನಿಭಾಯಿಸಲು ರಾಜ್ಯ ವಿಪತ್ತು ಸ್ಪಂದನಾ ದಳದಿಂದ (ಎಸ್‌ಡಿಆರ್‌ಎಫ್‌) ಬಿಬಿಎಂಪಿಯ ಎಂಟೂ ವಲಯಗಳಿಗೂ ಒಬ್ಬೊಬ್ಬ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಆಯಾ ವಲಯದ ಜಂಟಿ ಆಯುಕ್ತರ ಜೊತೆ ಸಮನ್ವಯ ಕಾಪಾಡಿಕೊಂಡು ಅವರು ಕಾರ್ಯನಿರ್ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಎಸ್‌ಡಿಆರ್‌ಎಫ್‌ನ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ನಗರದಲ್ಲಿ ಮಳೆಗಾಲದಲ್ಲಿ ಅನಾಹುತ ಸಂಭವಿಸುವುದನ್ನು ತಪ್ಪಿಸುವ ಕುರಿತು ವರ್ಚುವಲ್‌ ರೂಪದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವಲಯ ಮಟ್ಟದಲ್ಲಿ ಸ್ವಯಂಸೇವಕ ತಂಡಗಳನ್ನು ಗುರುತಿಸಿ ಸಕ್ರಿಯಗೊಳಿಸಬೇಕು ಎಂದು ಸಲಹೆ ನೀಡಿದರು.

‘ನಗರದಲ್ಲಿ ಮಳೆಗಾಲದ ವೇಳೆ ಬಿಬಿಎಂಪಿ, ಎಸ್‌ಡಿಆರ್‌ಎಫ್, ಬೆಸ್ಕಾಂ, ಜಲಮಂಡಳಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಗಾಲದಲ್ಲಿ ಮನೆ ಜಲಾವೃತವಾಗುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ಮರ ಹಾಗೂ ರೆಂಬೆ-ಕೊಂಬೆಗಳು ಉರುಳಿ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಸಂತ್ರಸ್ತರಿಗೆ ತ್ವರಿತ ಸ್ಪಂದನೆ ನೀಡಬೇಕು. ನೆರವು ಒದಗಿಸುವ ಸಿಬ್ಬಂದಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಮಳೆಗೆ ಉರುಳಿ ಬೀಳುವ ಮರಗಳನ್ನು ತೆರವುಗೊಳಿಸಲು ಪಾಲಿಕೆಯ ಅರಣ್ಯ ವಿಭಾಗದಲ್ಲಿ 21 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಹಗಲಿನಲ್ಲಿ 18 ತಂಡಗಳು, ರಾತ್ರಿ ವೇಳೆ 3 ತಂಡಗಳು ಸನ್ನದ್ಧವಾಗಿರುತ್ತವೆ.

‘ರಾತ್ರಿ ವೇಳೆ ಇನ್ನೂ ಹೆಚ್ಚಿನ ತಂಡಗಳು ಕಾರ್ಯ ನಿರ್ವಹಿಸಬೇಕು’ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ಎಸ್‌ಡಿಆರ್‌ಎಫ್‌ ಉಪ ನಿರ್ದೇಶಕ ಸಿ.ಗುರುಲಿಂಗಯ್ಯ, ‘ವಿಪತ್ತು ನಿರ್ವಹಣೆಗಾಗಿ 4 ಬೋಟ್ ಗಳು, 4 ಪೋರ್ಟೆಬಲ್ ಪಂಪ್‌ಗಳು, 44 ಜೀವರಕ್ಷಕ ಕವಚಗಳು, ಸೂಚನಾ ಫಲಕಗಳು, ಫ್ಲಡ್‌ಲೈಟ್ಸ್, ಟಾರ್ಚ್, ಹಗ್ಗಗಳು ಸೇರಿದಂತೆ ಇನ್ನಿತರೆ ಅಗತ್ಯ ಸಲಕರಣೆಗಳನ್ನು ಒದಗಿಸಲಾಗಿದೆ. 20 ಕಡೆ ಅಗ್ನಿ ಶಾಮಕದಳಗಳೂ ಸನ್ನದ್ಧವಾಗಿದ್ದು, 33 ಕಟಾವು ಯಂತ್ರ, 38 ಪಂಪ್‌ಗಳು ಅವರ ಬಳಿ ಇವೆ. 3 ಪಾಳಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.ಪ್ರತಿ ಪಾಳಿಯಲ್ಲಿ 10 ರಿಂದ 12 ಮಂದಿ ಇರಲಿದ್ದಾರೆ. ಜಲಾವೃತ ಪ್ರದೇಶದಿಂದ ನಾಗರಿಕರನ್ನು ರಕ್ಷಿಸಲು ಏಳು ರಕ್ಷಣಾ ವಾಹನಗಳಿವೆ’ ಎಂದು ಮಾಹಿತಿ ನೀಡಿದರು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಪಿ.ಎನ್.ರವೀಂದ್ರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.