ಅಮಾನತು
ಬೆಂಗಳೂರು: ಅಕ್ರಮವಾಗಿ ಬಿ ಖಾತಾ ನೋಂದಣಿ ಮಾಡಿದ್ದ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕಂದಾಯ ವಿಭಾಗದ ಆರು ಸಿಬ್ಬಂದಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಅಮಾನತುಗೊಳಿಸಿದ್ದಾರೆ.
ಬೊಮ್ಮನಹಳ್ಳಿ ಜಂಟಿ ಆಯುಕ್ತರು ಸಲ್ಲಿಸಿದ ವರದಿಯಂತೆ, ಬಿ ಖಾತಾ ನೀಡುವ ಅರ್ಜಿ ಜೊತೆಗೆ ಕೇವಲ ಪ್ರಮಾಣ ಪತ್ರ ನೀಡಿದವರಿಗೆ ಆರು ಜನರು ‘ಬಿ ಖಾತಾ’ವನ್ನು ಮಂಜೂರು ಮಾಡಿದ್ದಾರೆ. ಆದ್ದರಿಂದ, ಗಂಭೀರ ಕರ್ತವ್ಯಲೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಿ, ವೇತನ ಬಟವಾಡೆಗೆ ಅವರನ್ನು ಬೇರೆ ನಗರ ಪಾಲಿಕೆಗಳ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ.
ಎಂ. ಮೋಹನ್ ಬಾಬು ಅವರ ದೂರಿನಂತೆ, ಜಂಟಿ ಆಯುಕ್ತರು ಪ್ರಕರಣವನ್ನು ತನಿಖೆ ನಡೆಸಿದಾಗ ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯಲ್ಲಿನ ಜಮೀನುಗಳಿಗೆ ಅನಧಿಕೃತವಾಗಿ ಬಿ ಖಾತಾ ಮಾಡಿದ್ದಾರೆ ಎಂಬುದು ಸಾಬೀತಾಗಿದೆ. ಜಿಬಿಎ ರಚನೆಯಾದ ಮೇಲೆ ಮೊದಲ ಅಮಾನತು ಆದೇಶ ಇದಾಗಿದೆ.
ನರಸಿಂಹಲು, ಸಹಾಯಕ ಕಂದಾಯ ಅಧಿಕಾರಿ, ಬೇಗೂರು ಉಪವಿಭಾಗ; ಭಾಗ್ಯಶ್ರೀ, ದ್ವಿತೀಯ ದರ್ಜೆ ಸಹಾಯಕಿ; ಬಾಲಲಿಂಗರಾಜು, ದ್ವಿತೀಯ ದರ್ಜೆ ಸಹಾಯಕ; ಶಾಂತೇಶ್, ಉಪ ಕಂದಾಯ ಅಧಿಕಾರಿ, ಬೊಮ್ಮನಹಳ್ಳಿ ವಿಭಾಗ ಕಂದಾಯ ಅಧಿಕಾರಿ; ಸುರೇಶ್ ಮೌಲ್ಯಮಾಪಕ– ವಾರ್ಡ್ 192; ಹೇಮಂತ್ ಕುಮಾರ್, ಮೌಲ್ಯಮಾಪಕ.
ಬಿಬಿಎಂಪಿ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ಮಾಡಿಕೊಟ್ಟಿರುವುದನ್ನು 2023ರ ಜುಲೈನಲ್ಲಿ ಅಂದಿನ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಪತ್ತೆ ಹಚ್ಚಿದ್ದರು.
ಬಿ ಖಾತಾಗೆ ಅರ್ಹವಾಗಿರುವ ಆಸ್ತಿಗಳಿಗೆ ಅಕ್ರಮವಾಗಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ‘ಐಎಫ್‌ಎಂಎಸ್’ ತಂತ್ರಾಂಶದ ‘ಆರ್ ಕೋಡ್ 130’ ಬಳಸಿ ‘ಎ’ ಖಾತಾ ನೀಡಿರುವುದು ತನಿಖೆಯಿಂದ ಗೊತ್ತಾಗಿತ್ತು. 2015ರಿಂದ 2023ರವರೆಗೆ ಒಟ್ಟು 45,133 ಪ್ರಕರಣಗಳಲ್ಲಿ ₹898.70 ಕೋಟಿ ಪಾವತಿಸಿಕೊಳ್ಳಲಾಗಿದೆ. ಇವುಗಳಲ್ಲಿ ಶೇ 90ರಷ್ಟು ಪ್ರಕರಣಗಳು ಅಕ್ರಮ ಎಂದು ಪರಿಗಣಿಸಲಾಗಿತ್ತು. ಆ ಸಂದರ್ಭದಲ್ಲಿ ಜಯರಾಂ ಅವರನ್ನು ವರ್ಗಾಯಿಸಲಾಗಿತ್ತು. ಅಕ್ರಮ ಎ ಖಾತಾದ ಬಗ್ಗೆ ಕ್ರಮ ಕೈಗೊಳ್ಳಲು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ವರದಿ ನೀಡಲು ಸೂಚಿಸಲಾಗಿತ್ತು. ಆದರೆ, ಈವರೆಗೂ ಕ್ರಮವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.