ADVERTISEMENT

ತ್ಯಾಜ್ಯ ವಿಲೇವಾರಿಯಲ್ಲಿ ಬಿಬಿಎಂಪಿ ವಿಫಲ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 20:50 IST
Last Updated 15 ಏಪ್ರಿಲ್ 2022, 20:50 IST

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ಅತ್ಯಂತ ಅವೈಜ್ಞಾನಿಕತೆಯಿಂದ ಕೂಡಿದೆ. ಈ ಸಂಬಂಧ ಕಾಲಕಾಲಕ್ಕೆ ಹೈಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಪಾಲಿಸುವಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವಿಫಲವಾಗಿವೆ’ ಎಂದು ಹೈಕೋರ್ಟ್‌ಗೆ ತಿಳಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಕವಿತಾ ಶಂಕರ್‌ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಈ ಕುರಿತಂತೆ ನ್ಯಾಯಪೀಠಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದ್ದು, ‘ಗುರುತಿಸಲಾದ 800 ಚದರ ಕಿ.ಮೀ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ವಿಲೇವಾರಿ ಮಾಡಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ’ ಎಂಬ ಅಂಶದತ್ತ ನ್ಯಾಯಪೀಠದ ಗಮನ ಸೆಳೆದಿದ್ದಾರೆ.

ADVERTISEMENT

‘ಸ್ವಚ್ಛಭಾರತ ಯೋಜನೆಯಡಿ ಕೇಂದ್ರ ಸರ್ಕಾರದಿಂದಬೆಂಗಳೂರು ನಗರಕ್ಕೆ ಲಭ್ಯವಾಗಿರುವ ₹ 73 ಕೋಟಿ ಅನುದಾನದಲ್ಲಿ ಯಾವುದೇ ದೂರದೃಷ್ಟಿ ಇಲ್ಲದೇ ₹ 8 ಕೋಟಿ ಖರ್ಚು ಮಾಡಿ ಒಟ್ಟು 25 ಕಾಂಪ್ಯಾಕ್ಟ್‌ ಟ್ರಕ್‌ಗಳನ್ನು ಖರೀದಿಸಲಾಗಿದೆ ಹಾಗೂ ಈ ಹಣವನ್ನು ಬೇಕಾಬಿಟ್ಟಿ ಬಳಸಲಾಗಿದೆ. ವಾಸ್ತವದಲ್ಲಿ ಪ್ರತಿ ಟ್ರಕ್‌ಗೆ ₹ 13 ಲಕ್ಷ ಹೆಚ್ಚಿನ ಮೊತ್ತ ನೀಡಿ ಖರೀದಿಸಲಾಗಿದೆ’ ಎಂದು ಆರೋಪಿಸಲಾಗಿದೆ.

‘ಘನತ್ಯಾಜ್ಯ ನಿರ್ವಹಣಾ ನಿಯಮ–2016 ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೆಎಸ್‌ಪಿಸಿಬಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ‌ಹೈಕೋರ್ಟ್‌ 2019ರ ಸೆಪ್ಟಂಬರ್‌ನಲ್ಲೇ ನಿರ್ದೇಶಿಸಿತ್ತು. ಆದರೆ, ಕೆಎಸ್‌ಪಿಸಿಬಿ ಈತನಕ ನ್ಯಾಯಾಲಯಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ’ ಎಂದು ಆಕ್ಷೇಪಿಸಲಾಗಿದೆ. ಅರ್ಜಿದಾರರ ಈ ಜ್ಞಾಪನಾ ಪತ್ರವನ್ನು ದಾಖಲಿಸಿಕೊಂಡಿರುವ ನ್ಯಾಯಪೀಠ, ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಕೆಎಸ್‌ಪಿಸಿಬಿಗೆ ನಿರ್ದೇಶಿಸಿ ಜೂನ್‌ 15ಕ್ಕೆ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.