ADVERTISEMENT

BBMP: ಗುತ್ತಿಗೆದಾರರ 3 ವರ್ಷದ ಬಿಲ್ ₹ 2,782.22 ಕೋಟಿ ಬಾಕಿ! ₹ 400 ಕೋಟಿ ಸಾಲ

ರಾಜೇಶ್ ರೈ ಚಟ್ಲ
Published 5 ಫೆಬ್ರುವರಿ 2023, 21:15 IST
Last Updated 5 ಫೆಬ್ರುವರಿ 2023, 21:15 IST
   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21 ಮತ್ತು 2021-22 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರರ ಬಿಲ್ ಪಾವತಿಸಲು ₹ 400 ಕೋಟಿವರೆಗೆ ಬ್ಯಾಂಕ್‌ ಸಾಲ ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಸಾಲವನ್ನು ಬ್ಯಾಂಕಿಗೆ ಬಿಬಿಎಂಪಿ ಮರುಪಾವತಿಸಲಿದೆ. ಆದರೆ, ಸಾಲ ಮರುಪಾವತಿ ಅವಧಿಯವರೆಗಿನ ಬಡ್ಡಿಯನ್ನು ಗುತ್ತಿಗೆದಾರರೇ ಕಟ್ಟಬೇಕು! ಗುತ್ತಿಗೆದಾರರಿಗೆ ಬಿಬಿಎಂಪಿ 2020–21ರಿಂದ 2022–23ವರೆಗಿನ ಒಟ್ಟು 5,586 ಬಿಲ್‌ಗಳ ₹ 2,782.22 ಕೋಟಿ ಪಾವತಿಸಲು ಬಾಕಿ ಇದೆ.

‘ಕೋವಿಡ್‌ ಪರಿಣಾಮ, ಎರಡು ವರ್ಷಗಳಿಂದ ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣ ಕುಂಠಿತಗೊಂಡಿದೆ. ಹೀಗಾಗಿ, ಗುತ್ತಿಗೆದಾರರ ಸಂಕಷ್ಟವನ್ನು ತಾತ್ಕಾಲಿಕವಾಗಿ ಪರಿಹರಿಸಲು ‘ಆಪ್ಷನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ವ್ಯವ‌ಸ್ಥೆ’ (ಒವಿಡಿಎಸ್‌) ಅಳವಡಿಸಲು ಅನುಮೋದನೆ ನೀಡುವಂತೆ 2022ರ ಅ. 19ರಂದು ಬಿಬಿಎಂಪಿ ಮುಖ್ಯ ಆಯುಕ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೇ 18ರಂದು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ADVERTISEMENT

ಮನವಿಯಲ್ಲಿ ಏನಿತ್ತು?: ‘ಪ್ರತಿವರ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಅಂತರ ಹೆಚ್ಚುತ್ತಿದೆ. ಬಿಬಿಎಂಪಿಯು ಬೃಹತ್‌ ರಸ್ತೆಗಳು, ಮೇಲ್ಸೇತುವೆಗಳು, ಕಾರಿಡಾರ್‌ಗಳು, ಬೃಹತ್‌ ಕಾಲುವೆ ಮುಂತಾದ ಯೋಜನೆಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಕಾಮಗಾರಿಗಳ ಬಿಲ್‌ ಗಳು ಈವರೆಗೂ ಪಾವತಿಯಾಗಿಲ್ಲ. ಸಕಾಲದಲ್ಲಿ ಪಾವತಿ ಆಗದಿದ್ದರೆ, ಕಾಮಗಾರಿಯ ಪ್ರಗತಿ ಮತ್ತು ಗುಣಮಟ್ಟ ಕುಂಠಿತವಾಗಲಿದೆ. ಬಾಕಿ ಬಿಲ್‌ ಪಾವತಿಸುವಂತೆ ಗುತ್ತಿಗೆದಾರರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ, ಸಾಲದ ರೂಪದಲ್ಲಿ ₹1,000 ಕೋಟಿ ವಿಶೇಷ ಅನುದಾನವನ್ನು ಬಿಬಿಎಂಪಿಗೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಒವಿಡಿಎಸ್‌ ಪದ್ಧತಿ ಅಳವಡಿಸಲು ಚಿಂತಿಸಲಾಗಿದ್ದು, ಅದಕ್ಕೆ ಅವಕಾಶ ನೀಡಬೇಕು’ ಎಂದು ಪತ್ರದಲ್ಲಿ ಆಯುಕ್ತರು ಕೋರಿದ್ದರು.

‘ಈ ವ್ಯವಸ್ಥೆಯಲ್ಲಿ ಎಲ್ಲ ರಾಷ್ಟ್ರೀಯ ಮತ್ತು ಇತರ ಷೆಡ್ಯೂಲ್ಡ್‌ ಬ್ಯಾಂಕುಗಳು ಭಾಗವಹಿಸಲು ಅವಕಾಶವಿದೆ. ಬ್ಯಾಂಕುಗಳೇ ಪಾಲಿಕೆಯನ್ನು ಸಂಪರ್ಕಿಸಿ ಸೂಕ್ತ ಬಡ್ಡಿ ದರದಲ್ಲಿ ಒವಿಡಿಎಸ್‌ ಮಾಡಿಕೊಡಬಹುದು’.

‘ಈ ವ್ಯವಸ್ಥೆಯಲ್ಲಿ ಪಾಲಿಕೆ ಒಡಂಬಡಿಕೆ ಮಾಡಿಕೊಂಡಿರುವ ಮತ್ತು ಗುತ್ತಿಗೆದಾರರಿಗೆ ಅನುಕೂಲಕರವಾದ ಬಡ್ಡಿ ದರ ಮತ್ತು ಅವಧಿಯನ್ನು ನಿಗದಿಪಡಿಸುವ ಬ್ಯಾಂಕ್‌ನಲ್ಲಿ ಅಗತ್ಯವಿರುವವರು ಸ್ವಇಚ್ಛೆಯಿಂದ ಬಿಲ್‌ ಡಿಸ್ಕೌಂಟ್‌ ಮಾಡಿಕೊಂಡು ಹಣ ಪಡೆಯಬಹುದು. ಬ್ಯಾಂಕುಗಳು ನಿಗದಿಪಡಿಸಿದ ಅವಧಿಯ ಆಧಾರದಲ್ಲಿ ನಿರ್ದಿಷ್ಟ ಅವಧಿಯ ಒಳಗೆ ಪಾಲಿಕೆ ಪಾವತಿಸಬಹುದಾದ ಬಿಲ್‌ಗಳಿಗೆ ಮಾತ್ರ ಈ ಪದ್ಧತಿಯಲ್ಲಿ ಭಾಗವಹಿಸಲು ಅವಕಾಶ ನೀಡಬಹುದು.’

‘ಈ ವ್ಯವಸ್ಥೆಯಲ್ಲಿ ಬಡ್ಡಿ ದರವನ್ನು ಗುತ್ತಿಗೆದಾರರು ಭರಿಸಬೇಕು. ಜ್ಯೇಷ್ಠತೆ ಆಧಾರದಲ್ಲಿ ಗುತ್ತಿಗೆಯ ಪೂರ್ಣ ಮೊತ್ತವನ್ನು ಸಂಬಂಧಿಸಿದ ಬ್ಯಾಂಕ್‌ಗೆ ಪಾಲಿಕೆ ಪಾವತಿಸಲಿದೆ. ಉದಾಹರಣೆಗೆ, 18 ತಿಂಗಳು ಬಿಲ್‌ ಡಿಸ್ಕೌಂಟಿಂಗ್‌ ಸೌಲಭ್ಯ ನೀಡುವ ಬ್ಯಾಂಕಿಗೆ, ಮುಂದಿನ 18 ತಿಂಗಳ ಒಳಗೆ ಪಾವತಿ ಮಾಡಬಹುದಾದ ಬಿಲ್‌ಗಳನ್ನು ಡಿಸ್ಕೌಂಟ್‌ ಮಾಡಲಾಗುತ್ತದೆ. ಕೇವಲ ಆರು ತಿಂಗಳ ಅವಧಿಯ ಸೌಲಭ್ಯ ನೀಡುವ ಬ್ಯಾಂಕಿಗೆ ಆರು ತಿಂಗಳ ಒಳಗೆ ಪಾವತಿ ಮಾಡುವ ಬಿಲ್‌ಗಳನ್ನು ಮಾತ್ರ ಡಿಸ್ಕೌಂಟ್‌ ಮಾಡಲಾಗುತ್ತದೆ. ಇದರಿಂದ ಪಾಲಿಕೆಯ ಮೇಲೆ ಬಡ್ಡಿಯ ಹೊರೆ ಬೀಳುವುದಿಲ್ಲ’ ಎಂದೂ ವಿವರಿಸಿದ್ದರು.

ಬಿಬಿಎಂಪಿ ಬಿಲ್‌ ಎಷ್ಟು ಬಾಕಿ?

ವರ್ಷ; ಒಟ್ಟು ಬಿಲ್‌; ಮೊತ್ತ (₹ ಕೋಟಿಗಳಲ್ಲಿ)

2020–21;912;466.68

2021–22;3,006;1,644.88

2022–23;1,668;670.66

ಒಟ್ಟು; 5,586;2,782.22


ಸರ್ಕಾರದ ಷರತ್ತುಗಳೇನು?

* ಸಾಲ ಮರುಪಾವತಿಗೆ ಬಿಬಿಎಂಪಿ ‘ಎಸ್ಕ್ರೋ’ (ನಿರ್ದಿಷ್ಟ) ಖಾತೆ ತೆರೆದು, ಎಲ್ಲ ಆದಾಯವನ್ನು ಆ ಖಾತೆಗೆ ಜಮೆ ಮಾಡಬೇಕು.

* ಸಾಲಕ್ಕೆ ತಗಲುವ ವೆಚ್ಚದ (ಬಡ್ಡಿ) ಹೊರೆ ತನ್ನ ಮೇಲೆ ಬೀಳದಂತೆ ಬಿಬಿಎಂಪಿ ನೋಡಿಕೊಳ್ಳಬೇಕು. ಅಂಥ ವೆಚ್ಚಕ್ಕೆ ಸರ್ಕಾರವೂ ಹೊಣೆಯಲ್ಲ.

* ಬಿಬಿಎಂಪಿಯು ಮರುಪಾವತಿಗೆ ನಿಗದಿಪಡಿಸಿದ ದಿನದ ಸಹಿತ ಒವಿಡಿಎಸ್‌ ಬಿಡ್‌ಗಳನ್ನು (ಗುತ್ತಿಗೆದಾರರ ಒಪ್ಪಿಗೆಯ ಬಳಿಕ) ಮುಕ್ತವಾಗಿ ಪ್ರಕಟಿಸುವುದು ಸೇರಿದಂತೆ ಪಾರದರ್ಶಕ ಕಾರ್ಯವಿಧಾನ ಅನುಸರಿಸಬೇಕು. ಅತಿ ಕಡಿಮೆ ಬಿಡ್‌ ಮಾಡಿದ ಬ್ಯಾಂಕ್‌ ಜೊತೆ ಕರಾರು ಮಾಡಿಕೊಳ್ಳಬೇಕು

* ಬಿಲ್‌ಗಳ ಜ್ಯೇಷ್ಠತೆಯ ಆಧಾರದಲ್ಲಿ ಒವಿಡಿಎಸ್‌ ಹರಾಜು ಹಾಕಬೇಕು. ಗುತ್ತಿಗೆದಾರನ ವಿವರ, ಕಾಮಗಾರಿ ಪ್ರಗತಿ ಮತ್ತು ಬಿಬಿಎಂಪಿಯಿಂದ ಸಾಲ ಮರುಪಾವತಿ ನಿರೀಕ್ಷಿಸಬಹುದಾದ ದಿನ ಬಿಡ್‌ನಲ್ಲಿ ಇರಬೇಕು

* ಕರಾರು ಉಲ್ಲಂಘನೆಯಾದರೆ ಸರ್ಕಾರ ಹೊಣೆಯಲ್ಲ.

* ಷೆಡ್ಯೂಲ್ಡ್‌ ವಾಣಿಜ್ಯ ಬ್ಯಾಂಕುಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಬೇಕು.


‘ಸುಳ್ಳು ಬಿಲ್ ಪಾವತಿಗೆ ಹೂಡಿರುವ ಸಂಚು’

ಬಿಬಿಎಂಪಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗುತ್ತಿಗೆದಾರರು, ‘ಇದೊಂದು ಅವ್ಯವಹಾರವಾಗಿದ್ದು, ಸರ್ಕಾರ, ಬಿಬಿಎಂಪಿ ಅಧಿಕಾರಿಗಳು, ಆಡಳಿತ ಪಕ್ಷದ ಶಾಸಕರು ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಕೇವಲ ಬಿಜೆಪಿ ಆಡಳಿತಾವಧಿಯ ಬಿಲ್ ಪಾವತಿ ಏಕೆ ಎಂದೂ ಪ್ರಶ್ನಿಸಿದ್ದಾರೆ.

‘ಗುತ್ತಿಗೆ ಕರಾರು ಮುರಿದು ಈ ನಿಯಮ ಹೇರಲಾಗುತ್ತಿದೆ. ಬಿಬಿಎಂಪಿಯ ಅಧಿಕಾರಿಗಳಿಗೆ ಹಣ ನೀಡುವವರ ಬಿಲ್ ಪಾವತಿಯಾಗುತ್ತದೆ. ಆಡಳಿತ ಪಕ್ಷದ ಬಹುಪಾಲು ಶಾಸಕರು ಕಳೆದ ಎರಡು ವರ್ಷದಲ್ಲಿ ಬೇನಾಮಿಯಾಗಿ ಕಾಮಗಾರಿ ಪಡೆದುಕೊಂಡಿದ್ದು, ಸುಳ್ಳು ಬಿಲ್ ಸಲ್ಲಿಸಿದ್ದಾರೆ. ಬಹಳ ಹಿಂದಿನಿಂದ ಬಿಲ್ ಬಾಕಿ ಇರುವ ಇತರ ಗುತ್ತಿಗೆದಾರರನ್ನು ಬಿಟ್ಟು, ಕಾಮಗಾರಿಯನ್ನೇ ಮಾಡದ ಬಿಲ್ ಮೊತ್ತ ಪಡೆದುಕೊಳ್ಳಲು ಹೂಡಿರುವ ಸಂಚು ಇದು’ ಎಂದೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.