ADVERTISEMENT

ಕಸದ ಡಬ್ಬಿಗಳೂ ಜರ್ಮನಿಯಿಂದ ಆಮದು!

400 ಲೋಹದ ಕಸದ ಡಬ್ಬಿ ಪೂರೈಕೆ * ನಿರ್ವಹಣೆಗೆ ₹ 55 ಕೋಟಿ ಪಾವತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 21:25 IST
Last Updated 15 ಫೆಬ್ರುವರಿ 2020, 21:25 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ಬಿಬಿಎಂಪಿಯು ಕಸದ ಡಬ್ಬಿಗಳನ್ನೂ ಜರ್ಮನಿಯಿಂದ ಆಮದು ಮಾಡಿಕೊಂಡಿದೆ. ಡಬ್ಬಿಯೊಂದಕ್ಕೆ ಅಂದಾಜು ₹3 ಲಕ್ಷ ಪಾವತಿಸಿ, 400 ವೈಜ್ಞಾನಿಕ ಕಸದ ಡಬ್ಬಿಗಳನ್ನು ಆಮದು ಮಾಡಿಕೊಂಡಿದೆ. ಇದಕ್ಕಾಗಿ, ದೇಶದ ಮತ್ತು ಜರ್ಮನಿಯ ಕಂಪನಿಗೆ ₹55 ಕೋಟಿಯನ್ನು ಬಿಬಿಎಂಪಿ ಪಾವತಿಸಿದೆ.

ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿರುವ ಇವು, ಲೋಹದ ಡಬ್ಬಿಗಳಾಗಿವೆ. ವಿಪರ್ಯಾಸವೆಂದರೆ, ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ !

ದೇಶದ ಝೋಂಟಾ ಇನ್‌ಫ್ರಾಟೆಕ್‌ಗೆ ಮಾತ್ರವಲ್ಲದೆ, ಜರ್ಮನಿಯ ಬಯೆರ್ ಜಿಎಂಬಿಎಚ್ (Bauer Gmbh) ಕಂಪ
ನಿಗೂ ಹಣ ಪಾವತಿಸಲಾಗಿದೆ. ಎರಡೂ ಕಂಪನಿಗಳು ಒಗ್ಗೂಡಿ ಯೋಜನೆಗೆ ಬಿಡ್‌ ಮಾಡಿದ್ದವು. ಕಸದ ಡಬ್ಬಿಗಳನ್ನು ಪೂರೈಸುವ ಈ ಯೋಜನೆಯನ್ನು ನಾಲ್ಕು ಘಟಕಗಳನ್ನಾಗಿ ಮಾಡಿದ್ದ ಬಿಬಿಎಂಪಿಯು ₹55.26 ಕೋಟಿಗೆ ಕಾರ್ಯಾದೇಶ ನೀಡಿತ್ತು.

ADVERTISEMENT

ಒಂದೊಂದು ಲೋಹದ ಡಬ್ಬಿಯು 1.5 ಕ್ಯೂಬಿಕ್‌ ಮೀಟರ್‌ ಅಗಲವಿದ್ದು, 2.5 ಕ್ಯೂಬಿಕ್‌ ಮೀಟರ್‌ ಎತ್ತರ ಇದೆ. 30 ಲೀಟರ್‌ನಷ್ಟು ತ್ಯಾಜ್ಯ ಹಿಡಿಯುವಷ್ಟು ಗಾತ್ರ ಹೊಂದಿದೆ.

ಅನುಮಾನಕ್ಕೆ ಕಾರಣವಾದ ಒಪ್ಪಂದ:ಇದೇ ಜರ್ಮನ್‌ ಕಂಪನಿಯು, ಯುರೋಪ್‌ನಲ್ಲಿನ ತನ್ನ ಗ್ರಾಹಕರಿಗೆ ಇದೇ ಡಬ್ಬಿಗಳನ್ನು ತಲಾ ₹1.5 ಲಕ್ಷಕ್ಕೆ ಪೂರೈಸಿದೆ. ಆದರೆ, ಬಿಬಿಎಂಪಿಯು ಜೋಡಿ ಡಬ್ಬಿಗೆ ₹5.92 ಲಕ್ಷ ನೀಡಿದೆ !

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಮೇಯರ್‌ ಗೌತಮ್‌ಕುಮಾರ್, ‘ಒಪ್ಪಂದದಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮಾರುಕಟ್ಟೆಯಲ್ಲಿ ಈ ಮಾದರಿಯ ಲೋಹದ ಡಬ್ಬಿ ಬೆಲೆ ₹1 ಲಕ್ಷದಿಂದ ₹1.5 ಲಕ್ಷ ಇರುವಾಗ, ಬಿಬಿಎಂಪಿಯು ಎರಡು ಡಬ್ಬಿಗೆ ₹6 ಲಕ್ಷ ಪಾವತಿಸಿರುವುದು ಅಚ್ಚರಿ ಮೂಡಿಸಿದೆ’ ಎಂದು ಹೇಳಿದರು.

‘ಈ ಡಬ್ಬಿಗಳನ್ನು ಪಾದಚಾರಿ ಮಾರ್ಗದಲ್ಲಿಯೇ ಅಳವಡಿಸಲಾಗಿದೆ. ಇದರಿಂದ ಪಾದಚಾರಿಗಳಿಗೂ ತೊಂದರೆಯಾಗಿದೆ. ಹೀಗಿರುವಾಗ, ಇದು ವೈಜ್ಞಾನಿಕ ವ್ಯವಸ್ಥೆ ಎಂದು ಹೇಗೆ ಹೇಳುವುದು’ ಎಂದು ಪ್ರಶ್ನಿಸಿದರು.

‘ಬೆಂಜ್‌ ಕಾರ್‌ ಆಗಿದ್ದರೆ ಜರ್ಮನಿಯಿಂದ ಆಮದು ಮಾಡಿಕೊಂಡಿರಬಹುದು ಎಂದುಕೊಳ್ಳಬಹುದು. ಶಿವಾಜಿನಗರದಲ್ಲಿಯೇ ಅಂತಹ ಲೋಹದ ಡಬ್ಬಿಗಳು ಸಿಗುವಾಗ ಜರ್ಮನಿಯಿಂದ ತರಿಸಿಕೊಳ್ಳುವ ಅಗತ್ಯವೇನಿತ್ತು’ ಎಂದೂ ಅವರು ಹೇಳಿದರು.

‘ಒಪ್ಪಂದದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಅಲ್ಲದೆ, ಈ ಕುರಿತು ಸೋಮವಾರ ಬಿಬಿಎಂಪಿ ಆಯುಕ್ತರೊಂದಿಗೆ ಮಾತನಾಡುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.