ADVERTISEMENT

 ₹10,688.63 ಕೋಟಿ ಬಿಬಿಎಂಪಿ ಬಜೆಟ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 14:07 IST
Last Updated 18 ಫೆಬ್ರುವರಿ 2019, 14:07 IST
   

ಬೆಂಗಳೂರು: ಬಿಬಿಎಂಪಿ 2019–20ನೇ ಸಾಲಿನ ಆಯವ್ಯಯವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ. ಹೇಮಲತಾ ಸೋಮವಾರ ಮಂಡಿಸಿದರು.

₹10,688.63 ಕೋಟಿ ವೆಚ್ಚದ ಬಜೆಟ್ ಮಂಡಿಸುವುದಕ್ಕೂ ಮುನ್ನ ಮೌನ ಆಚರಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಕಪ್ಪು ಬಟ್ಟೆ ಧರಿಸಿ ಸಭೆಗೆ ಬಂದ ಬಿಜೆಪಿ ಸದಸ್ಯರು ಮೇಯರ್‌ ಪೀಠದ ಎದುರು ಬಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಬೋಗಸ್ ಬಜೆಟ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಬಾರಿಯ ಬಜೆಟ್‌ನಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ವೈಟ್‌ ಟಾಪಿಂಗ್‌ಗಾಗಿ ₹3,300 ಕೋಟಿಗೂ ಅಧಿಕ ವೆಚ್ಚದ ಕ್ರಿಯಾ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಒಟ್ಟು ಬಜೆಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹4945.91 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹1,186 ಕೋಟಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ₹1,071.43 ಕೋಟಿ ವರ್ಗೀಕರಿಸಲಾಗಿದೆ.

ಹೆಣ್ಣು ಮಗುವಿಗೆ ಮಹಾಲಕ್ಷ್ಮೀ ಯೋಜನೆ: ಪಾಲಿಕೆ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಏಪ್ರಿಲ್‌ 1ರಿಂದ 2020ರ ಮಾರ್ಚ್‌ 31ರ ವರೆಗೆ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ₹1 ಲಕ್ಷ ಮೌಲ್ಯದ 15 ವರ್ಷ ಅವಧಿ ಬಾಂಡ್‌ ನೀಡಲಾಗುತ್ತಿದೆ. ಇದಕ್ಕಾಗಿ ₹60 ಕೋಟಿ ಅನುದಾನ ಮೀಸಲಿದೆ.

ನಗರದ ತುಮಕೂರು ರಸ್ತೆಯಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ ₹5 ಕೋಟಿ ಹಾಗೂ ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಮೂಲಕ ವೇತನ ಪಾವತಿಸಲು ₹375 ಕೋಟಿ ಅನುದಾನ ಮೀಸಲಿಡಲಾಗಿದೆ.

ವಾಯು ಶುದ್ಧಿಕರಣ ಯಂತ್ರಗಳ ಸ್ಥಾಪನೆ, ಬೈಕ್‌ ಆ್ಯಂಬುಲೆನ್ಸ್‌ಗಳ ಖರೀದಿ, ಪಾಲಿಕೆ ಪ್ರೌಢಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಬಸ್‌ ಪಾಸ್‌, ಬಡವರ ಬಂಧು ಕಾರ್ಯಕ್ರಮದ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗಲು ಪ್ರತಿ ವಾರ್ಡ್‌ಗೆ 15 ತಳ್ಳುವ ಗಾಡಿ ನೀಡಲು ಉದ್ದೇಶಿಸಲಾಗಿದೆ.

ಕ್ರಿಯಾ ಯೋಜನೆಗಳಲ್ಲಿ ಕೆಲವು;

* ವೈಟ್‌ ಟಾಪಿಂಗ್‌– ₹1,172 ಕೋಟಿ
* ಕೆರೆಗಳ ಅಭಿವೃದ್ಧಿ– ₹348 ಕೋಟಿ
* ರಸ್ತೆಗಳ ಅಭಿವೃದ್ಧಿ– ₹2,246 ಕೋಟಿ
* ಘನತ್ಯಾಜ್ಯ ನಿರ್ವಹಣೆ– ₹753 ಕೋಟಿ

ಈಗಿನ ಸದಸ್ಯರ ಅಧಿಕಾರದ ಅವಧಿಯಲ್ಲಿ ಪಾಲಿಕೆಯಲ್ಲಿ ಮಂಡಿಸಿರುವ ಬಜೆಟ್‌ ಗಾತ್ರ ಒಮ್ಮೆಯೂ ₹ 10 ಸಾವಿರ ಕೋಟಿ ದಾಟಿರಲಿಲ್ಲ. 2018–19ನೇ ಸಾಲಿನಲ್ಲಿ ₹ 9,325 ಕೋಟಿ ಬಜೆಟ್‌ ಮಂಡಿಸಲಾಗಿತ್ತು. ಆದರೆ, ಸರ್ಕಾರದಿಂದ ಅನುಮೋದನೆಯಾಗಿ ಬರುವಾಗ ಆಯವ್ಯಯ ಅಂದಾಜು ₹ 10,132 ಕೋಟಿಗೆ ಹೆಚ್ಚಳವಾಗಿತ್ತು.

ರಾಜ್ಯ ಸರ್ಕಾರವು ‘ನವ ಬೆಂಗಳೂರು’ ಯೋಜನೆ ಅಡಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಮೂರು ವರ್ಷಗಳಿಗೆ ₹ 8,015 ಕೋಟಿ ಅನುದಾನ ಪ್ರಕಟಿಸಿದೆ. ಇದರ ಮೊದಲ ಕಂತಿನ ರೂಪದಲ್ಲಿ 2019–20ನೇ ಸಾಲಿನ ಬಜೆಟ್‌ನಲ್ಲಿ ₹ 2,300 ಕೋಟಿ ಮಂಜೂರು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.