ADVERTISEMENT

₹ 10 ಸಾವಿರ ಕೋಟಿ ದಾಟಲಿದೆ ಬಿಬಿಎಂಪಿ ಬಜೆಟ್‌?

ಬಿಬಿಎಂಪಿ ಬಜೆಟ್‌ ಮಂಡನೆ ಇಂದು * ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಅಂಗವಿಕಲರಿಗೆ ವಿಶೇಷ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 12:04 IST
Last Updated 18 ಫೆಬ್ರುವರಿ 2019, 12:04 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ‘ವಾಸ್ತವ’ದ ಮಂತ್ರ ಜಪಿಸುತ್ತಲೇ ಬಿಬಿಎಂಪಿ2019–20ನೇ ಸಾಲಿನ ಆಯವ್ಯಯವನ್ನು ಸಿದ್ಧಪಡಿಸುವ ಕಸರತ್ತು ಪೂರ್ಣಗೊಳಿಸಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಎಸ್‌.ಪಿ. ಹೇಮಲತಾ ಅವರು ಸೋಮವಾರ ಬಜೆಟ್‌ ಮಂಡಿಸಲಿದ್ದಾರೆ.

ಆದರೆ, ಬಜೆಟ್‌ ಗಾತ್ರ ಕಳೆದ ಸಾಲಿಗಿಂತ ಮತ್ತಷ್ಟು ಹಿಗ್ಗಿದ್ದು, ₹ 10 ಸಾವಿರ ಕೋಟಿ ದಾಟಲಿದೆ ಎಂದು ಮೂಲಗಳು ತಿಳಿಸಿವೆ.

ಈಗಿನ ಸದಸ್ಯರ ಅಧಿಕಾರದ ಅವಧಿಯಲ್ಲಿ ಪಾಲಿಕೆಯಲ್ಲಿ ಮಂಡಿಸಿರುವ ಬಜೆಟ್‌ ಗಾತ್ರ ಒಮ್ಮೆಯೂ ₹ 10 ಸಾವಿರ ಕೋಟಿ ದಾಟಿರಲಿಲ್ಲ. 2018–19ನೇ ಸಾಲಿನಲ್ಲಿ ₹ 9,325 ಕೋಟಿ ಬಜೆಟ್‌ ಮಂಡಿಸಲಾಗಿತ್ತು. ಆದರೆ, ಸರ್ಕಾರದಿಂದ ಅನುಮೋದನೆಯಾಗಿ ಬರುವಾಗ ಆಯವ್ಯಯ ಅಂದಾಜು ₹ 10,132 ಕೋಟಿಗೆ ಹೆಚ್ಚಳವಾಗಿತ್ತು.

ADVERTISEMENT

ಈ ಬಾರಿ ಅಧಿಕಾರಿಗಳು ₹ 8,900 ಕೋಟಿ ಬಜೆಟ್‌ಗೆ ಶಿಫಾರಸು ಮಾಡಿದ್ದರು. ಪಾಲಿಕೆ ಸದಸ್ಯರ ಕೋರಿಕೆ ಮೇಳೆ ಮತ್ತಷ್ಟು ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸಿದ ಬಳಿಕವೂ ಗಾತ್ರ ₹ 10 ಸಾವಿರ ಕೋಟಿ ಮೀರದಂತೆ ಹೇಮಲತಾ ಹಾಗೂ ಮೇಯರ್‌ ಗಂಗಾಂಬಿಕೆ ಕಸರತ್ತು ನಡೆಸಿದ್ದರು. ಆದರೂ ಬಜೆಟ್‌ ಗಾತ್ರ ₹ 10,600 ಕೋಟಿ ಮೀರಲಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಮಹಿಳೆಯೊಬ್ಬರು ಮಂಡಿಸುತ್ತಿರುವ ಬಜೆಟ್‌ ಇದು. ಜತೆಗೆ ಈ ಬಾರಿ ಮೇಯರ್‌ ಕೂಡಾ ಮಹಿಳೆಯೇ. ಹಾಗಾಗಿ ಸಹಜವಾಗಿಯೇ ಬಜೆಟ್‌ನಲ್ಲಿ ಮಹಿಳೆಯರ ಕಾರ್ಯಕ್ರಮಗಳಿಗೆ ಆದ್ಯತೆ ಸಿಗುವ ನಿರೀಕ್ಷೆ ಇದೆ. ಮಹಿಳೆಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ವಿತರಣೆ, ರಿಯಾ
ಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಿಧನರಾದ ಸಂದರ್ಭದಲ್ಲಿ ಬಿಬಿಎಂಪಿಯ ಯಾವುದಾದರೂ ಕಾರ್ಯಕ್ರಮಕ್ಕೆ ಸ್ವಾಮೀಜಿ ಹೆಸರು ಇಡುವ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆದಿತ್ತು. ವಿಶೇಷ ಸಾಧನೆ ಮಾಡಿರುವ ಅಂಗವಿಕಲರಿಗೆ ಸ್ವಾಮೀಜಿ ಹೆಸರಿನಲ್ಲಿ ಪ್ರಶಸ್ತಿ ನೀಡುವ ಹಾಗೂ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಕಾರ್ಯಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ತುಮಕೂರು ರಸ್ತೆಯ ಬಳಿ ಸ್ವಾಮೀಜಿಯ ಪ್ರತಿಮೆ ನಿರ್ಮಿಸುವ ಚಿಂತನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಸಾಕಷ್ಟು ಅನುದಾನ ಸಿಗುತ್ತಿಲ್ಲ ಎಂಬ ವಿಚಾರ ಕೌನ್ಸಿಲ್‌ ಸಭೆಗಳಲ್ಲಿ ಆಗಾಗ ಚರ್ಚೆಯಾಗುತ್ತಿತ್ತು. ಪ್ರಸ್ತುತ ನಗರದ ಹಳೆ ವಾರ್ಡ್‌ಗಳ ಅಭಿವೃದ್ಧಿಗಾಗಿ ವರ್ಷಕ್ಕೆ ತಲಾ ₹ 2 ಕೋಟಿ ಅನುದಾನ ನೀಡುತ್ತಿದ್ದರೆ ಹೊಸ ವಾರ್ಡ್‌ಗಳಿಗೆ ತಲಾ ₹ 3 ಕೋಟಿ ಅನುದಾನ ನೀಡಲಾಗುತ್ತಿದೆ. ಈ ಬಾರಿ ₹ 110 ಹಳ್ಳಿಗಳ ಅಭಿವೃದ್ಧಿಗೆ ₹ 125 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರವು ‘ನವ ಬೆಂಗಳೂರು’ ಯೋಜನೆ ಅಡಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಮೂರು ವರ್ಷಗಳಿಗೆ ₹ 8,015 ಕೋಟಿ ಅನುದಾನ ಪ್ರಕಟಿಸಿದೆ. ಇದರ ಮೊದಲ ಕಂತಿನ ರೂಪದಲ್ಲಿ 2019–20ನೇ ಸಾಲಿನ ಬಜೆಟ್‌ನಲ್ಲಿ ₹ 2,300 ಕೋಟಿ ಮಂಜೂರು ಮಾಡಿದೆ. ಇದಕ್ಕೆ ಪೂರಕವಾಗಿ ಪಾಲಿಕೆಯೂ ಇನ್ನಷ್ಟು ಹೊಸ ಕಾರ್ಯಕ್ರಮ ಪ್ರಕಟಿಸುವುದನ್ನು ಜನ ಎದುರು ನೋಡುತ್ತಿದ್ದಾರೆ.

2005–06ನೇ ಸಾಲಿನಲ್ಲಿ ಲಲಿತಾ ಶ್ರೀನಿವಾಸ್‌ ಅವರು ಬಜೆಟ್‌ ಮಂಡಿಸಿದ್ದರು. ಆ ಬಳಿಕ ಮಹಿಳೆಗೆ ಬಜೆಟ್‌ ಮಂಡಿಸುವ ಅವಕಾಶ ದಕ್ಕಿರುವುದು ಇದೇ ಮೊದಲು.

ತೆರಿಗೆ ಸಂಗ್ರಹ:ಗುರಿ ಸಾಧನೆ ಸಾಧ್ಯವೇ?

2018–19ನೇ ಸಾಲಿನಲ್ಲಿ ಪಾಲಿಕೆ ₹ 3,100 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಮೂಲಗಳ ಪ್ರಕಾರ ಇದುವರೆಗೆ ಸುಮಾರು ₹ 2,300 ಕೋಟಿಗಳಷ್ಟು ತೆರಿಗೆ ಸಂಗ್ರಹವಾಗಿದೆ. ವಸೂಲಿಗೆ ಮಾರ್ಚ್‌ ಅಂತ್ಯದವರೆಗೆ ಕಾಲಾವಕಾಶ ಇದ್ದರೂ ಈ ಆರ್ಥಿಕ ವರ್ಷದಲ್ಲಿ ಗುರಿ ತಲುಪುವುದು ಕಷ್ಟಸಾಧ್ಯ.

‘ನಾವು ತೆರಿಗೆ ಸಂಗ್ರಹದಲ್ಲಿ ಈ ಸಾಲಿನ ಗುರಿ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಈ ಹಿಂದಿನ ವರ್ಷಗಳ ಬಾಕಿ ತೆರಿಗೆ ಸಂಗ್ರಹ ಹೆಚ್ಚಿಸುವುದಕ್ಕೂ ಪ್ರಯತ್ನ ನಡೆಸಿದ್ದೇವೆ. ಮುಂದಿನ ವರ್ಷವೂ ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡುವ ಪ್ರಮೇಯ ಎದುರಾಗದು. ತೆರಿಗೆ ಆದಾಯ ನಿರೀಕ್ಷೆ ಮಾಡುವಾಗಲೂ ಸಾಧಿಸಲಾಗದಂತಹ ಗುರಿಯನ್ನು ನಿಗದಿಪಡಿಸುವುದಿಲ್ಲ’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

**

ಬಜೆಟ್‌ ವಾಸ್ತವಕ್ಕೆ ಹತ್ತಿರದಲ್ಲೇ ಇರಲಿದೆ. ಮಹಿಳೆಯರ ಅಭಿವೃದ್ಧಿ ಮಾತ್ರ ಅಲ್ಲ, ಉದ್ಯಾನಗಳು, ಶಿಕ್ಷಣ, ಮೂಲಸೌಕರ್ಯ.. ಹೀಗೆ ಎಲ್ಲ ವಿಷಯಗಳತ್ತಲೂ ಬಜೆಟ್‌ನಲ್ಲಿ ಆದ್ಯತೆ ನೀಡುವ ಪ್ರಯತ್ನ ಮಾಡಿದ್ದೇನೆ
- ಎಸ್‌.ಪಿ.ಹೇಮಲತಾ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.