ADVERTISEMENT

ಪಿಎಸ್ಐ ಅಭಿಯಾನ: ಬಿಬಿಎಂಪಿಯಿಂದ ಶೌಚಾಲಯ ನಿರ್ಮಾಣ

ಗೊರಗುಂಟೆಪಾಳ್ಯದ 30 ವರ್ಷಗಳ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 19:49 IST
Last Updated 27 ಆಗಸ್ಟ್ 2022, 19:49 IST
ಗೊರಗುಂಟೆಪಾಳ್ಯ ಬಸ್ ತಂಗುದಾಣ ಬಳಿ ಬಿಬಿಎಂಪಿ ನಿರ್ಮಿಸಿರುವ ಸಾರ್ವಜನಿಕ ಶಾಶ್ವತ ಶೌಚಾಲಯ    – ಪ್ರಜಾವಾಣಿ ಚಿತ್ರ
ಗೊರಗುಂಟೆಪಾಳ್ಯ ಬಸ್ ತಂಗುದಾಣ ಬಳಿ ಬಿಬಿಎಂಪಿ ನಿರ್ಮಿಸಿರುವ ಸಾರ್ವಜನಿಕ ಶಾಶ್ವತ ಶೌಚಾಲಯ    – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೊರಗುಂಟೆಪಾಳ್ಯ ತಂಗುದಾಣ ಬಳಿ ಶೌಚಾಲಯ ನಿರ್ಮಿಸಬೇಕು’ ಎಂದು ಒತ್ತಾಯಿಸಿ ಪಿಎಸ್ಐ ಶಾಂತಪ್ಪ ಜಡೆಮ್ಮನವರ ಹಾಗೂ ಸ್ನೇಹಿತರು ನಡೆಸಿದ್ದ ಅಭಿಯಾನದಿಂದ ಎಚ್ಚೆತ್ತ ಬಿಬಿಎಂಪಿ, ಕೊನೆಗೂ ಶಾಶ್ವತ ಶೌಚಾಲಯ ನಿರ್ಮಾಣ ಮಾಡಿದೆ.

ನಗರದ ಪ್ರಮುಖ ಸ್ಥಳವಾದ ಗೊರಗುಂಟೆಪಾಳ್ಯ ಮೂಲಕ ವಿವಿಧೆಡೆ ಸಂಚರಿಸುವ ‍ಪ್ರಯಾಣಿಕರು, 30 ವರ್ಷಗಳಿಂದ ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದರು. ಮಹಿಳೆಯರು, ವೃದ್ಧರ ಸ್ಥಿತಿಯಂತೂ ಹೇಳತೀರದಾಗಿತ್ತು. ಇದೀಗ, ತಂಗುದಾಣಕ್ಕೆ ಹೊಂದಿಕೊಂಡೇ ‘ಹಣ ಪಾವತಿಸಿ ಬಳಸಿ (ಪೇ ಆ್ಯಂಡ್ ಯೂಸ್)’ ಶೌಚಾಲಯ ನಿರ್ಮಿಸಲಾಗಿದೆ. ಸೆಪ್ಟೆಂಬರ್ 1ರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.

ತುಮಕೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನಗರಕ್ಕೆ ಬರುವ ಬಹುತೇಕ ವಾಹನಗಳು, ಗೊರಗುಂಟೆಪಾಳ್ಯ ಮಾರ್ಗವಾಗಿ ಹಾದು ಹೋಗುತ್ತವೆ. ಪ್ರಯಾಣಿಕರು ಇಳಿಯುವ ಹಾಗೂ ಹತ್ತುವ ಪ್ರಮುಖ ಸ್ಥಳವಿದು. ಇಂಥ ಸ್ಥಳದಲ್ಲಿ ವ್ಯವಸ್ಥಿತ ಶೌಚಾಲಯ ಇಲ್ಲದಿದ್ದರಿಂದ, ಮಲ–ಮೂತ್ರ ವಿಸರ್ಜನೆಗೆ ಜನರು ಪರದಾಡುವ ಸ್ಥಿತಿ ಇತ್ತು. ಸ್ಥಳೀಯರು ಬಿಬಿಎಂಪಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಶೌಚಾಲಯದ ಕನಸು ಈಡೇರಿರಲಿಲ್ಲ.

ADVERTISEMENT

100 ದಿನ ಅಭಿಯಾನ, ಮೊಬೈಲ್ ಶೌಚಾಲಯ: ತಾಯಿಯನ್ನು ತಮ್ಮೂರಿನ ಬಸ್‌ಗೆ ಹತ್ತಿಸಲು ಗೊರಗುಂಟೆಪಾಳ್ಯ ತಂಗುದಾಣಕ್ಕೆ ಹೋಗಿದ್ದಾಗ ಪಿಎಸ್‌ಐ ಶಾಂತಪ್ಪ ಅವರಿಗೆ ಶೌಚಾಲಯದ ಸಮಸ್ಯೆ ಗಮನಕ್ಕೆ ಬಂದಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಅವಾಗಲೇ, ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ಆರಂಭಿಸಿದ್ದರು.

ಅಭಿಯಾನಕ್ಕೆ ಸಾರ್ವಜನಿಕ
ರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾ
ಗಿತ್ತು. ಆದರೆ, 100 ದಿನ ಅಭಿಯಾನ ನಡೆದರೂ ಬಿಬಿಎಂಪಿಯಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಅವಾಗಲೇ, ಶಾಂತಪ್ಪ ಅವರು ಸ್ವಂತ ಖರ್ಚಿನಲ್ಲಿ ತಂಗುದಾಣ ಬಳಿಯೇ ಮೊಬೈಲ್ ಶೌಚಾಲಯ ಇರಿಸಿದ್ದರು.

'ಸ್ವಚ್ಛತೆಯೇ ಸ್ವರಾಜ್' ಎನ್ನುವ ಗಾಂಧೀಜಿ ತತ್ವ ಹಾಗೂ ‘ಸ್ವಚ್ಛ ಭಾರತ’ ಧ್ಯೇಯದಡಿ ಇರಿಸಿದ್ದ ಮೊಬೈಲ್ ಶೌಚಾಲಯವನ್ನು ತೃತೀಯ ಲಿಂಗಿ ಉದ್ಘಾಟಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಜನಪ್ರತಿನಿಧಿಗಳು, ಶಾಂತಪ್ಪ ಅವರ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಶೌಚಾಲಯ ನಿರ್ಮಾಣವಾಗಿದ್ದು, ಪಿಎಸ್‌ಐ ಅಭಿಯಾನ ಫಲ ನೀಡಿದೆ.

‘ಎಚ್ಚೆತ್ತ ಬಿಬಿಎಂಪಿಗೆ ಧನ್ಯವಾದ’

‘ನನ್ನ ತಾಯಿಗೆ ಬಂದ ಸಂಕಷ್ಟ ಮತ್ತ್ಯಾರಿಗೂ ಬಾರದಿರಲೆಂದು ಅಭಿಯಾನ ಆರಂಭಿಸಿದ್ದೆ. ಪ್ರಧಾನಮಂತ್ರಿ ಅವರ ಸ್ವಚ್ಛಭಾರತ ಅಭಿಯಾನವೇ ನನಗೆ ಪ್ರೇರಣೆ’ ಎಂದು ಪಿಎಸ್‌ಐ ಶಾಂತಪ್ಪ ಹೇಳಿದರು.

ಅಭಿಯಾನ ಯಶಸ್ವಿ ಬಗ್ಗೆ ಮಾತನಾಡಿದ ಅವರು, ‘ತುಮಕೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಜನರು ನಿತ್ಯವೂ ಗೊರಗುಂಟೆಪಾಳ್ಯದಿಂದ ಪ್ರಯಾಣಿಸುತ್ತಾರೆ. ಇವರೆಲ್ಲರೂ ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದರು. ಅಭಿಯಾನದಿಂದ ಎಚ್ಚೆತ್ತು ಶಾಶ್ವತ ಶೌಚಾಲಯ ನಿರ್ಮಿಸಿರುವ ಬಿಬಿಎಂಪಿ ಆಯುಕ್ತರು, ಸಚಿವ ಮುನಿರತ್ನ ಅವರಿಗೆ ಧನ್ಯವಾದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.