ADVERTISEMENT

ಬಿಬಿಎಂಪಿ ಗುತ್ತಿಗೆ ಅವ್ಯವಹಾರ: ಪುನರ್‌ ವಿಚಾರಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 16:10 IST
Last Updated 25 ಮಾರ್ಚ್ 2025, 16:10 IST
<div class="paragraphs"><p>ಬಿಬಿಎಂಪಿ ಕೇಂದ್ರ ಕಚೇರಿ</p></div>

ಬಿಬಿಎಂಪಿ ಕೇಂದ್ರ ಕಚೇರಿ

   

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಹಾಗೂ ಬಿಬಿಎಂಪಿಯಲ್ಲಿ 2005ರಿಂದ 2012ರ ಅವಧಿಯಲ್ಲಿ ನಡೆದ ಗುತ್ತಿಗೆ ಕಾಮಗಾರಿ ಅವ್ಯವಹಾರ ಆರೋಪದಡಿ ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಟಿ.ರಮೇಶ್‌ ಸೇರಿದಂತೆ ಹಾಲಿ ಹಾಗೂ ನಿವೃತ್ತ ಎಂಜಿನಿಯರ್‌ ಮತ್ತು ಗುತ್ತಿಗೆದಾರರ ವಿರುದ್ಧದ ಆರೋಪಗಳನ್ನು ಕೈಬಿಟ್ಟು ಅವರನ್ನು ಆರೋಪಗಳಿಂದ ಬಿಡುಗಡೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ 2023ರ ನವೆಂಬರ್ 8ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರಾವಲೋಕನ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ಇಡೀ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಿದೆ.

ADVERTISEMENT

‘ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಆಧಾರದ ಮೇಲೆ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು. ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ನೀಡಿರುವ ಪೂರ್ವಾನುಮತಿ ಆಧರಿಸಿ ವಿಚಾರಣಾ ಪ್ರಕಿಯೆ ಮುಂದುವರಿಸಬೇಕು’ ಎಂದು ಸೆಷನ್ಸ್‌ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

‘ಆರೋಪಗಳು ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿನಗರದ ಎಂಜಿನಿಯರಿಂಗ್ ವಿಭಾಗಗಳಲ್ಲಿ ನಡೆದಿರುವ ವಿವಿಧ ಕಾಮಗಾರಿಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಎಲ್ಲಾ ಆರೋಪಗಳೂ ಕಾಮಗಾರಿ ಗುತ್ತಿಗೆ ನೀಡಿ, ಅವ್ಯವಹಾರ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಕ್ಕೆ ಸಂಬಂಧಿಸಿದಂತೆಯೇ ಇವೆ. ಹೀಗಿರುವಾಗ, ಆರೋಪಿಗಳನ್ನು ಖುಲಾಸೆಗೊಳಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.