ADVERTISEMENT

ಬಿಬಿಎಂಪಿಯಿಂದಲೇ ಮರಗಳಿಗೆ ಕೊಡಲಿ

ಅರಣ್ಯ ಘಟಕದಿಂದ ಅನುಮತಿ ಪಡೆದಿಲ್ಲ, ಆಕ್ಷೇಪಣೆಗೂ ಅವಕಾಶ ನೀಡಿಲ್ಲ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 19:40 IST
Last Updated 6 ಡಿಸೆಂಬರ್ 2022, 19:40 IST
ಹೊಸಕೆರೆಹಳ್ಳಿಯಲ್ಲಿ ಮರಗಳನ್ನು ಕಡಿಯುತ್ತಿರುವ ಬಿಬಿಎಂಪಿ ಸಿಬ್ಬಂದಿ
ಹೊಸಕೆರೆಹಳ್ಳಿಯಲ್ಲಿ ಮರಗಳನ್ನು ಕಡಿಯುತ್ತಿರುವ ಬಿಬಿಎಂಪಿ ಸಿಬ್ಬಂದಿ   

ಬೆಂಗಳೂರು: ಹೊಸಕೆರೆಹಳ್ಳಿಯಲ್ಲಿ ಕೆರೆ ಏರಿ ಮೇಲೆ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿಬಿಬಿಎಂಪಿ ನೂರಾರು ವರ್ಷಗಳ ಹಳೆಯ ಬೃಹತ್‌ ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಏಕಾಏಕಿ ಕಡಿದು ಹಾಕಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಬಿಬಿಎಂಪಿಯ ಹಿರಿಯ ಎಂಜಿನಿಯರ್‌ಗಳಿಗೇ ಮಾಹಿತಿ ಇಲ್ಲ. ಕಿರಿಯ ಎಂಜಿನಿಯರ್‌ಗಳಲ್ಲಿ ವಿವರ ಕೇಳಬೇಕು ಎಂದು ಸಬೂಬು ನೀಡುತ್ತಿದ್ದಾರೆ. ಮರಗಳನ್ನು ಕಡಿಯುವ ಬಗ್ಗೆ ಅನುಮತಿ ಪಡೆದಿರುವ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ.

ಹೊಸಕೆರೆ ಏರಿ ಮೇಲೆ ಈಗಾಗಲೇ ರಸ್ತೆ ಇದ್ದು, ಅದನ್ನು ವಿಸ್ತರಣೆ ಮಾಡುವ ಕಾಮಗಾರಿಯನ್ನು ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗ ನಡೆಸುತ್ತಿದೆ. ಇಲ್ಲಿ ನೂರಾರು ಬೃಹತ್‌ ಮರಗಳಿದ್ದು, ಅವುಗಳಲ್ಲಿ ಹತ್ತಾರು ಮರಗಳನ್ನು ಯಾವುದೇ ಅನುಮತಿ ಇಲ್ಲದೆಸ್ಥಳೀಯ ಮುಖಂಡರ ಆಣತಿ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ನೆಲಕ್ಕೆ ಉರುಳಿಸಿದ್ದಾರೆ ಎಂದು ಸ್ಥಳೀಯರು ದೂರಿದರು.

ADVERTISEMENT

‘ಬಿಬಿಎಂಪಿಯ ಅರಣ್ಯ ಘಟಕದವರಿಗೆ ನಾಲ್ಕೈದು ಬಾರಿ ದೂರು ನೀಡಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಈ ಮರಗಳನ್ನು ಕಡಿಯುವ ಮುನ್ನ ಸಾರ್ವಜನಿಕ ಪ್ರಕಟಣೆ ನೀಡಿ ಅಭಿಪ್ರಾಯವನ್ನು ಪಡೆಯಬೇಕಿತ್ತು. ಇದ್ಯಾವುದೂ ಆಗದೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ರವಿನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದರು.

‘ಮರಗಳನ್ನು ಕಡಿಯುವ ಬಗ್ಗೆ ಯಾವುದೇ ರೀತಿಯ ಸಲಹೆ ಅಥವಾ ಆಕ್ಷೇಪಣೆಗೆ ಅವಕಾಶವನ್ನು ನೀಡಿಲ್ಲ. ಇಂತಹ ಬೃಹತ್‌ ಮರಗಳನ್ನು ಕಡಿದಿರುವುದರಿಂದ ಅದಕ್ಕೆ ಯಾವ ರೀತಿಯ ಬದಲಿ ವ್ಯವಸ್ಥೆ ಮಾಡಲಾಗುತ್ತದೆ ಎಂಬುದನ್ನು ಹೇಳಿಲ್ಲ. ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಇದೀಗ ಮರಗಳನ್ನು ಕಡಿಯುವುದನ್ನು ನಿಲ್ಲಿಸಲಾಗಿದೆ. ಬಿಬಿಎಂಪಿಯ ಮಾಜಿ ಸದಸ್ಯ ಎಂದು ಹೇಳಿಕೊಳ್ಳುವ ಚಂದ್ರ ಎಂಬುವವರು ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಿ, ಮರ ಕಡಿಯಲು ಹೇಳುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ವಿಚಾರಿಸಲಾಗುತ್ತದೆ: ‘ರಸ್ತೆ ಮೂಲಸೌಕರ್ಯದಿಂದ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಅನುಮತಿ ಇಲ್ಲದೆ ಮರಗಳನ್ನು ಕಡಿದಿರುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಸಹಾಯಕ ಎಂಜಿನಿಯರ್‌ಗಳನ್ನು ವಿಚಾರಿಸುತ್ತೇನೆ’ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆರೀಫ್‌ ಹೇಳಿದರು.

ಗಮನಕ್ಕೆ ಬಂದಿಲ್ಲ: ಅರಣ್ಯ ಘಟಕ

‘ಹೊಸಕೆರೆಹಳ್ಳಿ ಕೆರೆಯ ಸಮೀಪ ರಸ್ತೆಗಾಗಿ ಮರಗಳನ್ನು ಕಡಿಯುತ್ತಿರುವುದು ನಮ್ಮ ಇಲಾಖೆಯ ಗಮನಕ್ಕೆ ಬಂದಿಲ್ಲ. ಸ್ಥಳೀಯರು ಈ ಬಗ್ಗೆ ಕರೆ ಮಾಡಿದ್ದರು. ಈ ಬಗ್ಗೆ ವಿಚಾರಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಅನುಮತಿ ಇಲ್ಲದೆ, ಆಕ್ಷೇಪಣೆಗೆ ಅವಕಾಶ ಮಾಡಿಕೊಡದೆ ಮರಗಳನ್ನು ಕಡಿದಿದ್ದರೆ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಅರಣ್ಯ ಘಟಕದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವಿಂದರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.