ADVERTISEMENT

ಕಸ ಸಂಗ್ರಹ ಸ್ಥಗಿತಕ್ಕೆ ಬಿಬಿಎಂಪಿ ನಿರ್ಧಾರ

ತ್ಯಾಜ್ಯ ವಿಂಗಡಣೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವಿಫಲ l ಸಂಸ್ಕರಣೆ – ಪಾಲನೆಯಾಗದ ಸರ್ಕಾರದ ಆದೇಶ

Published 25 ನವೆಂಬರ್ 2022, 20:00 IST
Last Updated 25 ನವೆಂಬರ್ 2022, 20:00 IST
ಬೆಂಗಳೂರು ವಿವಿ ನ.21ರಂದು ನಡೆಸಿದ ಸ್ವಚ್ಛತಾ ಅಭಿಯಾನದಲ್ಲಿ ಸಂಗ್ರಹಿಸಿದ ಪ್ರತ್ಯೇಕಿಸದ ಕಸ ಶುಕ್ರವಾರ ಸಂಜೆಯೂ ಆವರಣದಲ್ಲೇ ಇತ್ತು
ಬೆಂಗಳೂರು ವಿವಿ ನ.21ರಂದು ನಡೆಸಿದ ಸ್ವಚ್ಛತಾ ಅಭಿಯಾನದಲ್ಲಿ ಸಂಗ್ರಹಿಸಿದ ಪ್ರತ್ಯೇಕಿಸದ ಕಸ ಶುಕ್ರವಾರ ಸಂಜೆಯೂ ಆವರಣದಲ್ಲೇ ಇತ್ತು   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ತ್ಯಾಜ್ಯ ವಿಂಗಡಣೆ ಮಾಡದ್ದರಿಂದ ಬಿಬಿಎಂಪಿ ಜನವರಿಯಿಂದ ತ್ಯಾಜ್ಯ ಸಂಗ್ರಹವನ್ನು ನಿಲ್ಲಿಸಲಿದೆ.

‘ಬೆಂಗಳೂರು ವಿವಿಯ ಎಲ್ಲ ವಿಭಾಗ, ಎಲ್ಲ ವಿದ್ಯಾರ್ಥಿನಿಲಯಗಳಿಂದ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಹಸಿ, ಒಣ, ಜೈವಿಕ ಎಂದು ಪ್ರತ್ಯೇಕವಾಗಿ ವಿಂಗಡಿಸುತ್ತಿಲ್ಲ ಮತ್ತು ತ್ಯಾಜ್ಯ ಸಂಸ್ಕರಣೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಘನತ್ಯಾಜ್ಯ ಸಂಗ್ರಹ ಸೇವೆಯನ್ನು ನಿಲ್ಲಿಸುತ್ತೇವೆ’ ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರು ಬೆಂಗಳೂರು ವಿವಿ
ಕುಲಪತಿಯವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿಯಲ್ಲಿ ‘ಜ್ಞಾನಭಾರತಿ ಆವರಣದಲ್ಲಿ ಕಸಕ್ಕೆ ಬೆಂಕಿ’ ಶೀರ್ಷಿಕೆಯಡಿ ಅ.28ರಂದು ವರದಿ ಪ್ರಕಟವಾಗಿತ್ತು. ಇದನ್ನೂ ಬಿಬಿಎಂಪಿ ನೋಟಿಸ್‌ನಲ್ಲಿ ನಮೂದಿಸಿದೆ.

ADVERTISEMENT

ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿಲ್ಲ. ವಿದ್ಯಾರ್ಥಿನಿಲಯಗಳಲ್ಲಿನ ತ್ಯಾಜ್ಯವನ್ನುವಿವಿ ಆವರಣದಲ್ಲೇ ಸಂಸ್ಕರಿಸಲು ಸರ್ಕಾರದ ‌ಆದೇಶವಿದ್ದರೂ ಅದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು 2021ರ ಏಪ್ರಿಲ್‌ನಿಂದಲೂ ಬಿಬಿಎಂಪಿ ‘ನೆನಪೋಲೆ’ಗಳನ್ನು ಕಳುಹಿಸುತ್ತಿದೆ.

ಬಿಬಿಎಂಪಿಯ ಪತ್ರಗಳಿಗೆ ವಿಶ್ವವಿದ್ಯಾಲಯದಿಂದ ಈವರೆಗೆಯೂ ಯಾವುದೇ ಉತ್ತರ ಬಂದಿಲ್ಲ.
ಆದರೆ ಒಂಬತ್ತು ವಿದ್ಯಾರ್ಥಿನಿಲಯಗಳಿದ್ದು, ಹೆಚ್ಚಿನ ಗಾಡಿಯನ್ನು ಒದಗಿಸಬೇಕು ಎಂದು ಕುಲಸಚಿವರು ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಹಾಗೂ ಬಿಬಿಎಂಪಿ ಸೂಚಿಸಿದಂತೆ ತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪನೆ ಬಗ್ಗೆ ಯಾವುದೇ ಮಾಹಿತಿಯನ್ನು ವಿಶ್ವವಿದ್ಯಾಲಯ ಈವರೆಗೂ ನೀಡಿಲ್ಲ.

ವಿವಿ ವಿದ್ಯಾರ್ಥಿನಿಲಯಗಳು, ಎಂಜಿನಿಯರಿಂಗ್‌, ಸ್ನಾತಕೋತ್ತರ ವಿಭಾಗ ಹಾಗೂ ಆಡಳಿತ ವಿಭಾಗದಿಂದ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದು ‘ಬೃಹತ್‌ ಪ್ರಮಾಣದ ತ್ಯಾಜ್ಯ ಉತ್ಪಾದಕ’ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ವಿವಿ ಆವರಣದಲ್ಲೇ ತ್ಯಾಜ್ಯ ಸಂಸ್ಕರಿಸಲು, ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು 2022ರ ಮಾರ್ಚ್‌ನಲ್ಲಿ ರಾಜರಾಜೇಶ್ವರಿ ವಲಯದ ಜಂಟಿ ಆಯುಕ್ತರು ಸೂಚಿಸಿದ್ದರು. ‘ಇದ್ಯಾವುದೂ ಇಂದಿಗೂ ಪಾಲನೆ ಆಗಿಲ್ಲ. ಈ ಎಲ್ಲ ಅಂಶಗಳ ವರದಿ ಆಧಾರದ ಮೇಲೆ ವಿವಿ ಆವರಣದಲ್ಲಿ ಕಸ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.