ಬೆಂಗಳೂರು: ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸಿ, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
‘ನಗರ ಪಾಲಿಕೆಗಳ ರಚನೆ ಬಗ್ಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಇನ್ನೂ ಮೂರ್ನಾಲ್ಕು ಶಾಸಕರ ಜತೆ ಚರ್ಚೆ ಮಾಡಿ, ಎಲ್ಲರ ಸಲಹೆ ಪಡೆದು, ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತದೆ’ ಎಂದು ಹೇಳಿದರು.
‘ಗ್ರೇಟರ್ ಬೆಂಗಳೂರು’ಗೆ ಸಂಬಂಧಿಸಿದಂತೆ ನಗರ ಶಾಸಕರು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮೇ 15ರಿಂದ ಬಿಬಿಎಂಪಿ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಂದೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ಜಾರಿಯಾಗಿದ್ದು, ಅದರ ನಂತರದ 120 ದಿನಗಳಲ್ಲಿ ಹೊಸ ನಗರಪಾಲಿಕೆಗಳನ್ನು ರಚನೆ ಮಾಡಲೇಬೇಕು. ಹೀಗಾಗಿ ಎಷ್ಟು ಪಾಲಿಕೆ ಮಾಡಬೇಕು ಎಂದು ಬೆಂಗಳೂರಿನ ಎಲ್ಲಾ ಶಾಸಕರ ಬಳಿ ಸಲಹೆಗಳನ್ನು ಕೇಳಿದ್ದೇನೆ. ನಂತರ ಮುಂದೆ ಎಲ್ಲೆಲ್ಲಿ ವಿಸ್ತರಣೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ’ ಎಂದರು.
‘ಮಳೆ ಪೀಡಿತ ಪ್ರದೇಶಗಳ ವ್ಯಾಪ್ತಿಯ ಶಾಸಕರ ಜತೆ ಚರ್ಚೆ ಮಾಡಿ, ತುರ್ತು ಕೆಲಸ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ಇದಕ್ಕೆ ಅಗತ್ಯವಿರುವ ಹಣವನ್ನು ಸರ್ಕಾರದಿಂದ ನೀಡುತ್ತೇವೆ. ಟ್ಯಾಂಕರ್ ನೀರಿನ ವಿಚಾರವಾಗಿ ದೂರು ಬಂದಿರುವ ಪ್ರದೇಶಗಳಲ್ಲಿ ಆಯಾ ಋತುವಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.
‘ನಗರದ ಪಾದಚಾರಿ ಮಾರ್ಗದಲ್ಲಿರುವ ಎಲ್ಲ ಅಂಗಡಿಗಳನ್ನೂ ತೆರವು ಮಾಡಲಾಗುತ್ತದೆ. 27,665 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ತಳ್ಳುವಗಾಡಿ ನೀಡಲಾಗುತ್ತದೆ. 3,755 ವ್ಯಾಪಾರಿಗಳು ವಾಹನಗಳನ್ನು ಕೇಳಿದ್ದಾರೆ. ಪಾದಚಾರಿ ಮಾರ್ಗದ ವ್ಯಾಪಾರಿಗಳನ್ನು ತೆರವುಗೊಳಿಸುವಾಗ ಶಾಸಕರು ಒತ್ತಡ ತರಬಾರದು. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ನಾವು ಒಂದೇ ಬಾರಿಗೆ ಇದನ್ನು ತೆರವುಗೊಳಿಸಲು ಆಗದಿದ್ದರೂ, ಹಂತ ಹಂತವಾಗಿ ಇದನ್ನು ಸರಿಪಡಿಸಲಾಗುವುದು ಎಂದು ಶಾಸಕರಿಗೂ ತಿಳಿಸಲಾಗಿದೆ’ ಎಂದರು.
‘ನಗರದ 25 ಲಕ್ಷ ಆಸ್ತಿಗಳ ಇ–ಖಾತಾ ಕರಡು ಸಿದ್ಧವಾಗಿದ್ದು, 5 ಲಕ್ಷ ಆಸ್ತಿಗಳ ಅಂತಿಮ ಇ–ಖಾತಾ ಡಿಜಿಟಲೀಕರಣ ಪೂರ್ಣಗೊಂಡಿದೆ. ತೆರಿಗೆ ಹಾಗೂ ಆಸ್ತಿ ದಾಖಲಾತಿಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್ ಇ–ಗವರ್ನೆನ್ಸ್ ಪ್ರಶಸ್ತಿ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.
ಬಿಬಿಎಂಪಿ ವಿಭಜನೆ ಬಗ್ಗೆ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಅವರು ನಿಮ್ಮ ಮುಂದೆ ಏನು ಹೇಳುತ್ತಾರೋ ಗೊತ್ತಿಲ್ಲ. ಆದರೆ ನನ್ನ ಬಳಿ ಅವರು ಏನು ಹೇಳುತ್ತಾರೆ ಎಂಬುದು ನನಗೆ ಮಾತ್ರ ಗೊತ್ತಿದೆ’ ಎಂದು ಡಿ.ಕೆ. ಶಿವಕುಮಾರ್ ಉತ್ತರಿಸಿದರು.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ನಗರದಲ್ಲಿ ಪಾದಚಾರಿ ಮಾರ್ಗ, ಬೀದಿಬದಿ ಅಂಗಡಿಗಳ ತೆರವು, ವ್ಯಾಪಾರಿಗಳಿಗೆ ವಾಹನ ಸೌಲಭ್ಯ
ಕಾನೂನು ಬಾಹಿರವಾಗಿ ಹಾಕಿರುವ ಆಪ್ಟಿಕಲ್ ಕೇಬಲ್ ಕತ್ತರಿಸಬೇಕು
ಶಾಸಕರು ರಸ್ತೆ ವಿಸ್ತರಣೆಗೆ ಶಿಫಾರಸು ಮಾಡಿದರೆ ಟಿಡಿಆರ್ ನೀಡಲು ಸಿದ್ಧ
ಮಳೆಯ ನೀರು ನುಗ್ಗಿರುವ ಮನೆಗಳವರಿಗೆ ₹10 ಸಾವಿರ ಪರಿಹಾರ
ರಾಜಕಾಲುವೆ ಬಫರ್ ವಲಯದಲ್ಲಿ 300 ಕಿ.ಮೀ ರಸ್ತೆ ನಿರ್ಮಿಸಲು ಶಾಸಕರು ಸಲಹೆ ನೀಡಬಹುದು
ರಸ್ತೆಗಳಲ್ಲಿ ಪಾರ್ಕಿಂಗ್ ಇಲ್ಲದ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ
ಕೆಂಪೇಗೌಡ ಬಡಾವಣೆಯಲ್ಲಿ ‘ಆಕಾಶ ಗೋಪುರ’
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ‘ಆಕಾಶ ಗೋಪುರ’ (ಸ್ಕೈಡೆಕ್) ನಿರ್ಮಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
‘ಆಕಾಶ ಗೋಪುರ’ವನ್ನು ಹೆಮ್ಮಿಗೆಪುರದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರ ಇರಬೇಕು ಎಂಬ ಕಾರಣದಿಂದ ಅಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಇದನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿರುವ ಬಿಡಿಎ ಜಾಗದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಸ್ತೆಗಳಲ್ಲಿ ಹಳೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವ ಬಗ್ಗೆ ದೂರು ಬಂದಿದ್ದು, ಕಂದಾಯ ಇಲಾಖೆಯಿಂದ 100 ಎಕರೆ ಜಾಗ ಒದಗಿಸಿ, ಆ ಎಲ್ಲಾ ವಾಹನಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಂಚಾರ ಪೊಲೀಸರಿಗೆ ಸೂಚಿಸಲಾಗಿದೆ. ಪಾಲಿಕೆ ಕಾನೂನಿನ ಪ್ರಕಾರ, 21 ದಿನ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ತೆಗೆಯದಿದ್ದರೆ ಅದನ್ನು ‘ಅನಾಥ ವಾಹನ’ ಎಂದು ಪರಿಗಣಿಸಿ ಹರಾಜು ಹಾಕಲು ಅವಕಾಶವಿದೆ. ಇನ್ನು ಪೊಲೀಸರು ನಿಗದಿ ಮಾಡುವ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ ಎಂದರು.
ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ಮುಖ್ಯರಸ್ತೆ ಜತೆ ವಿಲೀನ ಮಾಡಿ ಸುಗಮವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸುಮಾರು 50 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗುವು ಎಂದು ತಿಳಿಸಿದರು.
ಸುರಂಗ ರಸ್ತೆಗೆ ಶೀಘ್ರ ಟೆಂಡರ್
ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎರಡು ಹಂತದ ಸುರಂಗ ರಸ್ತೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮೊದಲ ಹಂತದ ‘ಅವಳಿ ಭೂಗತ ಸುರಂಗ ರಸ್ತೆ’ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಇಲಾಖೆಯ ಡಿಜಿಪಿ, ಐಜಿಪಿ ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸುರಂಗ ರಸ್ತೆಗೆ ವಿಧಾನಸೌಧದ ಒಂದು ಕಿ.ಮೀ ಸುತ್ತಮುತ್ತ ಎಲ್ಲೂ ನಿರ್ಗಮನಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಇಲ್ಲಿ ಸಂಚಾರ ದಟ್ಟಣೆಯಾದರೆ ಎಲ್ಲಾಕಡೆ ಆಗುತ್ತದೆ. ಹೀಗಾಗಿ ಇದನ್ನು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ 114 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದ್ದು, ಅದಕ್ಕೂ ಸಂಚಾರ ಪೊಲೀಸ್ ಅಧಿಕಾರಿಗಳಿಂದ ಸಲಹೆ ಪಡೆಯಲಾಗಿದೆ ಎಂದು ತಿಳಿಸಿದರು.
ಕಸ ವಿಲೇವಾರಿಗೆ ಶೀಘ್ರ ಟೆಂಡರ್: ನಗರದ ಕಸ ವಿಲೇವಾರಿಗೆ ದೊಡ್ಡ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಎರಡು, ಇತರೆ ಕ್ಷೇತ್ರಕ್ಕೆ ಒಂದೊಂದರಂತೆ ಒಟ್ಟು 33 ಪ್ಯಾಕೇಜ್‌ಗಳನ್ನು ಕರೆಯಲು ತೀರ್ಮಾನಿಸಿದ್ದೇವೆ. ಸುಮಾರು ₹4000 ಕೋಟಿ ಮೊತ್ತದ ಈ ಯೋಜನೆಗೆ ಏಳು ವರ್ಷಗಳ ಅವಧಿಗೆ ಟೆಂಡರ್ ಕರೆಯಲಾಗುತ್ತಿದೆ ಎಂದು ಹೇಳಿದರು.
‘ಸ್ವಚ್ಛ ಬೆಂಗಳೂರು’ ಕಾರ್ಯಕ್ರಮದ ಮೂಲಕ ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಇತರೆ ಕಸವನ್ನು ಒಮ್ಮೆಲೇ ಸ್ವಚ್ಛ ಮಾಡಲು ತೀರ್ಮಾನಿಸಲಾಗಿದೆ. ನಾಗರಿಕರು ಕೂಡ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿ, ಎಲ್ಲೆಲ್ಲಿ ಕಸ ಇದೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಆ್ಯಪ್ ಅಥವಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ, ಅಲ್ಲಿರುವ ಕಸವನ್ನು ತೆಗೆಯಲಾಗುವುದು. ಇದಕ್ಕಾಗಿ ಅಧಿಕಾರಿಗಳು, ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ ಎಂದರು. ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ 15 ದಿನದಲ್ಲಿ ಟೆಂಡರ್ ಕರೆಯಲಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.