ADVERTISEMENT

243 ವಾರ್ಡ್ ರಚನೆ ಬಳಿಕವೇ ಬಿಬಿಎಂಪಿ ಚುನಾವಣೆ: ಅಶೋಕ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 16:47 IST
Last Updated 6 ಡಿಸೆಂಬರ್ 2020, 16:47 IST
ಆರ್‌ ಅಶೋಕ
ಆರ್‌ ಅಶೋಕ    

ಬೆಂಗಳೂರು: ‘ವಾರ್ಡ್‌ಗಳ ಸಂಖ್ಯೆಯನ್ನು243ಕ್ಕೆ ಹೆಚ್ಚಿಸಿ ಮರುವಿಂಗಡಣೆ ಮಾಡಿದ ಬಳಿಕವೇ ಬಿಬಿಎಂಪಿ ಚುನಾವಣೆ ನಡೆಸುವ ಇಚ್ಛೆಯನ್ನು ಸರ್ಕಾರ ಹೊಂದಿದೆ. ಈ ಸಲುವಾಗಿ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತ್ಯೇಕ ಮಸೂದೆ ಮಂಡನೆಗೂ ಸಿದ್ಧತೆ ನಡೆದಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಅಧಿವೇಶನದಲ್ಲಿ ಬಿಬಿಎಂಪಿ ಮಸೂದೆ ಮಂಡಿಸಲಿದ್ದೇವೆ. ಈ ಮಸೂದೆ ಅಂಗೀಕಾರಗೊಂಡರೆ, ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್‌ ಇತ್ತೀಚೆಗೆ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಪ್ರಮೇಯವೇ ಎದುರಾಗದು’ ಎಂದರು.

ಈಗಿರುವ 198 ವಾರ್ಡ್‌ಗಳ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಬಿಬಿಎಂಪಿಗೆ ಶೀಘ್ರವೇ ಚುನಾವಣೆ ನಡೆಸಬೇಕು. ಆರು ವಾರಗಳ ಒಳಗೆ ಈ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್‌ ಆದೇಶ ಮಾಡಿತ್ತು.

ADVERTISEMENT

‘ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದೇವೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರೂಪಿಸುವ ಸಲುವಾಗಿ ರಚಿಸಲಾಗಿದ್ದ ವಿಧಾನ ಮಂಡಲದ ಜಂಟಿ ಸಲಹಾ ಸಮಿತಿಯೇ ಈ ಮಸೂದೆಯನ್ನು ರೂಪಿಸಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವುದರ ಜೊತೆ ಮೇಯರ್‌ ಅಧಿಕಾರಾವಧಿಯನ್ನು ಎರಡೂವರೆ ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪವೂ ಇದೆ. ವಲಯಗಳ ಸಂಖ್ಯೆಯನ್ನು 12ಕ್ಕೆ ಅಥವಾ 15ಕ್ಕೆ ಹೆಚ್ಚಿಸುವ ಅಂಶವೂ ಮಸೂದೆಯಲ್ಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.