ADVERTISEMENT

ಬಿಬಿಎಂಪಿ: 243 ವಾರ್ಡ್‌ಗಳಿಗೇ ಚುನಾವಣೆ ನಡೆಸಬೇಕು– ಕೆಪಿಸಿಸಿ ರಚಿಸಿದ್ದ ಸಮಿತಿ

ಒಂದೆರಡು ದಿನದಲ್ಲಿ ಕಾಂಗ್ರೆಸ್‌ ಸಮಿತಿಯಿಂದ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 0:41 IST
Last Updated 7 ಜೂನ್ 2023, 0:41 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ ಮತ್ತೆ ಕೈಹಾಕದೆ, 243 ವಾರ್ಡ್‌ಗಳಿಗೇ ಚುನಾವಣೆ ನಡೆಸಬೇಕು. ಮೀಸಲಾತಿಯನ್ನು ಪ್ರಕಟಿಸಿ, ಈ ವರ್ಷದ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕು ಎಂದು ಕೆಪಿಸಿಸಿ ರಚಿಸಿದ್ದ ‘ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ ಅಭಿಪ್ರಾಯಪಟ್ಟಿದೆ.

‘ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಯಲ್ಲಿ ಬಿಜೆಪಿಯ ದುರುದ್ದೇಶ ಹಾಗೂ ರಾಜಕೀಯ ಲಾಭ ಕಾಣುತ್ತಿದೆ. ಹೀಗಾಗಿ ಹೊಸ ವಾರ್ಡ್‌ಗಳ ಬದಲಿಗೆ ಹಿಂದಿನಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂದು ಸಮಿತಿಯಲ್ಲಿ ಚರ್ಚೆಯಾಯಿತು. ಆದರೆ, ಕಾಯ್ದೆ ತಿದ್ದುಪಡಿ ಮಾಡಿ 243 ವಾರ್ಡ್‌ಗಳ ಅಧಿಸೂಚನೆ ಹೊರಡಿಸಿರುವುದರಿಂದ ಅದನ್ನು ಬದಲಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಸದಸ್ಯರಿಂದ ವ್ಯಕ್ತವಾಯಿತು’ ಎಂದು ಮೂಲಗಳು ತಿಳಿಸಿವೆ.

‘ಬಿಬಿಎಂಪಿಯನ್ನು ಎರಡು ಅಥವಾ ಮೂರು ಭಾಗವನ್ನಾಗಿಸುವ ಬಗ್ಗೆ ಸಮಿತಿಯಲ್ಲಿ ಚರ್ಚೆಯಾದರೂ, ಅದು ಸದ್ಯಕ್ಕೆ ಸಾಧ್ಯವಿಲ್ಲ. ಚುನಾವಣೆಯನ್ನು ಮಾಡೋಣ, ನಂತರ ಬೇಕಾದರೆ ಭಾಗ–ವಿಭಾಗ ಮಾಡಿಕೊಳ್ಳಬಹುದು. ಇದೀಗ ಕಾಂಗ್ರೆಸ್‌ ಪರ ಅಲೆ ಇರುವುದರಿಂದ ಕೂಡಲೇ ಚುನಾವಣೆ ನಡೆಸಿ, ಅಧಿಕಾರ ಪಡೆಯಬಹುದು ಎಂದು ಸದಸ್ಯರು ಸಲಹೆ ನೀಡಿದರು’ ಎನ್ನಲಾಗಿದೆ.

ADVERTISEMENT

ವಿಧಾನಸಭೆ ಚುನಾ‌ವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ನಂತರ, ಬಿಬಿಎಂಪಿ ಚುನಾವಣೆಯನ್ನೂ ನಡೆಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ 10 ಸದಸ್ಯರ ‘ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ಯನ್ನು ಮೇ 24ರಂದು ರಚಿಸಿದ್ದರು. 15 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದರು.

ಒಂದೆರಡು ದಿನಗಳಲ್ಲಿ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುವುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ‘243 ವಾರ್ಡ್‌ಗಳ ರಚನೆಯಾಗಿದೆ. ಅವುಗಳ ಮೀಸಲಾತಿಯನ್ನು ನ್ಯಾಯಾಲಯ ರದ್ದುಪಡಿಸಿರುವುದರಿಂದ, ಹೊಸದಾಗಿ ಮೀಸಲಾತಿ ಪ್ರಕಟಿಸಬೇಕು. ಆದಷ್ಟು ಬೇಗ ಚುನಾವಣೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಸಮಿತಿ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದರು.

‘ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಿದೆ. ಅದಕ್ಕೆ ಅಗತ್ಯವಾದ ಮೀಸಲಾತಿ ಹೊರಡಿಸಿ, ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು. ಚುನಾವಣೆ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು ಎಂಬ ಸಲಹೆ ನೀಡಲಾಗಿದೆ’ ಎಂದರು.

ಕಾಂಗ್ರೆಸ್‌ನ ‘ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ಯಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ, ಬೈರತಿ ಸುರೇಶ್‌, ಸಂಸದ ಡಿ.ಕೆ. ಸುರೇಶ್‌, ಶಾಸಕರಾದ ಎನ್‌.ಎ. ಹ್ಯಾರೀಸ್‌, ಪ್ರಿಯಕೃಷ್ಣ, ಎ.ಎಸ್‌. ಪೊನ್ನಣ್ಣ, ಮಾಜಿ ಶಾಸಕ ರಮೇಶ್‌ ಬಾಬು, ಮಾಜಿ ಮೇಯರ್‌ ಪದ್ಮಾವತಿ ಸದಸ್ಯರಾಗಿದ್ದಾರೆ. ಮಾಜಿ ಮೇಯರ್‌ ಪಿ.ಆರ್‌. ರಮೇಶ್‌ ಸಂಚಾಲಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.