ADVERTISEMENT

ಅಧಿಕಾರಿಯ ಲಂಚದ ಹಣ ಮರುಪಾವತಿಗೆ ದೇಣಿಗೆ ಸಂಗ್ರಹ!

ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 16:52 IST
Last Updated 13 ಜನವರಿ 2021, 16:52 IST
ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ದೇಣಿಗೆ ಸಂಗ್ರಹಿಸುವ ಮೂಲಕ ಆರೋಗ್ಯಾಧಿಕಾರಿ ಡಾ. ಸುರೇಶ್‌ ರುದ್ರಪ್ಪ ವಿರುದ್ಧ ಬುಧವಾರ ಪ್ರತಿಭಟಿಸಿದರು.
ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ದೇಣಿಗೆ ಸಂಗ್ರಹಿಸುವ ಮೂಲಕ ಆರೋಗ್ಯಾಧಿಕಾರಿ ಡಾ. ಸುರೇಶ್‌ ರುದ್ರಪ್ಪ ವಿರುದ್ಧ ಬುಧವಾರ ಪ್ರತಿಭಟಿಸಿದರು.   

ಬೆಂಗಳೂರು: ಕಾರ್ಯಕ್ರಮ, ಹಬ್ಬ, ಉತ್ಸವಗಳನ್ನು ಏರ್ಪಡಿಸಲು, ವಿಕೋಪ ಸಂತ್ರಸ್ತರಿಗೆ ನೀಡಲು ದೇಣಿಗೆ ಸಂಗ್ರಹಿಸುವುದು ಮಾಮೂಲಿ. ಲಂಚ ನೀಡಿ ನಿರ್ದಿಷ್ಟ ಹುದ್ದೆಗೆ ನಿಯುಕ್ತಿಗೊಂಡ ಅಧಿಕಾರಿಗೆ ಆ ಹಣವನ್ನು ಮರುಪಾವತಿ ಮಾಡುವ ಸಲುವಾಗಿ ದೇಣಿಗೆ ಸಂಗ್ರಹಿಸುವುದನ್ನು ನೋಡಿದ್ದೀರಾ. ಇಂತಹ ಅಪೂರ್ವ ವಿದ್ಯಮಾನಕ್ಕೆ ಬಿಬಿಎಂಪಿ ಕೇಂದ್ರ ಕಚೇರಿ ಬುಧವಾರ ಸಾಕ್ಷಿಯಾಯಿತು.

ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಪಾಲಿಕೆ ಕೇಂದ್ರ ಕಚೇರಿ ಪರಿಸರದಲ್ಲಿ ಬುಧವಾರ ದೇಣಿಗೆ ಸಂಗ್ರಹಿಸುವ ಮೂಲಕ ಅಧಿಕಾರಿಯೊಬ್ಬರ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಎರವಲು ಸೇವೆ ಮೂಲಕ ನೇಮಕಗೊಂಡಿರುವ ದಾಸರಹಳ್ಳಿ ಹಾಗೂ ಮಲ್ಲೇಶ್ವರ ಕ್ಷೇತ್ರಗಳ ಆರೋಗ್ಯಾಧಿಕಾರಿ ಡಾ.ಸುರೇಶ್ ರುದ್ರಪ್ಪ ಅವರಿಗೆ ನೀಡಲು ನಾವು ದೇಣಿಗೆ ಸಂಗ್ರಹಿಸಿದ್ದೇವೆ. ತಮ್ಮ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ದರ್ಪ ತೋರುವ ಸುರೇಶ್‌ ಮಾತೆತ್ತಿದರೆ, ‘ನಾನು ಹಣ ಕೊಟ್ಟು ಈ ಹುದ್ದೆಗೆ ಬಂದಿದ್ದೇನೆ’ ಎನ್ನುತ್ತಾರೆ. ಅವರು ಈ ಹುದ್ದೆಗೆ ಬರಲು ಮಾಡಿರುವ ವೆಚ್ಚವನ್ನು ಭರಿಸಲು ನಾವು ಭಿಕ್ಷೆ ಬೇಡುತ್ತಿದ್ದೇವೆ’ ಎಂದು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸುರೇಶ್‌ ಅವರ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರ ವರ್ತನೆಯಿಂದಾಗಿ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಅವರು ಅಧೀನದ ಸಿಬ್ಬಂದಿ ವಿರುದ್ಧ ಕೆಟ್ಟ ಪದ ಬಳಸಿ ಬಯ್ಯುತ್ತಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಂದಿರುವ ಅವರನ್ನು ಮಾತೃ ಇಲಾಖೆಗೆ ಕಳುಹಿಸಬೇಕು. ಅವರ ಬದಲು ದಕ್ಷ ಅಧಿಕಾರಿಯನ್ನು ನೇಮಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಯಾವುದಾದರೂ ಅಧಿಕಾರಿಗೆ ಹೆಚ್ಚುವರಿ ಹೊಣೆ ವಹಿಸುವಾಗ ಪಕ್ಕದ ಕ್ಷೇತ್ರವನ್ನು ಆಯ್ಕೆ ಮಾಡಲಾಗುತ್ತದೆ. ದಾಸರಹಳ್ಳಿ ಹಾಗೂ ಮಲ್ಲೇಶ್ವರ ಕ್ಷೇತ್ರಗಳ ನಡುವೆ 10 ಕಿ.ಮೀ ಅಂತರವಿದೆ. ಕೋವಿಡ್‌ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ದಾಸರಹಳ್ಳಿಯ ಆರೋಗ್ಯಾಧಿಕಾರಿಯಾಗಿರುವ ಸುರೇಶ್‌ ಅವರಿಗೆ ಮಲ್ಲೇಶ್ವರದ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಿರುವುದರ ಮರ್ಮವೇನು’ ಎಂದು ಅವರು ಪ್ರಶ್ನಿಸಿದರು.

ಸಂಘದ ಪ್ರಮುಖರಾದ ಕೆ.ಜಿ.ರವಿ, ಎಸ್.ಜಿ.ಸುರೇಶ್, ಸಾಯಿಶಂಕರ್ ,ರಾಮಚಂದ್ರ, ಕೆ.ಮಂಜೇಗೌಡ, ಸಂತೋಷ್ ನಾಯಕ್ ,ನರಸಿಂಹ ಹಾಗೂ ಲಕ್ಷ್ಮಿ ಸೇರಿದಂತೆ ಅನೇಕರು ಪ್ರತಿಭಟನಾರ್ಥ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ಭಾಗವಹಿಸಿದರು.

‘ಭ್ರಷ್ಟ ಸಿಬ್ಬಂದಿಗೆ ಸಹಕರಿಸದ ಕಾರಣ ಸೇಡಿನ ಕ್ರಮ’

‘ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ನನ್ನ ಅಧೀನದ ಆರೋಗ್ಯ ಪರೀವೀಕ್ಷಕರೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)ಅಧಿಕಾರಿಗಳು ಇತ್ತೀಚೆಗೆ ಬಂಧಿಸಿದರು. ಆ ಅಧಿಕಾರಿಯನ್ನು ರಕ್ಷಿಸಲು ನೆರವಾಗಲಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಗ್ಯಾಧಿಕಾರಿ ಡಾ.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.