ಬಿಬಿಎಂಪಿ ಬೀದಿ ನಾಯಿಗಳಿಗೆ ಆಹಾರ ನೀಡುವ ಯೋಜನೆ ಆರಂಭಿಸಿದಾಗ...
ಸಂಗ್ರಹ ಚಿತ್ರ
ಬೆಂಗಳೂರು: ಬೀದಿ ನಾಯಿಗಳಿಗೆ ನಿಗದಿತ ಪ್ರದೇಶದಲ್ಲಿ ಆಹಾರ ಹಾಕುವುದನ್ನು ನಿಷೇಧಿಸುವಂತಿಲ್ಲ, ವಿರೋಧಿಸುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕು ಪ್ರಾಣಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಸಮುದಾಯ ಪ್ರಾಣಿಗಳನ್ನು ಹೊಡೆದರೆ ಅಥವಾ ಹಿಂಸಿಸಿದರೆ ದಂಡ ಅಥವಾ ಜೈಲು ಶಿಕ್ಷೆಯಾಗುತ್ತದೆ.
‘ಸಮುದಾಯ ಪ್ರಾಣಿಗಳ’ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿರುವ ಬಿಬಿಎಂಪಿ, ಜನವರಿ 15ರಿಂದ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಲು ಸನ್ನದ್ಧವಾಗಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960, ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 ಮತ್ತು ಭಾರತೀಯ ಜೀವಜಂತು ಕಲ್ಯಾಣ ಮಂಡಳಿಯ (ಎಡಬ್ಲ್ಯುಬಿಐ) ನಿಯಮಗಳು ಹಾಗೂ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ಆದೇಶದಂತೆ ಬಿಬಿಎಂಪಿ ನಿಯಮ ರೂಪಿಸಿದೆ. ಇದನ್ನು ಉಲ್ಲಂಘಿಸಿದವರಿಗೆ ಮೂರು ತಿಂಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯಾಗಲಿದೆ.
ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಆಹಾರ, ಆಶ್ರಯ, ಔಷಧ, ಸುರಕ್ಷಿತ ಸ್ಥಳಗಳು ಅಗತ್ಯವಾಗಿದ್ದು, ಅವುಗಳನ್ನು ಒದಗಿಸಬೇಕು. ಪ್ರಾಣಿಗಳಿಗೂ ಐದು ಸ್ವಾತಂತ್ರ್ಯಗಳಿವೆ. ಪ್ರಾಣಿಗಳು ದಾಹ, ಹಸಿವು, ಅಪೌಷ್ಟಿಕತೆ ಹೊಂದಿರದ; ಅಸ್ವಸ್ಥತೆ ಹೊಂದಿರದ; ನೋವು, ಗಾಯ, ರೋಗಗಳನ್ನು ಹೊಂದಿರದ; ಭಯ, ಸಂಕಟ ಹೊಂದಿರದ; ಸಾಮಾನ್ಯ ನಡವಳಿಕೆಯನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತವೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಸಾಕಲು ಪರವಾನಗಿ: ಚಿಂತನೆ
‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳನ್ನು ಸಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಪರವಾನಗಿ ನೀಡುವ ಚಿಂತನೆ ಇದೆ. ಈ ವಿಚಾರವಾಗಿ ಕೈಗೊಳ್ಳಬೇಕಾದ ಕ್ರಮಗಳ ಸ್ಪಷ್ಟ ಸೂಚನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಮಾಹಿತಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪಶು ಸಂಗೋಪನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಕು ನಾಯಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಸಾಕಲು ಅನುಮತಿ ಹಾಗೂ ಅವುಗಳ ಗಣತಿ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಬೀದಿ ನಾಯಿಗಳ ಗಣತಿಯಾಗಿದ್ದರೂ ಅದೇ ಅಂತಿಮವಲ್ಲ. ಶೇ 20ರಷ್ಟು ಹೆಚ್ಚು ಕಡಿಮೆ ಇರಬಹುದು’ ಎಂದರು.
ಬೀದಿ ನಾಯಿಗಳಿಗೆ ಆಹಾರ–ನಿಯಮಗಳು
ಪ್ರತಿದಿನ ಆಹಾರ ನೀಡಲು ಆರ್ಥಿಕವಾಗಿ ಸಬಲರಾಗಿದ್ದರೆ, ದೈಹಿಕವಾಗಿ ಸಮರ್ಥರಾಗಿದ್ದರೆ ಮಾತ್ರ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಪ್ರಾರಂಭಿಸಬೇಕು
ಬೀದಿ ನಾಯಿಗಳಿಗೆ ರಾತ್ರಿ 11.30ರಿಂದ ಬೆಳಿಗ್ಗೆ 5ರವರೆಗೆ ಆಹಾರ ನೀಡುವಂತಿಲ್ಲ. ಪೊದೆಗಳು ಸೇರಿದಂತೆ ದೂರದ ಪ್ರದೇಶದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡಲು ಹೋಗಬಾರದು
ಬೇರೆಯವರ ಮನೆ ಮುಂದೆ, ಆಸ್ತಿಯಲ್ಲಿ, ಪಾರ್ಕಿಂಗ್ ಪ್ರದೇಶದಲ್ಲಿ ಆಹಾರ ಹಾಕಬಾರದು. ಮರುಬಳಸುವ ತಟ್ಟೆಗಳನ್ನು ಬಳಸಿ ಆಹಾರ ನೀಡಬೇಕು
ಬೀದಿ ನಾಯಿಗಳು ತಿಂದು ಉಳಿದ ಆಹಾರವನ್ನು ಅಲ್ಲೇ ಬಿಡದೆ ಸ್ವಚ್ಛಗೊಳಿಸಬೇಕು. ಹೆಚ್ಚು ನಾಗರಿಕರು ಓಡಾಡುವ ಪ್ರದೇಶದಲ್ಲಿ ಆಹಾರವನ್ನು ಹಾಕಬಾರದು
ಶಿಕ್ಷಣ ಸಂಸ್ಥೆ, ಟೆಕ್ ಪಾರ್ಕ್ ಅಥವಾ ಯಾವುದೇ ಸಂಘ– ಸಂಸ್ಥೆಗಳ ಪ್ರದೇಶದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೊದಲು ಸಮ್ಮತಿ ಪಡೆದುಕೊಳ್ಳಬೇಕು
ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳಿಗೆ ಸೂಚನೆ
ಸಂಘ–ಅಸೋಸಿಯೇಷನ್‌ಗಳ ಬೈ–ಲಾದಲ್ಲಿ ಸಾಕುಪ್ರಾಣಿಗಳ ಪಾಲನೆಗೆ ವಿರುದ್ಧ ಅಥವಾ ನಿಷೇಧಿಸುವ ಯಾವುದೇ ನಿಯಮ ರೂಪಿಸುವಂತಿಲ್ಲ
ಎಲ್ಲರೂ ಉಪಯೋಗಿಸುವ ಸ್ಥಳದಲ್ಲಿ ಸಾಕುಪ್ರಾಣಿಗೆ ಅವಕಾಶವಿರಬೇಕು. ಲಿಫ್ಟ್‌ನಲ್ಲಿ ಬೆಲ್ಟ್‌ನೊಂದಿಗೆ ಸಾಕುಪ್ರಾಣಿಯನ್ನು ಕೊಂಡೊಯ್ಯಲು ಅನುಮತಿಸಬೇಕು
ಮನುಷ್ಯರು ಮಾತನಾಡುವಂತೆ ನಾಯಿಗಳು ಬೊಗಳುವುದು ಭಾವನಾತ್ಮಕ ಪ್ರಕ್ರಿಯೆ. ಅದನ್ನು ತಡೆಯುವಂತೆ ಸಾಕುಪ್ರಾಣಿ ಮಾಲೀಕರನ್ನು ಒತ್ತಾಯಿಸುವಂತಿಲ್ಲ
ಸಂಘ– ಸಂಸ್ಥೆಗಳು ಸಾಕು ಪ್ರಾಣಿಗಳ ಅಗತ್ಯ ವ್ಯಾಯಾಮಕ್ಕೆ ಅವುಗಳು ಓಡಾಡಲು, ಆಟವಾಡಲು ಬೆಳಿಗ್ಗೆ ಹಾಗೂ ಸಂಜೆ ಸಮಯವನ್ನು ಪ್ರತ್ಯೇಕವಾಗಿ ನಿಗದಿಪಡಿಸಬೇಕು
ಸಾಕು ನಾಯಿಗಳಿಗೆ ಯಾವುದೇ ರೀತಿಯ ಪಂಜರದಲ್ಲಿ ಇರಿಸುವಂತಿಲ್ಲ. ಸಾಕು ನಾಯಿಗಳ ಬಾಯಿಗೆ ಕವಚ ಧರಿಸಬೇಕು ಎಂದು ಸೂಚಿಸುವಂತಿಲ್ಲ.
ಮಾಲೀಕರೇನು ಮಾಡಬೇಕು?
ಮನೆಯಲ್ಲಿ ನಾಯಿಗಾಗಿ ಹೆಚ್ಚು ಸ್ಥಳವನ್ನು ನಾಯಿ ಸಾಕುವವರು ಖಚಿತಪಡಿಸಿಕೊಳ್ಳಬೇಕು. ಎಷ್ಟು ನಾಯಿಗಳಿವೆ ಎಂದು ನಿವಾಸಿಗಳ ಸಂಘಕ್ಕೆ ಮಾಹಿತಿ ನೀಡಬೇಕು
ಸಾಕು ನಾಯಿಗೆ ಅಗತ್ಯ ಲಸಿಕೆ ಕೊಡಿಸಬೇಕು, ನೆರೆಯವರಿಗೆ ಸಮಸ್ಯೆಯಾಗದ ರೀತಿಯಲ್ಲಿ ಮನೆ, ಬಾಲ್ಕನಿ, ಟೆರೇಸ್‌ನಲ್ಲಿ ಯಾವಾಗಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು
ಸಾಕು ನಾಯಿಗೆ ಸ್ವಚ್ಛ ಸ್ಥಳ ಹಾಗೂ ಸೂಕ್ತ ಹಾಸಿಗೆ ಒದಗಿಸಬೇಕು. ಯಾವುದೇ ರೀತಿಯ ಚಾವಣಿ ಇಲ್ಲದ ಪ್ರದೇಶದಲ್ಲಿ ಸಾಕು ನಾಯಿಯನ್ನು ಬಿಟ್ಟಿರಬಾರದು
18 ವರ್ಷದ ಒಳಗಿನವರು ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವಂತಿಲ್ಲ. ಸಾಕು ನಾಯಿಯ ಉತ್ತಮ ನಡವಳಿಕೆಗೆ ತರಬೇತಿ ನೀಡಬೇಕು
ಸಾಕು ನಾಯಿಗಳು ರಸ್ತೆ, ಪಾದಚಾರಿ ಮಾರ್ಗದಲ್ಲಿ ಮಲಮೂತ್ರ ಮಾಡಿದರೆ, ಇತರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮಾಲೀಕರೇ ಸ್ವಚ್ಛ ಮಾಡಬೇಕು
ಸಂಸ್ಥೆಗಳು ಏನೆಲ್ಲ ಮಾಡಬೇಕು?
ಮುದಾಯ ಪ್ರಾಣಿಗಳಿಗೆ ಲಸಿಕೆ ನೀಡಬಹುದು ಮತ್ತು ಆಹಾರ ನೀಡಬಹುದು. ಆದರೆ, ಅವುಗಳ ಮೂಲ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುವಂತಿಲ್ಲ
ಸಮುದಾಯ ಪ್ರಾಣಿಗಳಿಗೆ ಆಹಾರ, ಸ್ವಚ್ಛ ನೀರು ಸಿಗುವಂತೆ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಸಂಚರಿಸದ ಪ್ರದೇಶದಲ್ಲಿ ಅವುಗಳಿಗೆ ನೆಲೆ ಕಲ್ಪಿಸಬೇಕು
ಸಮುದಾಯ ಪ್ರಾಣಿಗಳಿಗೆ ಆಹಾರ ನೀಡಲು ವಿದ್ಯಾರ್ಥಿಗಳು, ಸಿಬ್ಬಂದಿ ಅಥವಾ ನಾಗರಿಕರಿಗೆ ಪ್ರತ್ಯೇಕ ಸ್ಥಳವನ್ನು ಪಾಲಿಕೆಯೊಂದಿಗೆ ಚರ್ಚಿಸಿ ನಿಗದಿಪಡಿಸಬೇಕು
ಬೀದಿ ನಾಯಿಗಳನ್ನು ಓಡಿಸಿಕೊಂಡು ಹೋಗುವುದು, ಕಲ್ಲು, ಕಡ್ಡಿಯಿಂದ ಹೊಡೆಯುವುದು ಕಾನೂನುಬಾಹಿರ. ಬೀದಿ ನಾಯಿಗಳ ನಿರ್ವಹಣೆಗೆ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಿಸಬೇಕು
ಸಂಸ್ಥೆಗಳ ಆವರಣದಲ್ಲಿ ಸಮುದಾಯ ಪ್ರಾಣಿಗಳಿದ್ದಾಗ ಅವುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಅಗತ್ಯ ಫಲಕಗಳನ್ನು ಹಾಕಬೇಕು
ಏನು ಶಿಕ್ಷೆ?
ಸಮುದಾಯ ಪ್ರಾಣಿಗಳನ್ನು ಸಾಯಿಸಿದರೆ ₹75 ಸಾವಿರದವರೆಗೆ ದಂಡದ ಜೊತೆಗೆ ಮೂರು ವರ್ಷಗಳಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ
ಪ್ರಾಣಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದರೆ ₹50 ಸಾವಿರ ದಂಡ, ಒಂದು ವರ್ಷದಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ
ಪ್ರಾಣಿಗಳ ಜನನಾಂಗಕ್ಕೆ ಯಾವುದೇ ರೀತಿಯಲ್ಲಿ ಹಲ್ಲೆ ನಡೆಸಿದರೆ ₹1 ಸಾವಿರದ ವರೆಗೆ ದಂಡ ಹಾಗೂ ಎರಡು ವರ್ಷದವರೆಗೆ ಜೈಲು ಶಿಕ್ಷೆ
ಪ್ರಾಣಿಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ– 1960ರಂತೆ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ₹50 ದಂಡ ಹಾಗೂ ಮೂರು ತಿಂಗಳವರೆಗೆ ಜೈಲು ಶಿಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.