ADVERTISEMENT

₹ 30 ಕೋಟಿ ಬಾಕಿ ತೆರಿಗೆ ಪಾವತಿ: ಮಂತ್ರಿಮಾಲ್‌ಗೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:51 IST
Last Updated 4 ಮಾರ್ಚ್ 2021, 3:51 IST

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ₹ 30 ಕೋಟಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಮಂತ್ರಿ ಮಾಲ್‌ ಮಾಲೀಕರಿಗೆ ಬಿಬಿಎಂಪಿ ಈ ತಿಂಗಳ ಅಂತ್ಯವರೆಗೆ ಕಾಲಾವಕಾಶ ನೀಡಲಿದೆ.

ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ಪಾವತಿ ಮಾಡದಿದ್ದರೆ ಮಂತ್ರಿ ಮಾಲ್‌ಗೆ ಬೀಗ ಹಾಕುವುದಾಗಿ ಬಿಬಿಎಂಪಿ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಮಾಲ್‌ನ ಮಾಲೀಕರಿಗೆ ಹಾಗೂ ಮಾಲ್‌ನಲ್ಲಿರುವ ಮಳಿಗೆಗಳ ಮಾಲೀಕರಿಗೂ ಈ ಬಗ್ಗೆ ನೋಟಿಸ್‌ ಜಾರಿ ಮಾಡಿತ್ತು.

‘ಮಂತ್ರಿ ಮಾಲ್‌ ₹ 20 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ದಂಡನಾ ಬಡ್ಡಿ ಸೇರಿ ಈ ಮೊತ್ತ ₹ 30 ಕೋಟಿ ಆಗಿದೆ. ಬಾಕಿ ಮೊತ್ತವನ್ನು ಪಾವತಿಸಲು ಮಾರ್ಚ್‌ ಅಂತ್ಯದವರೆಗೆ ಕಾಲಾವಕಾಶ ನೀಡಿದ್ದೇವೆ. ಅಷ್ಟರೊಳಗೆ ಪಾವತಿ ಮಾಡದೇ ಹೋದರೆ ಅದರ ವಸೂಲಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ADVERTISEMENT

‘ಇತ್ತೀಚಿನವರೆಗೆ, ತೆರಿಗೆ ಬಾಕಿ ಉಳಿಸಿಕೊಂಡವರ ಚರಾಸ್ತಿಗಳನ್ನು ಮಾತ್ರ ಜಪ್ತಿ ಮಾಡಲು ಅವಕಾಶವಿತ್ತು. ಈಗ ಕಾನೂನು ತಿದ್ದುಪಡಿಯಾಗಿದ್ದು, ಸುಸ್ತಿದಾರರ ಸ್ಥಿರಾಸ್ತಿಯನ್ನೂ ಜಪ್ತಿ ಮಾಡಬಹುದು. ಅಗತ್ಯ ಬಿದ್ದರೆ ಸ್ಥಿರಾಸ್ತಿಯನ್ನು ಹರಾಜು ಹಾಕುವುದಕ್ಕೂ ಅವಕಾಶ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.