ADVERTISEMENT

ಗ್ಲೋಬಲ್‌ ಸ್ಟ್ರೀಟ್‌ ಡಿಸೈನ್‌ ಗೈಡ್‌ನಲ್ಲಿ ಮನ್ನಣೆ

ಬಿಬಿಎಂಪಿಯಿಂದ ಟೆಂಡರ್‌ಶ್ಯೂರ್‌ ರಸ್ತೆ ಯೋಜನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:23 IST
Last Updated 17 ಫೆಬ್ರುವರಿ 2019, 20:23 IST
ಟೆಂಡರ್‌ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಿರುವ ಚರ್ಚ್‌ ಸ್ಟ್ರೀಟ್‌ ರಸ್ತೆ
ಟೆಂಡರ್‌ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಿರುವ ಚರ್ಚ್‌ ಸ್ಟ್ರೀಟ್‌ ರಸ್ತೆ   

ಬೆಂಗಳೂರು: ಬಿಬಿಎಂಪಿ ಅನುಷ್ಠಾನಗೊಳಿಸಿದ ಟೆಂಡರ್‌ಶ್ಯೂರ್‌ ರಸ್ತೆ ಯೋಜನೆಯ ಬಗ್ಗೆ ‘ಸಿ40 ಸಿಟೀಸ್‌’ಪ್ರಕಟಣೆಯ ‘ಗ್ಲೋಬಲ್‌ ಸ್ಟ್ರೀಟ್‌ ಡಿಸೈನ್‌ ಗೈಡ್‌’ನಲ್ಲಿ ಲೇಖನ ಪ್ರಕಟವಾಗಿದೆ.

‘ಈ ಲೇಖನದಲ್ಲಿ ಬೆಂಗಳೂರು ನಗರದ ರಸ್ತೆ ವಿನ್ಯಾಸದ ಬಗ್ಗೆಯೇ ವಿಶ್ಲೇಷಣೆ ಮಾಡಲಾಗಿದೆ. ಇಡೀ ದೇಶದಲ್ಲೇ ಈ ರೀತಿ ಗುರುತಿಸಿಕೊಂಡ ಏಕೈಕ ನಗರ ನಮ್ಮದು ‘ನೋವೋ ನೋರ್ಡಿಸ್ಕ್‌ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ರಸ್ತೆಗಳ ಬಗ್ಗೆ ನಡೆಸಿದ ಅಧ್ಯಯನದ ಆಧಾರದಲ್ಲಿ ಲೇಖನ ಸಿದ್ಧಪಡಿಸಲಾಗಿದೆ. ಟೆಂಡರ್‌ಶ್ಯೂರ್‌ ರಸ್ತೆಗಳಿಂದ ಪಾದಚಾರಿಗಳು ಮತ್ತು ಸೈಕಲ್‌ ಸವಾರರಿಗಾಗುವ ಪ್ರಯೋಜನಗಳ ಕುರಿತೂ ಉಲ್ಲೇಖಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಹೇಳಿದರು.

2011ರಲ್ಲಿ ಟೆಂಡರ್‌ ಶ್ಯೂರ್‌ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿತ್ತು. ಬಳಿಕ 20 ರಸ್ತೆಗಳನ್ನು ಈ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣಕಾಸು ಅನುಮೋದನೆ ನೀಡಿತ್ತು. ಹೀಗೆ ಮೊದಲ ಹಂತದಲ್ಲಿ ಅಭಿ
ವೃದ್ಧಿಯಾದ ಏಳು ರಸ್ತೆಗಳು 2015ರಲ್ಲಿ ಹಾಗೂ ಎರಡನೇ ಹಂತದಲ್ಲಿ ಅಭಿವೃದ್ಧಿಯಾದ ಐದು ರಸ್ತೆಗಳು 2017ರಲ್ಲಿ ಉದ್ಘಾಟನೆಗೊಂಡಿದ್ದವು.

ADVERTISEMENT

ಈ ಯೋಜನೆಗೆ 2018ರ ನವೆಂಬರ್‌ 4ರಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಮೋಟಾರೇತರ ಸಾರಿಗೆ ಯೋಜನೆ ವಿಭಾಗದಲ್ಲಿ ‘ಕಮೆಂಡೆಬಲ್‌ ಇನಿಷಿಯೇಟಿವ್‌’ ಪ್ರಶಸ್ತಿ ದೊರೆತಿತ್ತು. ಮುಂಬೈನಲ್ಲಿ ನಡೆದ ನಗರ ಸಾರಿಗೆ 11ನೇ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಇನ್ನೂ 18 ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸಲು ಬಿಬಿಎಂಪಿ ಇತ್ತೀಚೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ‘ಇದುವರೆಗೆ ಟೆಂಡರ್‌ ಶ್ಯೂರ್‌ ಯೋಜನೆ ಅಡಿ ರಸ್ತೆ ಅಭಿವೃದ್ಧಿಗೆ ನಗರೋತ್ಥಾನ ನಿಧಿ ಅಡಿ ಹಣಕಾಸು ಸಿಗುತ್ತಿತ್ತು. ಮುಂದೆ ನಾವು ಇದನ್ನು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಪಾಲಿಕೆಯು ಮೊದಲ ಹಂತದಲ್ಲಿ ಸೇಂಟ್‌ ಮಾರ್ಕ್ಸ್‌, ರಿಚ್ಮಂಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಕಮಿಷನರೇಟ್‌ ರಸ್ತೆ, ಮ್ಯೂಸಿಯಂ ರಸ್ತೆ, ವಿಠಲ ಮಲ್ಯ ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ್‌ ರಸ್ತೆ, ಕನ್ನಿಂಗ್‌ ಹ್ಯಾಂ ರಸ್ತೆ, ಕೆ.ಜಿ.ರಸ್ತೆ, ನೃಪತುಂಗ ರಸ್ತೆ, ಜಯನಗರ 11ನೇ ಮುಖ್ಯ ರಸ್ತೆ ಸೇರಿ ಒಟ್ಟು 12 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಿತ್ತು.

‘ಎರಡನೇ ಹಂತದಲ್ಲಿ ಮೆಜೆಸ್ಟಿಕ್‌ ಆಸುಪಾಸಿನ 6 ಪ್ರಮುಖ ರಸ್ತೆಗಳು, ಮಾರ್ಗೋಸಾ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಚರ್ಚ್‌ಸ್ಟ್ರೀಟ್‌, ಮ್ಯೂಸಿಯಂ ಕ್ರಾಸ್‌ ರಸ್ತೆ, ಕೆ.ಜಿ.ರಸ್ತೆಯ ಮುಂದುವರಿದ ಭಾಗಗಳನ್ನು ಟೆಂಡರ್‌ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಕೆಲವು ಪೂರ್ಣಗೊಳ್ಳುವ ಹಂತ ತಲುಪಿವೆ’ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ ಅಂಶ

17.5 ಕಿ.ಮೀ - ಟೆಂಡರ್‌ಶ್ಯೂರ್‌ ಯೋಜನೆ ಅಡಿ ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಗಳ ಒಟ್ಟು ಉದ್ದ

18 ಕಿ.ಮೀ - ಎರಡನೇ ಹಂತದಲ್ಲಿ ಅಭಿವೃದ್ಧಿಪಡಿಸುತ್ತಿರುವ ರಸ್ತೆಗಳ ಒಟ್ಟು ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.