ADVERTISEMENT

ಬಿಬಿಎಂಪಿ: ಸಂಗ್ರಹವಾಯಿತು ₹1700 ಕೋಟಿ ತೆರಿಗೆ

ಆಸ್ತಿ ತೆರಿಗೆ: ಶೇ 5ರಷ್ಟು ರಿಯಾಯಿತಿ ಅವಧಿ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 20:01 IST
Last Updated 30 ಜೂನ್ 2021, 20:01 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೇ ಕಂತಿನಲ್ಲಿ ಆಸ್ತಿ ತೆರಿಗೆ ಪಾವತಿಸಿದವರಿಗೆ ನೀಡುವ ಶೇ 5ರಷ್ಟು ರಿಯಾಯಿತಿಯ ಅವಧಿ ಜೂನ್‌ 30ಕ್ಕೆ ಕೊನೆಯಾಗಿದೆ. 2021ರ ಏಪ್ರಿಲ್‌ನಿಂದ ಜೂನ್‌ 30ರ ನಡುವೆ ರಿಯಾಯಿತಿ ಚಾಲ್ತಿಯಲ್ಲಿತ್ತು. ಈ ಅವಧಿಯಲ್ಲಿ ಬಿಬಿಎಂಪಿಗೆ ಒಟ್ಟು ₹ 1,703 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ.

ಬಿಬಿಎಂಪಿ ಪ್ರತಿವರ್ಷವೂ ಏಪ್ರಿಲ್‌ ತಿಂಗಳಲ್ಲಿ ಪೂರ್ತಿ ಆಸ್ತಿ ತೆರಿಗೆ ಪಾವತಿಸಿದವರಿಗೆ ಒಟ್ಟು ವಾರ್ಷಿಕ ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ನೀಡುತ್ತದೆ. ಈ ಸಲ ಕೋವಿಡ್‌ ಹರಡುವಿಕೆ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಹೇರಿಕೆ ಮಾಡಿದ್ದರಿಂದ ರಿಯಾಯಿತಿ ಅವಧಿಯನ್ನು ಜೂನ್‌ ಅಂತ್ಯದವರೆಗೆ ವಿಸ್ತರಿಸಲಾಗಿತ್ತು. 2020–21ನೇ ಸಾಲಿನಲ್ಲೂ ರಿಯಾಯಿತಿ ಅವಧಿಯನ್ನು ಪಾಲಿಕೆ ಜೂನ್‌ 30ರವರೆಗೆ ವಿಸ್ತರಿಸಿತ್ತು. ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ₹1,713 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು.

‘ಹೆಚ್ಚೂ ಕಡಿಮೆ ಕಳೆದ ವರ್ಷದಷ್ಟೇ ಆಸ್ತಿ ತೆರಿಗೆ ಈ ಬಾರಿ ಸಂಗ್ರಹವಾಗಿದೆ. ಬುಧವಾರ ರಾತ್ರಿ 9 ಗಂಟೆ ವೇಳೆಗೆ ಒಟ್ಟು ₹ 1,700 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ. ಕಳೆದ ಸಾಲಿನಂತೆ ಈ ಸಾಲಿನಲ್ಲೂ ಆನ್ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಪ್ರಮಾಣ ಹೆಚ್ಚು ಇದೆ’ ಎಂದು ಬಿಬಿಎಂ‍ಪಿ ವಿಶೇಷ ಆಯುಕ್ತ (ಕಂದಾಯ) ಎಸ್‌.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆಸ್ತಿ ತೆರಿಗೆಯ ಒಟ್ಟು 11,263 ಚಲನ್‌ಗಳು ಸಕ್ರಿಯವಾಗಿವೆ. ಚಲನ್‌ಗಳಿಂದ ಇನ್ನು ₹ 45.14 ಕೋಟಿ ತೆರಿಗೆ ಪಾವತಿ ಆಗಲಿದೆ. 4,230 ಚಲನ್‌ಗಳ ಮೊತ್ತವು ಇನ್ನಷ್ಟೇ ಬಿಬಿಎಂಪಿಗೆ ಪಾವತಿಯಾಗಬೇಕಿದೆ. 2020–21ನೇ ಸಾಲಿಗೆ ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಬೊಮ್ಮನಹಳ್ಳಿ, ಪೂರ್ವ, ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ತುಸು ಹೆಚ್ಚಳವಾಗಿದೆ. ಮಹದೇವಪುರ, ಆರ್‌.ಆರ್‌.ನಗರ, ದಕ್ಷಿಣ, ಪಶ್ಚಿಮ ವಲಯಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

ಬಿಬಿಎಂಪಿಯು 2021–22ನೇ ಸಾಲಿನ ಅಂತಿಮ ಬಜೆಟ್‌ನಲ್ಲಿ ತೆರಿಗೆ ಮತ್ತು ಕರಗಳ ರೂಪದಲ್ಲಿ ಒಟ್ಟು ₹ 3353.20 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ₹ 1250.78 ಕೋಟಿ ತೆರಿಗೆಯೇತರ ವರಮಾನವನ್ನು ನಿರೀಕ್ಷೆ ಮಾಡಿದೆ.

ಅಂಕಿ ಅಂಶ
1,702. 52 ಕೋಟಿ:
ಬಿಬಿಎಂಪಿಯು 2021–22ನೇ ಸಾಲಿನಲ್ಲಿ ಜೂನ್‌ 30ರ ವರೆಗೆ ಸಂಗ್ರಹಿಸಿದ ಆಸ್ತಿ ತೆರಿಗೆ
₹ 948.41 ಕೋಟಿ:ಆನ್‌ಲೈನ್‌ ಮೂಲಕ ಪಾವತಿಯಾದ ಆಸ್ತಿ ತೆರಿಗೆ
₹ 754.11 ಕೋಟಿ:ಚಲನ್‌ ಮೂಲಕ ಪಾವತಿಯಾದ ಆಸ್ತಿ ತೆರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.