ಬೆಂಗಳೂರು: ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ನವೆಂಬರ್ 30ರಂದು ಮುಕ್ತಾಯವಾಗುತ್ತಿದೆ. ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಯಲ್ಲಿ ವಸತಿಯೇತರ ಆಸ್ತಿಗಳಿಗಿಂತ ವಸತಿ ಆಸ್ತಿಗಳಿಂದಲೇ ಹೆಚ್ಚು ತೆರಿಗೆ ಬಾಕಿ ಉಳಿದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 20.57 ಲಕ್ಷ ಆಸ್ತಿಗಳಿಂದ ತೆರಿಗೆ ಪಾವತಿಯಾಗಬೇಕಿದ್ದು, ₹3,814.68 ಕೋಟಿ ಸಂಗ್ರಹವಾಗಬೇಕಿದೆ. ₹15.45 ಲಕ್ಷ ಆಸ್ತಿ ಗಳಿಂದ ₹3,231 ಕೋಟಿ ಸಂಗ್ರಹ ವಾಗಿದೆ. 5.12 ಲಕ್ಷ ಆಸ್ತಿಗಳಿಂದ ಇನ್ನೂ ₹583.54 ಕೋಟಿ ಬಾಕಿ ಉಳಿದಿದೆ.
ಆರ್ಥಿಕ ವರ್ಷದಲ್ಲಿ ನವೆಂಬರ್ 28ರವರೆಗೆ ₹3,820.23 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಮೊತ್ತವಾಗಿದ್ದರೂ, ಸುಸ್ತಿದಾರರಿಂದ ಇನ್ನೂ₹365 ಕೋಟಿ ಸಂಗ್ರಹವಾಗಬೇಕಿದೆ. ಒಟಿಎಸ್ ಯೋಜನೆಯಲ್ಲಿ ₹733.61 ಕೋಟಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ, ಈವರೆಗೆ ₹368.14 ಕೋಟಿಯಷ್ಟು ಮೊತ್ತವನ್ನು 1.67 ಲಕ್ಷ ಆಸ್ತಿಗಳ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ.
ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ 31ರಂದು ಕೊನೆಗೊಂಡಿತ್ತು. ‘ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ನಾಗರಿಕರು, ಸಂಘ–ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಅದರಂತೆ, ಸರ್ಕಾರ ಒಟಿಎಸ್ ಅವಧಿಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿತ್ತು. ಮತ್ತೆ ಗಡುವನ್ನು ಎರಡನೇ ಬಾರಿಗೆ ನವೆಂಬರ್ 30ರವರೆಗೂ ವಿಸ್ತರಿಸಿತ್ತು.
ಜುಲೈ 31ರ ಅಂತ್ಯಕ್ಕೆ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ 1.07 ಲಕ್ಷ ಆಸ್ತಿಗಳ ಮಾಲೀಕರು ಪ್ರಯೋಜನ ಪಡೆದು, ₹217.50 ಕೋಟಿ ಪಾವತಿಸಿದ್ದರು. 6,723 ಆಸ್ತಿಗಳ ತೆರಿಗೆಯ ಪುನರ್ ವಿಮರ್ಶೆಯೂ ಸೇರಿ ಒಟ್ಟು ₹380.83 ಕೋಟಿ ಸಂಗ್ರಹವಾಗಿತ್ತು. 2024ರ ಆಗಸ್ಟ್ 1ರಂತೆ 3,04,810 ಆಸ್ತಿಗಳಿಂದ ₹831.53 ಕೋಟಿ ತೆರಿಗೆ ಹಿಂಬಾಕಿ ಪಾವತಿಯಾಗಬೇಕಿತ್ತು.
ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಮಾತ್ರ ಬಾಕಿ ಉಳಿಸಿ ಕೊಂಡವರೂ ನ. 30ರ ನಂತರ ತೆರಿಗೆ ಜತೆಗೆ ಬಡ್ಡಿ ಪಾವತಿಸಬೇಕಾಗುತ್ತದೆ.
‘ಒಂದು ಬಾರಿ ಪರಿಹಾರ ಯೋಜನೆಯನ್ನು ವಿಸ್ತರಿಸುವುದಿಲ್ಲ. ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಡಿಸೆಂಬರ್ 1ರಿಂದ ದಂಡ, ಬಡ್ಡಿ ವಿಧಿಸಿ, ಎಲ್ಲ ರೀತಿಯ ಕಾನೂನು ಪ್ರಕ್ರಿಯೆಗಳನ್ನೂ ನಡೆಸಲಾಗತ್ತದೆ’ ಎಂದು ಬಿಬಿಎಪಿ ಕಂದಾಯ ವಿಭಾಗ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದರು.
‘ವಾಣಿಜ್ಯ ಕಟ್ಟಡಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗುತ್ತಿದೆ. ಡಿ. 2ರಿಂದ ಈ ಅಭಿಯಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.