ADVERTISEMENT

ಸ್ವಾತಂತ್ರ್ಯ ದಿನಾಚರಣೆ ಸರಳ ಆಚರಣೆ; ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನ ಇಲ್ಲ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:46 IST
Last Updated 31 ಜುಲೈ 2020, 21:46 IST
ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿದ ಆಯುಕ್ತ ಎನ್. ಮಂಜುನಾಥ ಪ್ರಸಾದ್
ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿದ ಆಯುಕ್ತ ಎನ್. ಮಂಜುನಾಥ ಪ್ರಸಾದ್   

ಬೆಂಗಳೂರು: ಕೋವಿಡ್ ಸೋಂಕು ಹರಡುತ್ತಿರುವುದರಿಂದ ಈ ಬಾರಿಯ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮಾರಂಭಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಪಥ ಸಂಚಲನ, ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಇರುವುದಿಲ್ಲ. ಮುಖ್ಯಮಂತ್ರಿ ಅವರು ತುಕಡಿಗಳ ತಪಾಸಣೆ ನಡೆಸುವುದು ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿ ಅವರ ಭಾಷಣ ಮುಗಿದ ನಂತರ ನಾಡಗೀತೆ, ರೈತ ಗೀತೆ, ಎರಡು ದೇಶಭಕ್ತಿ ಗೀತೆಗಳು ಮಾತ್ರ ಇರಲಿವೆ.75 ಮಂದಿ ಕೊರೊನಾ ವಾರಿಯರ್ಸ್, ಸೋಂಕಿನಿಂದ ಗುಣಮುಖರಾದ 25 ಮಂದಿಯನ್ನು ಆಹ್ವಾನಿಸಲಾಗಿದೆ.ಅವರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸೀಮಿತಗೊಳಿಸಿ 200 ಮಂದಿ ಮೀರದಂತೆ ಸಮಾರಂಭ ನಡೆಸಲಾಗುವುದು’ ಎಂದರು.

ADVERTISEMENT

ಸಮಾರಂಭಕ್ಕೆ ಬರುವ ಎಲ್ಲರಿಗೂ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಲು ಕಿಯೋಸ್ಕ್ ಗಳ ವ್ಯವಸ್ಥೆ ಮಾಡಲಾಗುವುದು. ಥರ್ಮಲ್ ಸ್ಕ್ಯಾನಿಂಗ್ ಹಾಗೂ ಪಲ್ಸ್ ಆಕ್ಸಿಮೀಟರ್ ಮೂಲಕವೂ ತಪಾಸಣೆ ನಡೆಸಲಾಗುವುದು ಎಂದು ವಿವರಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧ

ಸರಳವಾಗಿ ಗೌರಿ–ಗಣೇಶ ಹಬ್ಬ ಆಚರಣೆ ಮಾಡಲುಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ ಎಂದು ಎನ್. ಮಂಜುನಾಥ ಪ್ರಸಾದ್ ಹೇಳಿದರು.

‘ಕರೆ, ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಅನುಮತಿ ಇಲ್ಲ. ಮನೆಯಲ್ಲೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಇಟ್ಟು ಪೂಜಿಸಿ, ಮನೆಯಲ್ಲೇ ವಿಸರ್ಜನೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿಗೆ ತಡೆ ಇಲ್ಲ. ಅಂತರ ಕಾಯ್ದುಕೊಂಡು ಹಬ್ಬದ ಸಾಮಗ್ರಿ ಖರೀದಿ ಮಾಡಿಕೊಳ್ಳಬಹುದು ಎಂದರು.

ಬಕ್ರೀದ್: ಪ್ರಾಣಿವಧೆ ನಿಷೇಧ

‘ಬಕ್ರೀದ್ ಆಚರಣೆ ದಿನದಂದು ಸಾಮೂಹಿಕ ಪ್ರಾರ್ಥನೆಗೆ ವಕ್ಫ್ ಬೋರ್ಡ್‌ನಿಂದಲೇ ನಿಷೇಧಿಸಲಾಗಿದೆ. ಈ ಸಮಯದಲ್ಲಿ ಮೇಕೆ, ಕುರಿ ಸೇರಿದಂತೆ ಪ್ರಾಣಿವಧೆ ಮಾಡುವುದನ್ನು ನಿರ್ಭಂಧಿಸಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.