ADVERTISEMENT

ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ ಆಸ್ಪತ್ರೆ ವಿರುದ್ಧ ಬಿಬಿಎಂಪಿ ಕ್ರಮ

ಹಣ ಮರುಪಾವತಿಸುವಂತೆ ಮಣಿಪಾಲ್‌ ಆಸ್ಪತ್ರೆಗೆ ಬಿಬಿಎಂಪಿ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:34 IST
Last Updated 29 ಡಿಸೆಂಬರ್ 2021, 19:34 IST
   

ಬೆಂಗಳೂರು: ಕೋವಿಡ್‌ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕವನ್ನು ರೋಗಿಯ ಕಡೆಯವರಿಂದ ವಸೂಲಿ ಮಾಡಿರುವ ಮಣಿಪಾಲ ಆಸ್ಪತ್ರೆ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ.

ಪಾಲಿಕೆಯ ವಿಶೇಷ ಆಯುಕ್ತರಾದ (ಆರೋಗ್ಯ) ಡಾ.ಕೆ.ವಿ.ತ್ರಿಲೋಕಚಂದ್ರ ಅವರ ನಿರ್ದೇಶನದ ಮೇರೆಗೆ ಯಲಹಂಕ ವಲಯದ ಆರೋಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮೀ ಅವರು ಮಣಿಪಾಲ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್‌ ಚಿಕಿತ್ಸೆ ಪಡೆದ ಮೂವರು ರೋಗಿಗಳಿಂದ ಆಸ್ಪತ್ರೆಯುವರು ಹೆಚ್ಚುವರಿಯಾಗಿ ಶುಲ್ಕ ಪಡೆದಿರುವುದು ಈ ವೇಳೆ ಕಂಡುಬಂದಿತ್ತು.

ಆಸ್ಪತ್ರೆಯವರು ಒಬ್ಬ ರೋಗಿಯಿಂದ ₹50,816, ಮತ್ತೊಬ್ಬ ರೋಗಿಯಿಂದ 1,967, ಮತ್ತೊಬ್ಬ ರೋಗಿಯಿಂದ ₹2,788 ಹೆಚ್ಚುವರಿ ಶುಲ್ಕ ಪಡೆದಿದ್ದರು.ಪಡೆದಿರುವ ಹೆಚ್ಚುವರಿ ಮೊತ್ತವನ್ನು ರೋಗಿಯ ಕಡೆಯವರಿಗೆ ಕೂಡಲೆ ಮರುಪಾವತಿಸುವಂತೆ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಡಾ. ಭಾಗ್ಯಲಕ್ಷ್ಮೀ ಸೂಚಿಸಿದರು. ಇದಕ್ಕೆ ಆಸ್ಪತ್ರೆಯವರೂ ಒಪ್ಪಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

ADVERTISEMENT

‘ಕೋವಿಡ್‌ ಚಿಕಿತ್ಸೆ ಎಷ್ಟು ಶುಲ್ಕ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2020ರ ಜೂ 23ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯುವುದು ಕಾನೂನುಬಾಹಿರ. ಖಾಸಗಿ ಆಸ್ಪತ್ರೆಗಳು ರೋಗಿಗಳಿಂದಇದಕ್ಕಿಂತ ಹೆಚ್ಚು ಮೊತ್ತವನ್ನು ವಸೂಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಹೆಚ್ಚು ಹಣ ಕೇಳಿದರೆ ದೂರು ನೀಡಿ’

ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕು. ಇದಕ್ಕಿಂತ ಹೆಚ್ಚು ಶುಲ್ಕ ವಿಧಿಸಿದರೆ ಪಾಲಿಕೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಈ ಸಂಬಂಧ ಯಾವುದೇ ದೂರುಗಳು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಾ. ತ್ರಿಲೋಕಚಂದ್ರ ಅವರು ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದೂರು ನೀಡಲು ಸಂಪರ್ಕ ಸಂಖ್ಯೆ:

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ):080-22975516

ಸಹಾಯವಾಣಿ: 080-22660000

ವಾಟ್ಸ್‌ಆ್ಯಪ್ ಸಂಖ್ಯೆ: 9480685700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.