ADVERTISEMENT

2 ದಿನದಲ್ಲಿ ರಸ್ತೆ ಗುಂಡಿ ಮುಚ್ಚಿ: ಅಧಿಕಾರಿಗಳಿಗೆ ಮೇಯರ್‌ ಗಂಗಾಂಬಿಕೆ ತಾಕೀತು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 19:59 IST
Last Updated 19 ಆಗಸ್ಟ್ 2019, 19:59 IST
ಮೇಯರ್‌ ಗಂಗಾಂಬಿಕೆ ಅವರು ನಗರದ ರಸ್ತೆ ಗುಂಡಿಗಳನ್ನು ಸೋಮವಾರ ಪರಿಶೀಲಿಸಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಇದ್ದಾರೆ
ಮೇಯರ್‌ ಗಂಗಾಂಬಿಕೆ ಅವರು ನಗರದ ರಸ್ತೆ ಗುಂಡಿಗಳನ್ನು ಸೋಮವಾರ ಪರಿಶೀಲಿಸಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಇದ್ದಾರೆ   

ಬೆಂಗಳೂರು: ‘ನಗರದಲ್ಲಿ ಎಲ್ಲೆಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ ಎಂಬುದನ್ನು ಪತ್ತೆ ಹಚ್ಚಿ ಕೂಡಲೇ ದುರಸ್ತಿ ಕಾರ್ಯ ನಡೆಸಬೇಕು. ಎರಡು ದಿನಗಳ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದು’ ಎಂದು ಮೇಯರ್‌ ಗಂಗಾಂಬಿಕೆ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಪ್ರಮುಖ ರಸ್ತೆಗಳನ್ನು ಅವರು ಸೋಮವಾರ ದಿಢೀರ್‌ ತಪಾಸಣೆ ನಡೆಸಿದರು. ಬಿಇಎಲ್ ವೃತ್ತದ ಬಳಿ ಹೊರ ವರ್ತುಲ ರಸ್ತೆಯಲ್ಲಿ ಗುಂಡಿಗಳಿರುವುದನ್ನು ಹಾಗೂ ಪಾದಚಾರಿ ಮಾರ್ಗಗಳು ಹದಗೆಟ್ಟಿರುವುದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದರು.

‘ನಗರದ ರಸ್ತೆಗಳಲ್ಲಿ ಒಂದು ಗುಂಡಿಯೂ ಇರಬಾರದು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ನೀವು ಯಾವ ಕಾರಣಕ್ಕೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸಿದರೆ ಯಾರು ಹೊಣೆ’ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.

ADVERTISEMENT

ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ (ಮುಖ್ಯ ರಸ್ತೆ) ನಂದೀಶ್, ‘ಹೊರ ವರ್ತುಲ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಹೆಬ್ಬಾಳದ ಕಡೆಯಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ ಎಂಬುದನ್ನು ಪರಿಶೀಲಿಸಿ ದುರಸ್ತಿ ಪಡಿಸುತ್ತೇವೆ’ ಎಂದರು.

ಗೊರಗುಂಟೆಪಾಳ್ಯ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ನೀರು ನಿಂತಿರುವುದಕ್ಕೆ ಹಾಗೂ ಡಾಂಬರು ಕಿತ್ತು ಹೋಗಿರುವುದಕ್ಕೆ ಮೇಯರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಸಂಚಾರ ಪೊಲೀಸರು ಅನುಮತಿ ನೀಡದ ಕಾರಣ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ಲಗ್ಗೆರೆ ಸೇತುವೆ ಬಳಿಯ ಕೆಳ ಸೇತುವೆ ಮಾರ್ಗವಾಗಿ ಹಾದುಹೋಗುವ ರಸ್ತೆಗೆ ಡಾಂಬರೀಕರಣ ಮಾಡದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.