ADVERTISEMENT

ಕಸ ಗುಡಿಸುವ ಯಂತ್ರ ಬಾಡಿಗೆ ಪಡೆಯುವಲ್ಲಿ ಅವ್ಯವಹಾರ?

ಟೆಂಡರ್‌ನಲ್ಲಿ ಗುತ್ತಿಗೆದಾರರು ನಮೂದಿಸಿದಕ್ಕಿಂತಲೂ ಹೆಚ್ಚು ಹಣ ನೀಡಲು ಪಾಲಿಕೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 6:32 IST
Last Updated 29 ಜನವರಿ 2020, 6:32 IST
   

ಬೆಂಗಳೂರು: ಎಂಟು ವಲಯಗಳಿಗೆ ಕಸ ಗುಡಿಸುವ ತಲಾ 17 ಯಂತ್ರಗಳನ್ನು ಖರೀದಿಸುವ ಹಾಗೂ 17 ಯಂತ್ರಗಳನ್ನು ಬಾಡಿಗೆಗೆ ಪಡೆಯುವ ಟೆಂಡರ್‌ಗಳಿಗೆ ಪಾಲಿಕೆ ಕೌನ್ಸಿಲ್‌ ಸಭೆ ಮಂಗಳವಾರ ಅನುಮೋದನೆ ನೀಡಿದೆ. ಗುತ್ತಿಗೆದಾರರು ಟೆಂಡರ್‌ನಲ್ಲಿ ನಮೂದಿಸಿದ್ದಕ್ಕಿಂತಲೂ ಹೆಚ್ಚು ಮೊತ್ತವನ್ನು ಪಾಲಿಕೆ ಅವರಿಗೆ ನೀಡುತ್ತಿರುವುದು ಅನುಮಾನ ಮೂಡಿಸಿದೆ.

ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಕಸ ಗುಡಿಸುವ ಯಂತ್ರಗಳನ್ನು ಬಳಸಲು ಪಾಲಿಕೆ ಮುಂದಾಗಿದೆ. ಗುತ್ತಿಗೆದಾರರು ಮೂರು ವರ್ಷಗಳು ಸೇವೆ ಒದಗಿಸಬೇಕಾಗುತ್ತದೆ. ಪ್ರತಿ ಯಂತ್ರವೂ ನಿತ್ಯ ಸರಾಸರಿ 65 ಕಿ.ಮೀ ರಸ್ತೆಯನ್ನು ಸ್ವಚ್ಛಗೊಳಿಸಬೇಕಿದೆ. ಈ ಸಲುವಾಗಿ ಪಾಲಿಕೆ ಅಲ್ಪಾವಧಿ ಟೆಂಡರ್‌ ಕರೆದು 2018ರ ಮಾರ್ಚ್‌ನಲ್ಲೇ ಗುತ್ತಿಗೆದಾರರನ್ನು ಅಂತಿಮಗೊಳಿಸಿತ್ತು.

ಬಿಬಿಎಂಪಿ ಎಲ್ಲ ವಲಯಗಳಿಗೂ ಸಾರಾಸಗಟಾಗಿ ಪ್ರತಿ ಕಿ.ಮೀ. ರಸ್ತೆ ಸ್ವಚ್ಛಗೊಳಿಸಲು ₹ 600 ನಿಗದಿಪಡಿಸಿದೆ. ಪ್ರತಿ ಕಿ.ಮೀ ರಸ್ತೆ ಸ್ವಚ್ಛಗೊಳಿಸಲು ಕನಿಷ್ಠ ದರ ನಮೂದಿಸಿದ(ಎಲ್‌1) ಗುತ್ತಿಗೆದಾರರಿಗೆ ಅವರು ಒಪ್ಪಿದ್ದಕ್ಕಿಂತ ಗರಿಷ್ಠ ₹ 177 ವರೆಗೂ ಹೆಚ್ಚುವರಿ ದರ ನೀಡಲಿದೆ.

ADVERTISEMENT

ಈ ಟೆಂಡರ್‌ಗೆ ಕಾಂಗ್ರೆಸ್– ಜೆಡಿಎಸ್‌ ಮೈತ್ರಿಕೂಟದ ಆಡಳಿತ ಇದ್ದಾಗ ಅನುಮೋದನೆ ನೀಡಿರಲಿಲ್ಲ. ಆಗ ಅನುಮೋದನೆ ನೀಡಲು ಪ್ರತಿಪಕ್ಷವಾಗಿದ್ದ ಬಿಜೆಪಿಯೂ ವಿರೋಧ ವ್ಯಕ್ತಪಡಿಸಿತ್ತು.

‘ಗುತ್ತಿಗೆದಾರರಿಗೆ ಹೆಚ್ಚುವರಿ ದರ ನೀಡುತ್ತಿರುವುದಕ್ಕೆ ಪಾಲಿಕೆಯ ಕೆಲ ಅಧಿಕಾರಗಳೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಈ ವಿಚಾರದಲ್ಲಿ ನಮ್ಮನ್ನು ಕತ್ತಲಿನಲ್ಲಿ ಇಡಲಾಗಿದೆ. ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕವೇ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಗೌತಮ್‌ ಕುಮಾರ್‌, ‘ಎರಡು ವರ್ಷಗಳಿಂದ ಈ ಗುತ್ತಿಗೆಯನ್ನು ಮುಂದೂಡುತ್ತಾ ಬರಲಾಗಿತ್ತು. ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬಂದಿದ್ದೇವೆ. ಯಂತ್ರ ಖರೀದಿಗೆ ಗುತ್ತಿಗೆದಾರರೇ ಬಂಡವಾಳ ಹೂಡಲಿದ್ದಾರೆ. ಕಾರ್ಯನಿರ್ವಹಣೆಯನ್ನು ಅವರೇ ನೋಡಿಕೊಳ್ಳಲಿದ್ದಾರೆ. ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ದೂಳಿನ ಹಾವಳಿ ಇದೆ. ಚಲಿಸುತ್ತಲೇ ಕಸವನ್ನು ಹೀರುವ ಸಾಮರ್ಥ್ಯವಿರುವ ಯಂತ್ರ ಬೇಕು ಎಂದು ಸೂಚಿಸಿದ್ದೇನೆ’ ಎಂದರು.

ಪಾಲಿಕೆ ಮೂರು ವರ್ಷಗಳಿಂದ ಸ್ವಯಂಚಾಲಿತವಾಗಿ ಕಸ ಗುಡಿಸುವ (₹1 ಕೋಟಿ ದರವಿದೆ) 14 ಯಂತ್ರಗಳನ್ನು ಹಾಗೂ ಲಾರಿ ಮೇಲೆ ಸಾಗಿಸಿ ಬಳಿಕ ಕಸ ಗುಡಿಸುವ (₹ 80 ಲಕ್ಷ ದರವಿದೆ) 8 ಯಂತ್ರಗಳನ್ನು ಖರೀದಿಸಿದೆ. ಅವುಗಳು ಬಳಕೆಯಾಗುತ್ತಿವೆ.

‘ಪ್ರತಿ ಯಂತ್ರ ನಿತ್ಯ 40 ಕಿ.ಮೀ ಕಸ ಗುಡಿಸಬೇಕಿದೆ. ಅದರ ನಿರ್ವಹಣೆ ಸೇರಿಸಿ ತಿಂಗಳಿಗೆ ₹ 6.25 ಲಕ್ಷ ಕೊಡುತ್ತಿದ್ದೇವೆ. ಅಷ್ಟೂ ಯಂತ್ರಗಳು ಮೂರು ವರ್ಷಗಳ ಬಳಿಕ ಪಾಲಿಕೆಯ ಸ್ವತ್ತಾಗಲಿವೆ. ಅವುಗಳಿಗೆ ಹೋಲಿಸಿದರೆ ಹೊಸ ಟೆಂಡರ್‌ ಬಲು ದುಬಾರಿ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಬಳಕೆಯಾಗುತ್ತಿರುವ ಕಸ ಗುಡಿಸುವ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೂ ಈ ಆಸ್ತಿಗಳನ್ನು ಕಾಪಾಡುವುದು ನಮ್ಮ ಧರ್ಮ. ಇವುಗಳ ತಾಂತ್ರಿಕ ನಿರ್ವಹಣೆಗೆ ಮೆಕ್ಯಾನಿಕಲ್‌ ಎಂಜಿನಿಯರ್‌ಗಳನ್ನು ನೇಮಿಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಮೇಯರ್‌ ಪ್ರತಿಕ್ರಿಯಿಸಿದರು.

"ಗುತ್ತಿಗೆದಾರರು ನಮೂದಿಸಿದ್ದಕ್ಕಿಂತ ₹ 177ರಷ್ಟು ಹೆಚ್ಚುವರಿ ದರವನ್ನು ಅವರಿಗೆ ನೀಡುತ್ತಿರುವುದು ಆಶ್ಚರ್ಯ ತಂದಿದೆ. ಇದು ಅಕ್ರಮ. ಈ ಬಗ್ಗೆ ಚರ್ಚೆಗೆ ಅವಕಾಶ ಕೋರುತ್ತೇವೆ. ಇಲ್ಲದಿದ್ದರೆ ಪ್ರತಿಭಟಿಸುತ್ತವೆ'
- ಅಬ್ದುಲ್‌ ವಾಜಿದ್‌, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.