ADVERTISEMENT

2018ರ ಜಾಹೀರಾತು ಬೈಲಾ ಜಾರಿಗೆ ಆಗ್ರಹ

ನಗರಾಭಿವೃದ್ಧಿ ಇಲಾಖೆ ರೂಪಿಸಿದ ಜಾಹೀರಾತು ನಿಯಮಗಳ ಕರಡು ವಿರೋಧಿಸಿ ಪ್ರತಿಪಕ್ಷ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 19:33 IST
Last Updated 29 ಜುಲೈ 2019, 19:33 IST
   

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ 2018ರಲ್ಲಿ ರೂಪಿಸಿದ್ದ ಜಾಹೀರಾತು ಬೈಲಾವನ್ನು ಬದಿಗಿಟ್ಟು, ಹೊಸತಾಗಿ ‘ಜಾಹೀರಾತು ನಿಯಮಗಳು 2019’ರ ಕರಡು ರೂಪಿಸಿರುವ ಕ್ರಮವನ್ನು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ವಿರೋಧಿಸಿದರು.

2018ರ ಬೈಲಾವನ್ನು ಅನುಮೋದನೆಗಾಗಿ ಕಳುಹಿಸಿ ಮೂರು ತಿಂಗಳ ಬಳಿಕವೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಡೀಮ್ಡ್‌ ಅನುಮೋದನೆ’ ಎಂದು ಪರಿಗಣಿಸಿ ಆ ಬೈಲಾವನ್ನೇ ಜಾರಿಗೊಳಿಸಬೇಕು ಎಂದು ಸದಸ್ಯರು ಸೋಮವಾರ ನಡೆದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರಾಭಿವೃದ್ಧಿ ಇಲಾಖೆಯ ನಡೆಯನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

ADVERTISEMENT

ಸಭೆಯ ಆರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ನಗರಾಭಿವೃದ್ಧಿ ಇಲಾಖೆ ಅನುಮತಿ ಆಧರಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ನಿಷೇಧ ಕುರಿತು 2018ರಲ್ಲಿ ಹೊಸ ಜಾಹೀರಾತು ನೀತಿ ಹಾಗೂ ಬೈಲಾ ರಚಿಸಲಾಗಿತ್ತು. ಈಗ ಕೆಎಂಸಿ ಕಾಯ್ದೆಯ ಸೆಕ್ಷನ್‌ 427ರ ಅಧಿಕಾರ ಬಳಸಿ ಹೊಸತಾಗಿ ಜಾಹೀರಾತು ನಿಯಮಗಳ ಕರಡು ರೂಪಿಸಿದೆ’ ಎಂದರು.

ಈ ಬಗ್ಗೆ ಕ್ರಿಯಾಲೋಪ ಎತ್ತಿದ ಬಿಜೆಪಿ ಸದಸ್ಯ ಮಂಜುನಾಥ ರಾಜು, ‘ಜಾಹೀರಾತು ನೀತಿ ಮತ್ತು ಬೈಲಾ ರೂಪಿಸುವ ಅಧಿಕಾರ ಇರುವುದು ಪಾಲಿಕೆಗೆ ಮಾತ್ರ. ಈ ಬಗ್ಗೆ ಕಾನೂನು ಕೋಶದ ಮುಖ್ಯಸ್ಥರು ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿದರು.

ಕಾನೂನು ಕೋಶದ ಮುಖ್ಯಸ್ಥ ಕೇಶವ ದೇಶಪಾಂಡೆ, ‘ಕೆಎಂಸಿ ಕಾಯ್ದೆಯ ಸೆಕ್ಷನ್‌ 423ರನ್ವಯ ನೀತಿ ಹಾಗೂ ಬೈಲಾ ರೂಪಿಸುವ ಅಧಿಕಾರ ಪಾಲಿಕೆಗೆ ಇದೆ. ಪಾಲಿಕೆ ಈ ವಿಚಾರದಲ್ಲಿ ವಿಫಲವಾದರೆ ನಿಯಮಗಳನ್ನು ರೂಪಿಸುವ ಅಧಿಕಾರವನ್ನುಸರ್ಕಾರ ಹೊಂದಿದೆ. ಪಾಲಿಕೆ ರಚಿಸಿದ ಬೈಲಾ ಸಮರ್ಥವಾಗಿಲ್ಲ ಎಂದು ಸರ್ಕಾರ ಭಾವಿಸಿದರೆ, ಕಾಯ್ದೆಯ ಸೆಕ್ಷನ್‌ 427 (1)ರ ಪ್ರಕಾರ ಹೊಸ ನಿಯಮ ರೂಪಿಸುವ ಅಧಿಕಾರ ಹೊಂದಿದೆ’ ಎಂದರು.

‘ಪಾಲಿಕೆ 2018ರ ಜಾಹೀರಾತು ಬೈಲಾದ ಪರಿಷ್ಕೃತ ಕರಡನ್ನು ಸರ್ಕಾರಕ್ಕೆ ಕಳುಹಿಸಿ ಜೂ.13ಕ್ಕೆ ಮೂರು ತಿಂಗಳು ಪೂರ್ಣಗೊಂಡಿದೆ. ಅದನ್ನು ಸರ್ಕಾರ ತಿರಸ್ಕರಿಸಿಲ್ಲವಾದ್ದರಿಂದ, ಅದಕ್ಕೆ ಡೀಮ್ಡ್‌ ಅನುಮೋದನೆ ಸಿಕ್ಕಿದೆ ಎಂದು ಪರಿಗಣಿಸಬಹುದು’ ಎಂದು ತಿಳಿಸಿದರು.

‘ನಗರಾಭಿವೃದ್ಧಿ ಇಲಾಖೆ ರೂಪಿಸಿದ ಕರಡು ಪಾವಿತ್ರ್ಯತೆಯನ್ನೇ ಹೊಂದಿಲ್ಲ. ಆ ಬಗ್ಗೆ ಚರ್ಚೆ ಬೇಡ. 1 ಕೋಟಿ ಜನರನ್ನು ಪ್ರತಿನಿಧಿಸುವ ಈ ಸಭೆಯು ಸರ್ವಾನುಮತದಿಂದ ಅಂಗೀಕರಿಸಿದ ಬೈಲಾವನ್ನು ತಿರಸ್ಕರಿಸುವುದರಲ್ಲಿ ಅರ್ಥವೇ ಇಲ್ಲ. ಪಾಲಿಕೆಯ ಜಾಹೀರಾತು ನೀತಿಯ ಆಶಯವನ್ನೇ ನಗರಾಭಿವೃದ್ಧಿ ಇಲಾಖೆ ಕಡೆಗಣಿಸಿದೆ. ಸಂಸದೀಯ ಇಲಾಖೆ ಕಾರ್ಯದರ್ಶಿ ಅವರನ್ನೇ ಕೌನ್ಸಿಲ್‌ ಸಭೆಗೆ ಕರೆಸಿ ವಿವರಣೆ ಕೇಳಬೇಕು’ ಎಂದು ಮಂಜುನಾಥ ರಾಜು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಕೌನ್ಸಿಲ್‌ ಸಭೆಯ ನಿರ್ಣಯವನ್ನು ಧಿಕ್ಕರಿಸುವ ಮೂಲಕ 198 ಸದಸ್ಯರಿಗೆ ನಗರಾಭಿವೃದ್ಧಿ ಇಲಾಖೆ ಅವಮಾನ ಮಾಡಿದೆ. ಜನರ ಭಾವನೆಗೂ ವಿರುದ್ಧವಾಗಿ ನಡೆದುಕೊಂಡಿದೆ’ ಎಂದು ಆರೋಪಿಸಿದರು.

ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದಾಗ ಮೇಯರ್‌ ಗಂಗಾಂಬಿಕೆ ಅವರು ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದರು.

ಆಡಳಿತ ಪಕ್ಷದ ಸದಸ್ಯ ಸಭಾತ್ಯಾಗ
ಪಾಲಿಕೆಯ ನಿರ್ಣಯವನ್ನು ಕಡೆಗಣಿಸಿ, ನಗರಾಭಿವೃದ್ಧಿ ಇಲಾಖೆ ಹೊಸ ಜಾಹೀರಾತು ನಿಯಮ ರೂಪಿಸಿದ್ದನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯ ಎಂ.ಕೆ.ಗುಣಶೇಖರ ಸಭಾತ್ಯಾಗ ನಡೆಸಿದರು.

‘ನಾವು ಬೈಲಾ ರೂಪಿಸಿದ್ದರಿಂದ ಕೆಎಂಸಿ ಕಾಯ್ದೆ ಸೆಕ್ಷನ್‌ 427 ಅನ್ವಯ ಹೊಸ ನಿಯಮ ರಚಿಸುವ ಪ್ರಮೇಯವೇ ಉದ್ಭವಿಸದು. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಗರಾಭಿವೃದ್ಧಿ ಇಲಾಖೆ ನಡೆದುಕೊಂಡಿದೆ’ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ, ‘ಹೋರ್ಡಿಂಗ್‌ ಅಳವಡಿಕೆಗೆ ಅವಕಾಶ ಬೇಡ ಎಂದು ಪಾಲಿಕೆ ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. ನಗರದ ಅಂದಗೆಡಿಸುವುದಕ್ಕೆ ಪುನಃ ಅವಕಾಶ ಕಲ್ಪಿಸುವುದು ಬೇಡ’ ಎಂದರು.

‘ಪಾಲಿಕೆ ರೂಪಿಸಿದ್ದ ಜಾಹೀರಾತು ಬೈಲಾ ತಿರಸ್ಕರಿಸುವ ಕುರಿತು ನಗರಾಭಿವೃದ್ಧಿ ಇಲಾಖೆ ಯಾವುದೇ ನೋಟಿಸ್‌ ನೀಡಿಲ್ಲ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ತಿಳಿಸಿದರು.

‘ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ ಜಾಹೀರಾತು ನೀತಿಗೆ ನಗರಾಭಿವೃದ್ಧಿ ಇಲಾಖೆ 2018ರ ಸೆ 11ರಂದು ಅನುಮೋದನೆ ಕೊಟ್ಟಿದೆ. ಅದರ ಪ್ರಕಾರ ನಗರದಲ್ಲಿ ಹೋರ್ಡಿಂಗ್‌ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಆ ನೀತಿಯ ಅನ್ವಯವೇ ಬೈಲಾ ರೂಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಜಾಹೀರಾತು ಬೈಲಾ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಓದುವುದರಲ್ಲಿ ತಲ್ಲೀನರಾಗಿರುವ ಬಿಜೆಪಿ ಸದಸ್ಯೆ ಶಾಂತಕುಮಾರಿ –ಪ್ರಜಾವಾಣಿ ಚಿತ್ರ

ಆಯುಕ್ತರಿಗೆ ಶಾಪ: ‘ಬೈಲಾ ಕರಡಿಗೆ ಆಕ್ಷೇಪ ಸಲ್ಲಿಸಲುಒಂದು ತಿಂಗಳು ಕಾಲಾವಕಾಶ ನೀಡಿದ್ದೆವು. 1,318 ಆಕ್ಷೇಪಣೆಗಳು ಬಂದವು. ಈ ಪೈಕಿ 146 ಮಂದಿ ವಿಷಯ ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು.

‘ನಮ್ಮ ಶಾಪ ನಿಮಗೆ, ನಿಮ್ಮ ಮಕ್ಕಳಿಗೆ ತಟ್ಟಲಿದೆ’ ಎಂದೂ ಕೆಲವರು ಹೇಳಿದ್ದರು. ‘ನನಗೆ ಶಾಪ ತಟ್ಟಿದರೂ ಪರವಾಗಿಲ್ಲ, ನಗರದ ಸೌಂದರ್ಯ ಹಾಳಾಗುವುದು ಬೇಡ’ ಎಂದಿದ್ದೆ. 2019ರ ಜ.1ರಂದು ಬೈಲಾದ ಪರಿಷ್ಕೃತ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದೇವೆ. ಸಂಸದೀಯ ಇಲಾಖೆ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಅದನ್ನೂ ಸಲ್ಲಿಸಿದ್ದೇವೆ’ ಎಂದರು.

‘ನಗರದಲ್ಲಿ ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸುವಂತೆ ಜಾಹೀರಾತು ಬೈಲಾಪರಿಷ್ಕರಿಸಲು ಸೂಚಿಸಿ ಇಲಾಖೆ ಪತ್ರ ಬರೆದಿತ್ತು. ಈ ಬಗ್ಗೆ ಕೌನ್ಸಿಲ್‌ ಸಭೆ ನಿರ್ಣಯಿಸಬೇಕು. ಇದಕ್ಕೆ ಸಮಯಾವಕಾಶ ಬೇಕು ಎಂದು ಉತ್ತರಿಸಿದ್ದೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.