ADVERTISEMENT

ತುಕ್ಕು ಹಿಡಿಯುತ್ತಿವೆ ಬಿಬಿಎಂಪಿ ಎಂಟಿಎಸ್‌ ಯಂತ್ರಗಳು

ಬಿಬಿಎಂಪಿ ತ್ಯಾಜ್ಯ: ಆರಂಭವಾಗದ ಉಪಕರಣಗಳ ಕಾರ್ಯಾಚರಣೆ; ಶೀಘ್ರ ಮುಗಿಯಲಿದೆ ಗ್ಯಾರಂಟಿ ಅವಧಿ

Published 8 ಫೆಬ್ರುವರಿ 2023, 21:25 IST
Last Updated 8 ಫೆಬ್ರುವರಿ 2023, 21:25 IST
ಕಾರ್ಯಾರಂಭಕ್ಕೆ ಕಾಯುತ್ತಿರುವ ಎಂಟಿಎಸ್‌
ಕಾರ್ಯಾರಂಭಕ್ಕೆ ಕಾಯುತ್ತಿರುವ ಎಂಟಿಎಸ್‌   

ಬೆಂಗಳೂರು: ನಗರದಲ್ಲಿ ಆಟೊದಿಂದ ಲಾರಿಗೆ ಕಸ ತುಂಬುವ ಅವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಿ, ಟ್ರಕ್‌ ಕಾಂಪ್ಯಾಕ್ಟರ್‌ ಓಡಾಟವನ್ನು ಕಡಿಮೆಗೊಳಿಸಬೇಕಾದ ‘ಎಂಟಿಎಸ್‌’ ಸ್ಥಾಪನೆಯಾಗಿದೆ. ಆದರೆ, ಉದ್ಘಾಟನೆಯಾಗಿಲ್ಲ. ಅಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದು, ಗ್ಯಾರಂಟಿ ಅವಧಿಯೂ ಮೀರುತ್ತಿದೆ.

ಎಂಟಿಎಸ್‌ಗಳಲ್ಲಿ ಸುಮಾರು ಒಂದು ಕೋಟಿ ವೆಚ್ಚದ ಯಂತ್ರೋಪಕರಣ ಅಳವಡಿಸಲಾಗಿದೆ. ಅವುಗಳು ಕಾರ್ಯಾರಂಭ ಮಾಡಿಲ್ಲ. ಅಳವಡಿಸಿ 10 ತಿಂಗಳು ಕಳೆಯುತ್ತಿದ್ದು, ಒಂದು ವರ್ಷವಾದೊಡನೆ ಅವುಗಳಿ್ಎ ಇರುವ ಗ್ಯಾರಂಟಿಯೂ ಮುಗಿದುಹೋಗುತ್ತದೆ. ಎಲ್ಲ ಸಿದ್ಧವಿದ್ದರೂ ಹಸಿತ್ಯಾಜ್ಯ ಎಂಟಿಎಸ್‌ಗೆ ಬರುತ್ತಿಲ್ಲ.

ವಾರ್ಡ್‌ಗಳಲ್ಲಿ ಮನೆಗಳಿಂದ ಸಂಗ್ರಹಿಸಿದ ಹಸಿ ಕಸವನ್ನು ‘ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌’ನಲ್ಲಿ (ಎಂಟಿಎಸ್‌) ಸಂಗ್ರಹಿಸಲಾಗುತ್ತದೆ. ಅಲ್ಲಿ, ಅದನ್ನು ಕಾಂಪ್ಯಾಕ್ಟ್‌ ಮಾಡಿ, ದ್ರವ ತ್ಯಾಜ್ಯವನ್ನು ತೆಗೆಯಲಾಗುತ್ತದೆ. ಕಾಂಪ್ಯಾಕ್ಟ್‌ ಮಾಡುವುದರಿಂದ ಇಲ್ಲಿಂದ ಸಾಗಣೆ ಮಾಡುವಾಗ ಕಾಂಪ್ಯಾಕ್ಟರ್‌ಗಳ ಸಂಚಾರ ಶೇ 40ರಷ್ಟು ಕಡಿಮೆಯಾಗುತ್ತದೆ. ಅಲ್ಲದೆ, ವರ್ಗಾವಣೆ ಸಂದರ್ಭದಲ್ಲಿ ರಸ್ತೆ, ಕೆರೆ ಏರಿ ಸೇರಿದಂತೆ ತೆರೆದ ಪ್ರದೇಶದ ಬಳಕೆ ಆಗುವುದಿಲ್ಲ.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ 44 ಎಂಟಿಎಸ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇದರಲ್ಲಿ 9 ಕಾರ್ಯಾರಂಭವಾಗಿವೆ. ಆದರೆ 10 ಎಂಟಿಎಸ್‌ಗಳು ಸಿದ್ಧಗೊಂಡು, ತಿಂಗಳು ಕಳೆದರೂ ಕಾರ್ಯಾರಂಭ ಮಾಡಿಲ್ಲ. ಪ್ರತಿಯೊಂದು ಎಂಟಿಎಸ್‌ಗೆ ₹1.31 ಕೋಟಿ ವೆಚ್ಚವಾಗಿದೆ. ಈ ಯಂತ್ರಗಳು ತುಕ್ಕು ಹಿಡಿಯುವ
ಮಟ್ಟಕ್ಕೆ ಬಂದಿದ್ದರೂ, ಸ್ಥಳೀಯ ವಿರೋಧದಿಂದ ಅವುಗಳು ಕಾರ್ಯಾರಂಭವಾಗಿಲ್ಲ. ಶಾಂತಲಾನಗರ, ಕೋರಮಂಗಲ, ಗಾಂಧಿನಗರದಲ್ಲಿ ಎಂಟಿಎಸ್‌ಗಳು ಉದ್ಘಾಟನೆಗೊಂಡು ಕೆಲವು ತಿಂಗಳಾದರೂ ಅವು ಕಾರ್ಯಾರಂಭ ಮಾಡಿಲ್ಲ.

ಜನಪ್ರತಿನಿಧಿಗಳಿಂದ ವಿಳಂಬ...: ‘ಎಂಟಿಎಸ್‌ಗಳು ಸ್ಥಾಪನೆಯಾಗಿದ್ದರೂ ಅವುಗಳ ಕಾರ್ಯಾಚರಣೆಗೆ ಜನಪ್ರತಿನಿಧಿಗಳೇ ವಿರೋಧವಾಗಿದ್ದಾರೆ. ಅವರ ಅನುಯಾಯಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಂಪ್ಯಾಕ್ಟರ್‌ ಓಡಾಟವೇ ನಡೆಯಲಿ, ಗುತ್ತಿಗೆದಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಂಟಿಎಸ್‌ ಕಾರ್ಯಾಚರಣೆಗೆ ಅವಕಾಶ ನೀಡುತ್ತಿಲ್ಲ. ಸ್ಥಳೀಯ ಜನರ ವಿರೋಧವಿದೆ ಎಂದು ಅದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕೋರಮಂಗಲದ ನಿವಾಸಿ
ರಮೇಶಪ್ಪ ಅವರು ಹೇಳಿದರು.

ಕೂಡಲೇ ಕ್ರಮ...

ಕೇಂದ್ರ ಸರ್ಕಾರದ ಸೂಚನೆಯಂತೆ ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳಿಂದ ಕಸ ವರ್ಗಾವಣೆಗೆ ಸಾಕಷ್ಟು ಉಪಯೋಗವಾಗುತ್ತದೆ. ಸುಮಾರು 9 ಕಡೆ ಎಂಟಿಎಸ್‌ಗಳ ಕಾರ್ಯಾಚರಣೆಯಿಂದ ತ್ಯಾಜ್ಯ ನಿರ್ವಹಣೆ ವ್ಯವಸ್ಥಿತವಾಗಿದೆ. ಸ್ಥಳೀಯ ಕಾರಣಗಳಿಂದ ಕೆಲವು ಎಂಟಿಎಸ್‌ಗಳು ಆರಂಭವಾಗಿಲ್ಲ. ಆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್‌ ತಿಳಿಸಿದರು.

ಕಾರ್ಯಾರಂಭಕ್ಕೆ ಕಾಯುತ್ತಿರುವ ಎಂಟಿಎಸ್‌ಗಳು

ವಾರ್ಡ್ 56– ಎ. ನಾರಾಯಣಪುರ,ವಾರ್ಡ್‌ 11– ಸಿಂಗಾಪುರ,ವಾರ್ಡ್‌ 196– ಅಂಜನಾಪುರ,ವಾರ್ಡ್‌ 194– ಗೊಟ್ಟಿಗೆರೆ,ವಾರ್ಡ್‌ 192– ಬೇಗೂರು,ವಾರ್ಡ್‌ 44– ನಂದಿನಿ ಲೇಔಟ್‌;10 ತಿಂಗಳ ಹಿಂದೆ ಯಂತ್ರ, ಉಪಕರಣಗಳ ಸ್ಥಾಪನೆ

ವಾರ್ಡ್‌ 90– ಹಲಸೂರು– 10 ತಿಂಗಳ ಹಿಂದೆ ಯಂತ್ರ, ಉಪಕರಣಗಳ ಸ್ಥಾಪನೆ, ಮರ ಕಡಿಯುವ ಕಾಮಗಾರಿಯಿಂದ ವಿಳಂಬ

ವಾರ್ಡ್‌ 111– ಶಾಂತಲಾನಗರ,ವಾರ್ಡ್‌ 151– ಕೋರಮಂಗಲ;10 ತಿಂಗಳ ಹಿಂದೆ ಯಂತ್ರ, ಉಪಕರಣಗಳ ಸ್ಥಾಪನೆ, 4 ತಿಂಗಳ ಹಿಂದೆ ಶಾಸಕರಿಂದ ಉದ್ಘಾಟನೆ

ವಾರ್ಡ್‌ 94– ಗಾಂಧಿನಗರ;8 ತಿಂಗಳ ಹಿಂದೆ ಯಂತ್ರ, ಉಪಕರಣಗಳ ಸ್ಥಾಪನೆ, 2 ತಿಂಗಳ ಹಿಂದೆ ಶಾಸಕರಿಂದ ಉದ್ಘಾಟನೆ


ಸ್ವಚ್ಛ ಸರ್ವೇಕ್ಷಣ್‌ ಅಂಕದ ಮೇಲೆ ಪರಿಣಾಮ!

‘ಕಸದಿಂದ ಹಣ’– ‘ಸ್ವಚ್ಛ ಸರ್ವೇಕ್ಷಣ್‌ 2023’ಯ ಪ್ರಮುಖ ಧ್ಯೇಯ. ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಸಂಸ್ಕರಿಸಿ ಅದರಿಂದ ಬರುವ ಹಣವನ್ನು ನಗರಕ್ಕೇ ಬಳಕೆ ಮಾಡಿಕೊಳ್ಳುವುದು ಇದರ ಉದ್ದೇಶ. ತ್ಯಾಜ್ಯ ಸಂಗ್ರಹ, ಸಾಗಣೆಯಿಂದ ಸಂಸ್ಕರಣೆವರೆಗೆ ಈ ಬಾರಿ 4,525 ಅಂಕಗಳಿವೆ. ಹೀಗಾಗಿ, ಸ್ವಚ್ಛತೆಯೊಂದಿಗೆ ಕಸ ಸಂಗ್ರಹಿಸಿ, ದ್ರವತ್ಯಾಜ್ಯ ಇಲ್ಲದಂತೆ ಮಾಡಿ, ಕಾಂಪ್ಯಾಕ್ಟರ್‌ ಸಂಚಾರ ಕಡಿಮೆ ಮಾಡುವ ‘ಮಿನಿ ಟ್ರಾನ್ಸ್‌ಫರ್‌’ ಕೇಂದ್ರಗಳು ಅತಿ ಮುಖ್ಯ. ಇವುಗಳು ಇದ್ದೂ ಕಾರ್ಯಾಚರಣೆ ಮಾಡದಂತಾದರೆ ಸ್ವಚ್ಛ ಸರ್ವೇಕ್ಷಣ್‌ ಅಂಕಗಳ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಸರ ಕಾರ್ಯಕರ್ತ ರಾಮ್‌ಪ್ರಸಾದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.