ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮ ನಡೆಸಿದರು.
ಶ್ರೀನಿವಾಸ್ ಎಂಬುವವರು ಬೀದಿ ನಾಯಿಗಳ ಆಕ್ರಮಣಕಾರಿ ನಡವಳಿಕೆಯ ಬಗ್ಗೆ ದೂರು ನೀಡಿದ್ದು, ಆಯುಕ್ತರ ನಿರ್ದೇಶನದ ಮೇರೆಗೆ ಸುಗ್ಗಪ್ಪ ಲೇಔಟ್‌ನಲ್ಲಿ ಈಗಾಗಲೇ ಎರಡು ಬೀದಿ ನಾಯಿಗಳನ್ನು ಸೆರೆ ಹಿಡಿದಿದ್ದು, ಅವುಗಳ ನಡವಳಿಕೆಯನ್ನು ವೀಕ್ಷಣೆಗೆ ಒಳಪಡಿಸಲಾಗಿದೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ ಬಹುಪಾಲು ದೂರುಗಳು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ್ದಾಗಿದ್ದು, ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಹಾಗೂ ರಸ್ತೆ ದುರಸ್ತಿಯ ಕಾರ್ಯಗಳನ್ನು ಕೈಗೆತ್ತಿಕೊಂಡು, ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ನಿರ್ವಹಣೆ ಬಗ್ಗೆ ದೂರುಗಳು ಬಂದಿದ್ದು, ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಿ, ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ ಕಾರ್ಯವನ್ನು ನಡೆಸಲು ಹೇಳಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ 41 ಕರೆಗಳಿಂದ, ಒಟ್ಟಾರೆಯಾಗಿ 64 ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಸದರಿ ಅಹವಾಲುಗಳನ್ನು ಸಹಾಯ ಪೋರ್ಟಲ್‌ನಲ್ಲಿ ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ, ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ನಗರ ಪಾಲಿಕೆಯ ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಲು ಪ್ರತಿ ಶುಕ್ರವಾರ ಆಯುಕ್ತರು ಫೋನ್ ಇನ್ ಕಾರ್ಯಕ್ರಮ ಮುಂದುವರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
=
ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಸಾಯಿ ಲೇಔಟ್ ಬಳಿಯ ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಆರ್ ಪುರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಾಯಿ ಲೇಔಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಉಂಟಾಗುವುದನ್ನು ತಡೆಯುವ ಸಲುವಾಗಿ ₹13.36 ಕೋಟಿ ವೆಚ್ಚದಲ್ಲಿ, ರೈಲ್ವೆ ಹಳಿ ಕೆಳಭಾಗಲ್ಲಿ ಅಳವಡಿಸಲು 6 ಮೀಟರ್ ಅಗಲ ಹಾಗೂ 4.5 ಮೀಟರ್ ಎತ್ತರದ ಎರಡು ಬಾಕ್ಸ್ ಕಾಸ್ಟಿಂಗ್ ಪ್ರಗತಿಯಲ್ಲಿದೆ. ಕಾಸ್ಟಿಂಗ್ ಮುಗಿದ ಕೂಡಲೇ ಬಾಕ್ಸ್ ಪುಷಿಂಗ್ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಹೇಳಿದರು.
ಹೆಣ್ಣೂರು - ಬಾಗಲೂರು ರಸ್ತೆಯಲ್ಲಿ 5 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಗೆ ವೇಗ ನೀಡಬೇಕು. ರಸ್ತೆಯ ಎರಡೂ ಬದಿ ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛತೆ ಕಾಪಾಡಬೇಕು. ಬ್ಲೆಸ್ಸಿಂಗ್ ಗಾರ್ಡನ್ ರಸ್ತೆಯನ್ನು 24 ಮೀಟರ್‌ಗೆ ವಿಸ್ತರಿಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಬಿ-ಸ್ಮೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಯಿ ಲೇಔಟ್ ಪ್ರದೇಶದಲ್ಲಿ ಕಸ ಸುರಿಯುವ ಸ್ಥಳಗಳು(ಬ್ಲ್ಯಾಕ್ ಸ್ಪಾಟ್) ನಿರ್ಮಾಣವಾಗಿದ್ದು, ತ್ವರಿತವಾಗಿ ಅವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.