ADVERTISEMENT

ಪಾಲಿಕೆಯ ಮೂವರು ಅಧಿಕಾರಿಗಳ ಅಮಾನತು

ಖಾತಾ ನೋಂದಣಿಯಲ್ಲಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:52 IST
Last Updated 10 ಅಕ್ಟೋಬರ್ 2019, 19:52 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಭೂಪರಿವರ್ತನೆ ಆದೇಶ ಮತ್ತು ನೋಂದಣಿ ದಾಖಲೆಗಳಿಲ್ಲದೇಸ್ಟರ್ಲಿಂಗ್ ಹರ್ಬನ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗೆ ಖಾತಾ ನೋಂದಣಿಗೆ ಅವಕಾಶ ಮಾಡಿಕೊಟ್ಟ ಮೂವರು ಅಧಿಕಾರಿಗಳನ್ನು ಬಿಬಿಎಂಪಿ ಅಮಾನತುಗೊಳಿಸಿದೆ.

ಕಂದಾಯ ಅಧಿಕಾರಿ ಕೆಂಪರಂಗಯ್ಯ, ಸಹಾಯಕ ಕಂದಾಯ ಅಧಿಕಾರಿ ದೊಡ್ಡಶಾಮಾಚಾರಿ, ಕಂದಾಯ ಪರಿವೀಕ್ಷಕ ಲೋಕೇಶ್‌ಬಾಬು ಅಮಾನತುಗೊಂಡವರು.

ಇದೇ ಆರೋಪದಲ್ಲಿ ರಾಜರಾಜೇಶ್ವರಿನಗರದ ಶಿವೇಗೌಡ ಮತ್ತು ಜಂಟಿ ಆಯುಕ್ತ ಜಗದೀಶ್‌ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಉಪ ಆಯುಕ್ತರು ಶಿಫಾರಸು ಮಾಡಿದ್ದಾರೆ.

ADVERTISEMENT

ಬೆಳ್ಳಂದೂರು ಖಾನೆ ಗ್ರಾಮದಲ್ಲಿನ ಒಟ್ಟು 32 ಎಕರೆ 27 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಖಾತೆ ನೋಂದಣಿ ಮಾಡುವಂತೆ ಕೋರಿ 2018ರ ಡಿಸೆಂಬರ್‌ 10ರಂದು ಸ್ಟರ್ಲಿಂಗ್ ಕಂಪನಿಯವರು ಅರ್ಜಿ ಸಲ್ಲಿಸಿದ್ದರು.

ಭೂಪರಿವರ್ತನೆ ಆದೇಶ ಮತ್ತು ನೊಂದಾಯಿತ ದಾಖಲೆಗಳು ಲಭ್ಯವಿಲ್ಲದಿದ್ದರೂ, ಕಂದಾಯ ಪರಿವೀಕ್ಷಕ ಲೋಕೇಶ್‌ಬಾಬು ಅವರು ಮೇಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸ್ಥಳ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸದೇ ಸಹಾಯಕ ಕಂದಾಯ ಅಧಿಕಾರಿ ದೊಡ್ಡಶಾಮಾಚಾರಿ ಅವರು ಕಂದಾಯ ಅಧಿಕಾರಿ ಕೆಂಪರಂಗಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

‘ದಾಖಲೆಗಳನ್ನು ಪರಿಶೀಲಿಸದೆಯೇ ಉಪ ಆಯುಕ್ತ ಶಿವೇಗೌಡ ಮತ್ತು ಜಂಟಿ ಆಯುಕ್ತ ಜಗದೀಶ್ ಅವರು ಖಾತಾ ನೋಂದಣಿಗೆ ಅನುಮೋದನೆ ನೀಡಿರುವುದು ಅಕ್ರಮ’ ಎಂದು ಆದೇಶದಲ್ಲಿ ಉಪ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

‘ಖಾತಾ ನೋಂದಣಿಗೆ 7 ವರ್ಷಗಳ ಹಿಂದಿನಿಂದ ಬಾಕಿ ಇದ್ದ ಆಸ್ತಿ ತೆರಿಗೆ ಪಡೆಯಬೇಕಿದ್ದರೂ, ಒಂದು ವರ್ಷದ ಆಸ್ತಿ ತೆರಿಗೆ ಮಾತ್ರ ಪಡೆಯಲಾಗಿದೆ. ಇದರಿಂದ ಬಿಬಿಎಂಪಿಗೆ ಆರ್ಥಿಕ ನಷ್ಟವಾಗಿದೆ. ಅರ್ಜಿ ಸಲ್ಲಿಕೆಗೆ ಮೂರು ದಿನ ಮುನ್ನವೇ ಅಂದರೆ ಡಿ.7ರಂದೇ ಖಾತೆ ನೋಂದಣಿಗೆ ಅನುಮೋದನೆ ನೀಡಲಾಗಿದೆ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.