ಬೆಂಗಳೂರು: ನಗರದಲ್ಲಿ ರಸ್ತೆ ಅಗೆದಿರುವ, ಕತ್ತರಿಸಿರುವ ಭಾಗವನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
‘ಜಲಮಂಡಳಿ ವತಿಯಿಂದ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿ ನಡೆಸಿರುವ ಕಡೆ, ರಸ್ತೆ ಅಗೆದಿರುವುದನ್ನು ದುರಸ್ತಿ ಮಾಡಬೇಕು. ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರಿನ ಕೊಳವೆಗಳಲ್ಲಿ ಸೋರಿಕೆ, ಒಳಚರಂಡಿ ಪೈಪ್‌ಲೈನ್ ಮೇಲ್ಬಾಗ ಕುಸಿದು ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವ ಕಡೆ, ದುರಸ್ತಿ ಕಾರ್ಯವನ್ನು ಶೀಘ್ರ ನಡೆಸಬೇಕು ಎಂದು ಹೇಳಿದರು.
ನಗರದಲ್ಲಿ 1,344 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಆದ್ಯತೆ ಮೇರೆಗೆ, ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಬಳಸಿಕೊಂಡು ಗುಂಡಿಗಳನ್ನು ಮುಚ್ಚಬೇಕು. ನಮ್ಮ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಡೆ ರಸ್ತೆ ಗುಂಡಿಗಳು ಇದ್ದಲ್ಲಿ ಅದನ್ನು ಪರಿಶೀಲಿಸಿ ಕೂಡಲೇ ಮುಚ್ಚಬೇಕು. ಬೊಮ್ಮಸಂದ್ರ-ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಮೆಟ್ರೊ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು ಎಂದು ಆದೇಶಿಸಿದರು.
ಸಂಚಾರ ಪೊಲೀಸರು ಹೊಸದಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸುತ್ತಿದ್ದು, ಕೇಬಲ್ ಅಳವಡಿಸಲು ರಸ್ತೆಯನ್ನು ಕತ್ತರಿಸಿದ್ದಾರೆ. ಇಂತಹ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದರು.
ಗುತ್ತಿಗೆದಾರರೊಂದಿಗೆ ಸಭೆ: ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ಅವರು, ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.