ADVERTISEMENT

ಜ್ಯೇಷ್ಠತೆ ಮೀರಿ ಕಾಮಗಾರಿ ಬಿಲ್‌ ಪಾವತಿ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 17:55 IST
Last Updated 21 ಅಕ್ಟೋಬರ್ 2021, 17:55 IST

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ಬಿಲ್‌ ಪಾವತಿ ವೇಳೆ ಜ್ಯೇಷ್ಠತೆ ನಿಯಮಗಳನ್ನು ಮೀರಿ ಕೆಲವು ಗುತ್ತಿಗೆದಾರರಿಗಷ್ಟೇ ಬಿಲ್‌ ಪಾವತಿ ಮಾಡಲಾಗುತ್ತಿದೆ. ರಾಜಕೀಯ ಪ್ರಭಾವ ಹೊಂದಿರುವ ಗುತ್ತಿಗೆದಾರರು ಜ್ಯೇಷ್ಠತೆ ಹೊಂದಿಲ್ಲದಿದ್ದರೂ ಬಿಲ್‌ಗಳ ಬಾಕಿ ಮೊತ್ತ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಗುತ್ತಿಗೆದಾರರು ದೂರಿದ್ದಾರೆ.

‘ಸರ್ಕಾರವು ಬಿಬಿಎಂಪಿಗೆ ₹ 550 ಕೋಟಿಯನ್ನು ಸೆಪ್ಟೆಂಬರ್‌ ಅಂತ್ಯದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡುವಾಗ ತಾರತಮ್ಯ ಮಾಡಲಾಗಿದೆ. ಜ್ಯೇಷ್ಠತೆ ಆಧಾರದಲ್ಲಿ ಯಾವ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಆಗಬೇಕಿತ್ತೋ ಅವರನ್ನು ಕಡೆಗಣಿಸಲಾಗಿದೆ. ಎನ್‌ಸಿಸಿಯಂತಹ ಗುತ್ತಿಗೆ ಸಂಸ್ಥೆಗೆ ಜ್ಯೇಷ್ಠತೆ ಮೀರಿ ಪದೇ ಪದೇ ಹಣ ಬಿಡುಗಡೆ ಮಾಡಲಾಗಿದೆ. ಈ ಸಂಸ್ಥೆಯು 2021ರ ಜುಲೈನಲ್ಲಿ ಪೂರ್ಣಗೊಳಿಸಿದ ಕಾಮಗಾರಿಗೆ ಎರಡೂವರೆ ತಿಂಗಳಲ್ಲೇ ₹ 28.61 ಕೋಟಿ ಬಿಲ್‌ ಪಾವತಿಯಾಗಿದೆ. 2020ರ ಅಕ್ಟೋಬರ್‌ನಿಂದ ಇದುವರೆಗೆ ಈ ಸಂಸ್ಥೆಗೆ ಒಟ್ಟು ₹ 151.46 ಕೋಟಿ ಬಿಲ್‌ ಪಾವತಿಸಲಾಗಿದೆ. ಇತರ ಕೆಲವು ಗುತ್ತಿಗೆದಾರರು ತಮ್ಮ ಬಿಲ್‌ಗಾಗಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

‘ಕಸ ವಿಲೇವಾರಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಇತರ ತುರ್ತು ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡಬಹುದು. ಆದರೆ, ಈ ಬಾರಿ ಬಿಲ್ ಪಾವತಿ ಮಾಡುವಾಗ ಈ ನಿಯಮವೂ ಪಾಲನೆ ಆಗಿಲ್ಲ. ಸಣ್ಣ ಪುಟ್ಟ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ವರ್ಷಗಳ ಬಳಿಕವೂ ಬಿಲ್‌ ಮೊತ್ತ ಕೈಸೇರುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬಾಕಿ ಬಿಲ್‌ಗಳನ್ನು ಪಾವತಿಸುವಾಗ ಬಿಡುಗಡೆಯಾದ ಅನುದಾನದಲ್ಲಿ ಶೇ 80ರಷ್ಟು ಜ್ಯೇಷ್ಠತೆ ಆಧಾರದಲ್ಲಿ ಪಾವತಿಸಬೇಕು. ಇನ್ನುಳಿದ ಶೇ 20ರಷ್ಟು ಮೊತ್ತವನ್ನು ತುರ್ತು ಕಾಮಗಾರಿಗಳಿಗೆ ಅಥವಾ ಆದ್ಯತೆಯ ಕಾಮಗಾರಿಗಳಿಗೆ ಮುಖ್ಯ ಆಯುಕ್ತರು ವಿವೇಚನೆಯ ಆಧಾರದಲ್ಲಿ ಬಿಡುಗಡೆ ಮಾಡುವುದಕ್ಕೆ ಅವಕಾಶ ಇದೆ. ಇದನ್ನು ತಪ್ಪು ಎನ್ನಲಾಗದು. ಆದರೆ, ಈ ವಿವೇಚನೆಯಡಿ ಬಿಲ್‌ ಬಿಡುಗಡೆ ಮಾಡುವ ವ್ಯವಸ್ಥೆಯಲ್ಲೂ ಪಾರದರ್ಶಕತೆ ತಂದರೆ ಒಳ್ಳೆಯದು. ರಾಜಕೀಯ ಪ್ರಭಾವ ಇರುವ ಗುತ್ತಿಗೆದಾರರು ಜ್ಯೇಷ್ಠತೆ ಮಿರಿ ಬಿಲ್‌ ಮೊತ್ತ ಬಿಡುಗಡೆ ಮಾಡಿಸಿಕೊಳ್ಳುವ ಪ್ರಸಂಗಗಳು ನಡೆಯುತ್ತಿರುವುದು ನಿಜ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಅಂಬಿಕಾಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುತ್ತಿಗೆದಾರರ ಮನೆಯಲ್ಲಿ ಮದುವೆಯಂತಹ ಶುಭಕಾರ್ಯಗಳಿದ್ದಾಗ ಅಥವಾ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುವ ಸಂದರ್ಭ ಎದುರಾದಾಗ ಅವರಿಗೆ ಪಾವತಿಯಾಗಬೇಕಾದ ಮೊತ್ತದಲ್ಲಿ ಭಾಗಶಃ ಹಣವನ್ನು ಜ್ಯೇಷ್ಠತೆ ಮೀರಿ ಪಾವತಿಸಲು ಅವಕಾಶವಿದೆ’ ಎಂದರು.

ಜ್ಯೇಷ್ಠತೆ ಮೀರಿ ಬಿಲ್‌ ಪಾವತಿ ಆಗುತ್ತಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಕರೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.