ADVERTISEMENT

ಪ್ಲಾಸ್ಟಿಕ್ ಬಳಕೆ: ಐದು ಪಟ್ಟು ದಂಡ ಅನುಮಾನ

ಬೈಲಾ ರೂಪಿಸುವವರೆಗೆ ಕ್ರಮ ಬೇಡ: ಮೇಯರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 3:38 IST
Last Updated 1 ಆಗಸ್ಟ್ 2019, 3:38 IST
   

ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವ ಮಳಿಗೆಗಳಿಗೆ ಐದು ಪಟ್ಟು ದಂಡ ವಿಧಿಸುವ ಹಾಗೂ ಅವುಗಳ ಪರವಾನಗಿ ರದ್ದು ಮಾಡುವ ನಿಯಮವು ಗುರುವಾರದಿಂದ ಜಾರಿಯಾಗುವುದು ಅನುಮಾನ.

ಪ್ಲಾಸ್ಟಿಕ್ ನಿಷೇಧವನ್ನು ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶದಿಂದ ಜು.15ರಿಂದ ಆಂದೋಲನ ಹಮ್ಮಿಕೊಂಡಿದೆ. ಪ್ಲಾಸ್ಟಿಕ್‌ ಬಳಸುವ ಅಥವಾ ಮಾರಾಟ ಮಾಡುವವರಿಗೆ ಆ.1ರಿಂದಲೇ ದಂಡ ವಿಧಿಸಲಾಗುತ್ತದೆ ಎಂದು ಪಾಲಿಕೆ ಈ ಹಿಂದೆ ಹೇಳಿತ್ತು.

ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಿನ ಜಾರಿ ಸಲುವಾಗಿ ಪಾಲಿಕೆ ಹಮ್ಮಿಕೊಂಡಿರುವ ಆಂದೋಲನ ಸಂಬಂಧ ಬುಧವಾರ 198 ವಾರ್ಡ್‌ಗಳ ಆರೋಗ್ಯಾಧಿಕಾರಿಗಳ ಜತೆಗೆಮೇಯರ್ ಗಂಗಾಂಬಿಕೆ ಸಭೆ ನಡೆಸಿದರು.

ADVERTISEMENT

‘ಐದು ಪಟ್ಟು ದಂಡ ಹಾಗೂ ಪರವಾನಗಿ ರದ್ದು ಮಾಡುವ ಪ್ರಸ್ತಾವನೆಯನ್ನು ಬೈಲಾದಲ್ಲಿ ಅಳವಡಿಸುವವರೆಗೆ ಯಾವೊಬ್ಬ ಅಧಿಕಾರಿಗಳೂ ಕಾನೂನಿನ ಚೌಕಟ್ಟು ಮೀರಿ ಕ್ರಮ ಕೈಗೊಳ್ಳಬಾರದು’ ಎಂದು ಮೇಯರ್‌ ಸೂಚನೆ ನೀಡಿದರು.

‘ಪ್ಲಾಸ್ಟಿಕ್ ಬಳಕೆ ಮಾಡುವ ಮಳಿಗೆಗಳ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇರಬೇಕು. ದಾಳಿ ನಡೆಸುವ ವೇಳೆ ತೊಂದರೆಯಾದರೆ ಪೊಲೀಸ್ ಅಥವಾ ಮಾರ್ಷಲ್‌ಗಳ ಸಹಕಾರದಲ್ಲಿ ಪ್ಲಾಸ್ಟಿಕ್ ಜಪ್ತಿ ಮಾಡಬೇಕು. ಪ್ಲಾಸ್ಟಿಕ್ ಮುಕ್ತ ಬೆಂಗಳೂರನ್ನಾಗಿ ಮಾಡುವುದೇ ಪಾಲಿಕೆಯ ಗುರಿ’ ಎಂದರು.

ನಗರದಲ್ಲಿ 3,700 ಡೆಂಗಿ ಪ್ರಕರಣ
ಡೆಂಗಿ ಜ್ವರಕ್ಕೆ ಒಳಗಾದವರ ಸಂಖ್ಯೆ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.‌ ಪಾಲಿಕೆ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ ಇದುವರೆಗೆ 3,700 ಪ್ರಕರಣಗಳು ದಾಖಲಾಗಿವೆ.

‘100ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿರುವ 10 ವಾರ್ಡ್‌ಗಳು ಹಾಗೂ 50ಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿರುವ 15 ವಾರ್ಡ್‌ಗಳ ಪಟ್ಟಿಯನ್ನುಪಾಲಿಕೆ ಆರೋಗ್ಯಾಧಿಕಾರಿಗಳು ಸಿದ್ಧಪಡಿಸಿದ್ದಾರೆ. ಫಾಗಿಂಗ್ ಮತ್ತು ಔಷಧಿ ಸಿಂಪಡಣೆಯ ಗುತ್ತಿಗೆ ಪಡೆದಿರುವವರು ಸೊಳ್ಳೆ ನಿಯಂತ್ರಣಕ್ಕೆ ತಕ್ಷಣವೇ ಕ್ರಮ ವಹಿಸಬೇಕು. ಇಂತಹ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಮೇಯರ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.