ADVERTISEMENT

ಸಂಪಿಗೆ ರಸ್ತೆ ದುರಸ್ತಿಗೊಳಿಸಲು ಬೆಂಗಳೂರು ಉಳಿಸಿ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 16:01 IST
Last Updated 21 ನವೆಂಬರ್ 2022, 16:01 IST
ಮಲ್ಲೇಶ್ವರದ ಸಂಪಿಗೆ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ಅವರಿಗೆ ಬೆಂಗಳೂರು ಉಳಿಸಿ ಸಮಿತಿ ಮನವಿ ಸಲ್ಲಿಸಿದರು.
ಮಲ್ಲೇಶ್ವರದ ಸಂಪಿಗೆ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ಅವರಿಗೆ ಬೆಂಗಳೂರು ಉಳಿಸಿ ಸಮಿತಿ ಮನವಿ ಸಲ್ಲಿಸಿದರು.   

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಬೆಂಗಳೂರು ಉಳಿಸಿ ಸಮಿತಿಯ ಉತ್ತರ ವಲಯವು ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದೆ.

ಸಮಿತಿಯ ಸದಸ್ಯ ಜಯಣ್ಣ ಮಾತನಾಡಿ, ‘ಮಲ್ಲೇಶ್ವರ ಅತ್ಯಂತ ಹಳೆಯ ಬಡಾವಣೆಯಾಗಿದೆ. ಇಲ್ಲಿನ ಸಂಪಿಗೆ ರಸ್ತೆ, ಪ್ಯಾಲೆಸ್‌ ಗುಟ್ಟಹಳ್ಳಿ ಮುಖ್ಯರಸ್ತೆಯ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, ಒಂದು ವರ್ಷದಿಂದ ಬಸ್‌ ಸಂಚಾರವೇ ಸ್ಥಗಿತಗೊಂಡಿದೆ. ಸಾರ್ವಜನಿಕರು ಬೇರೆಡೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಂಗಡಿ ಮಾಲೀಕರು, ತರಕಾರಿ ಹೂವಿನ ಮತ್ತು ಬೀದಿ ಬದಿ ವ್ಯಾಪಾರಿಗಳ ಜೀವನ ಸಂಕಷ್ಟಕ್ಕೆ ದೊಡಿದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ಯಾಲೆಸ್‌ ಗುಟ್ಟಹಳ್ಳಿ ಮುಖ್ಯರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು. ಕೂಡಲೇ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಿ, ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್, ‘ಮಲ್ಲೇಶ್ವರ ಸಂಪಿಗೆ ರಸ್ತೆಯ ಕಾಮಗಾರಿಯನ್ನು ಹತ್ತು ದಿನಗಳಲ್ಲಿ ಪೂರ್ಣಗೊಳಿಸಿ, ಬಸ್‌ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಸಮಿತಿಯ ಸದಸ್ಯರಾದ ಕೃಷ್ಣ, ನಿರ್ಮಲ, ವೈಷ್ಣವಿ, ಕಲಾವತಿ, ನಿತ್ಯ, ಭರತ್ ಆರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.