ADVERTISEMENT

ಬಿಬಿಎಂಪಿ ಶಾಲಾ, ಕಾಲೇಜು ಇಂದಿನಿಂದ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 28 ಮೇ 2025, 19:30 IST
Last Updated 28 ಮೇ 2025, 19:30 IST
   

ಬೆಂಗಳೂರು: ಬಿಬಿಎಂಪಿಯ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಮೇ 29ರಿಂದ ಪ್ರಾರಂಭವಾಗಲಿವೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

2025-26ನೇ ಶೈಕ್ಷಣಿಕ ಸಾಲಿನ ವಿವಿಧ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜೂನ್‌ 20ರವರೆಗೆ ನಡೆಯಲಿದೆ ಎಂದರು.

ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಶೂ ಮತ್ತು ಕಾಲುಚೀಲ, ಬ್ಯಾಗ್‌, ಸ್ವೆಟರ್ ಸಿಗಲಿವೆ. ಮಧ್ಯಾಹ್ನ ಬಿಸಿಯೂಟ (ಶಿಶುವಿಹಾರ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ) ಬಿಸಿ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ (ಶಿಶುವಿಹಾರ ಶಾಲಾ ಮಕ್ಕಳಿಗೆ), ಮಕ್ಕಳ ಆಟಿಕೆಗಳು (ಶಿಶುವಿಹಾರ ಶಾಲಾ ಮಕ್ಕಳಿಗೆ), ಆಸೀನರಾಗಲು ಮ್ಯಾಟ್‌ಗಳು (ಶಿಶುವಿಹಾರ ಶಾಲಾ ಮಕ್ಕಳಿಗೆ), ಉನ್ನತ ಶಿಕ್ಷಣ ಒದಗಿಸಲು ಸ್ಮಾರ್ಟ್ ತರಗತಿ, ಗಣಕಯಂತ್ರ ತರಬೇತಿ (ಕಂಪ್ಯೂಟರ್ ಲ್ಯಾಬ್) ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿ (ಶೇ 85) ಪಡೆದ ವಿದ್ಯಾರ್ಥಿಗಳಿಗೆ ತಲಾ ₹25 ಸಾವಿರ, ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ತಲಾ ₹35 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.

ಭಾನುವಾರವೂ ಸಮೀಕ್ಷೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ರಜಾ ದಿನವಾದ ಭಾನುವಾರವೂ (ಜೂನ್‌ 1) ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ಮಾಡಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.‌

ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ ಪ್ರಗತಿ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಈ ಉದ್ದೇಶದಿಂದ ಪರಿಶಿಷ್ಟ ಜಾತಿ ಸಮುದಾಯಗಳು ಹೆಚ್ಚು ವಾಸವಿರುವ ಪ್ರದೇಶಗಳಲ್ಲಿ ಬೂತ್ ಮಟ್ಟದಲ್ಲಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದು ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.