ADVERTISEMENT

ರೇಬೀಸ್ ಇರುವ ನಾಯಿಗಳನ್ನು ಪ್ರತ್ಯೇಕಿಸಲು ಪಾಲಿಕೆ ಕ್ರಮ: ಸಹಾಯವಾಣಿ ಆರಂಭ

ಮೂರು ವಾಹನಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 16:04 IST
Last Updated 16 ಆಗಸ್ಟ್ 2020, 16:04 IST
ರೇಬಿಸ್ ಹೊಂದಿರುವ ಶಂಕೆ ಇರುವ ನಾಯಿಗಳನ್ನು ಹಿಡಿದು ಪ್ರತ್ಯೇಕಿಸುವ ವಾಹನಗಳಿಗೆ ಎಂ.ಗೌತಮ್‌ ಕುಮಾರ್‌ ಶನಿವಾರ ಚಾಲನೆ ನೀಡಿದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಉಪಮೇಯರ್ ರಾಮಮೋಹನ ರಾಜು, ಎನ್‌.ಮಂಜುನಾಥ್ ಪ್ರಸಾದ್ ಇದ್ದಾರೆ.
ರೇಬಿಸ್ ಹೊಂದಿರುವ ಶಂಕೆ ಇರುವ ನಾಯಿಗಳನ್ನು ಹಿಡಿದು ಪ್ರತ್ಯೇಕಿಸುವ ವಾಹನಗಳಿಗೆ ಎಂ.ಗೌತಮ್‌ ಕುಮಾರ್‌ ಶನಿವಾರ ಚಾಲನೆ ನೀಡಿದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಉಪಮೇಯರ್ ರಾಮಮೋಹನ ರಾಜು, ಎನ್‌.ಮಂಜುನಾಥ್ ಪ್ರಸಾದ್ ಇದ್ದಾರೆ.   

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯು 2030ರ ಒಳಗೆ ಜಗತ್ತನ್ನು ರೇಬಿಸ್‌ಮುಕ್ತ ಮಾಡುವ ಗುರಿ ನಿಗದಿಪಡಿಸಿದ್ದು, ಇದರ ಅನುಷ್ಠಾನಕ್ಕೆ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದೆ. ನಗರದಲ್ಲಿ ರೇಬಿಸ್‌ ನಿಯಂತ್ರಣಕ್ಕಾಗಿ ಪ್ರಾಣಿದಯಾ ಸಂಘಗಳ ಸಹಯೋಗದಲ್ಲಿ ಸಹಾಯವಾಣಿಯನ್ನು (6364893322) ಆರಂಭಿಸಿದೆ.

ನಗರದಲ್ಲಿ ಯಾವುದಾದರೂ ವ್ಯಕ್ತಿಗೆ ಅಥವಾ ನಾಯಿಗೆ ಬೇರೆ ನಾಯಿ ಕಚ್ಚಿದರೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಚ್ಚಿದ ನಾಯಿಯನ್ನು ಹಿಡಿದು ಪ್ರತ್ಯೇಕಿಸಿ ಅದಕ್ಕೆ ರೇಬಿಸ್ ಇದೆಯೋ ಎಂಬುದನ್ನು ಖಾತರಿ ಪಡಿಸಲು ಹಾಗೂ ಆ ನಾಯಿಗೆ ರೇಬಿಸ್‌ ಇದ್ದರೆ ಅದರ ಸಂಪರ್ಕಕ್ಕೆ ಬಂದ ಇತರ ನಾಯಿಗಳನ್ನು ಗುರುತಿಸಿ ರೇಬಿಸ್‌ ನಿರೋಧಕ ಚುಚ್ಚುಮದ್ದು ನೀಡುವುದಕ್ಕೂ ಬಿಬಿಎಂಪಿ ಕ್ರಮ ಕೈಗೊಂಡಿದೆ. ನಾಯಿಗಳನ್ನು ಹಿಡಿಯುವ ಮತ್ತು ರೇಬಿಸ್‌ ಜಾಗೃತಿ ಮೂಡಿಸುವ ಸಲುವಾಗಿಯೇ ಮೂರು ವಾಹನಗಳನ್ನು ಒದಗಿಸಲಾಗಿದೆ.

ರೇಬಿಸ್‌ ಸಹಾಯವಾಣಿಗೆ ಹಾಗೂ ರೇಬಿಸ್‌ ಜಾಗೃತಿ ವಾಹನಗಳಿಗೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಶನಿವಾರ ಚಾಲನೆ ನೀಡಿದರು.

ADVERTISEMENT

‘ಚಾರ್ಲೀಸ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌ (ಸಿಎಆರ್‌ಇ), ವರ್ಲ್ಡ್‌ ವೈಡ್‌ ವೆಟರಿನರಿ ಸರ್ವಿಸಸ್‌ (ಡಬ್ಲ್ಯುವಿಎಸ್‌) ಹಾಗೂ ಬೆಂಗಳೂರು ಪಶುಪಾಲನಾ ಕಾಲೇಜುಗಳ ಸಹಯೋಗದಲ್ಲಿ ಪಾಲಿಕೆಯು ರೇಬಿಸ್‌ ಸಹಾಯವಾಣಿಯನ್ನು ಆರಂಭಿಸಿದೆ. ನಾಯಿಗೆ ಬೇರೆ ನಾಯಿ ಕಚ್ಚಿದಾಗ, ಅದು ರೇಬಿಸ್‌ ಹೊಂದಿರುವ ಸಂದೇಹವಿದ್ದರೆ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಬಹುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಕರೆ ಬಂದ ತಕ್ಷಣವೇ ಪಶುಪಾಲನಾ ತಂಡವು ಸ್ಥಳಕ್ಕೆ ತೆರಳಿ ಕಚ್ಚಿದ ನಾಯಿಯನ್ನು ಹಿಡಿದು ಸಮೀಪದ ಸಂತಾನಶಕ್ತಿ ನಿಯಂತ್ರಣ ಕೇಂದ್ರದಲ್ಲಿ (ಎಬಿಸಿ) 10 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಿದೆ. ಆ ನಾಯಿಗೆ ರೇಬೀಸ್ ಇರುವುದು ಖಚಿತವಪಟ್ಟರೆ ಕಚ್ಚಿಸಿಕೊಂಡ ನಾಯಿಗೆ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಆ ಪರಿಸರದಲ್ಲಿರುವ ಇತರ ನಾಯಿಗಳಿಗೂ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ’ ಎಂದರು.

‘ರೇಬಿಸ್‌ ಜಾಗೃತಿಗೆ ರಾಜರಾಜೇಶ್ವರಿನಗರ, ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯಗಳಿಗೆ ಒಂದು ವಾಹನ, ಯಲಹಂಕ, ದಾಸರಹಳ್ಳಿ ಹಾಗೂ ಪಶ್ಚಿಮ ವಲಯಕ್ಕೆ ಒಂದು ವಾಹನ ಹಾಗೂ ಪೂರ್ವ ಮತ್ತು ಮಹದೇವಪುರ ವಲಯಗಳಿಗೆ ಒಂದು ವಾಹನವನ್ನು ಒದಗಿಸಲಾಗುತ್ತದೆ. ಇವು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿವೆ. ಕ್ರಮೇಣ ದಿನದ 24 ಗಂಟೆಯೂ ಇವುಗಳ ಸೇವೆಯನ್ನು ವಿಸ್ತರಿಸುವ ಹಾಗೂ ವಲಯಕ್ಕೊಂದು ವಾಹನ ಒದಗಿಸುವ ಉದ್ದೇಶವಿದೆ. ಇದರಲ್ಲಿ ಚಾಲಕ ಮತ್ತು ನಾಯಿ ಹಿಡಿಯಲು ನಾಲ್ವರು ಪರಿಣಿತ ಸಿಬ್ಬಂದಿ ಇರಲಿದ್ದಾರೆ. ಮನುಷ್ಯರಿಗೆ ನಾಯಿ ಕಚ್ಚಿದರೆ ಪಡೆಯಬೇಕಾದ ಚಿಕಿತ್ಸೆ ಬಗ್ಗೆಯೂ ಈ ಸಿಬ್ಬಂದಿ ಅರಿವು ಮೂಡಿಸಲಿದ್ದಾರೆ’ ಎಂದು ಬಿಬಿಎಂಪಿ ಪಶುಸಂಗೋಪನಾ ವಿಭಾಗದಜಂಟಿ ನಿರ್ದೇಶಕ ಎಸ್‌.ಶಶಿಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಮಗ್ರ ಮಾಹಿತಿಗೆ ತಂತ್ರಾಂಶ:‘ರೇಬೀಸ್ ಚಿಕಿತ್ಸೆ ನೀಡುವ ಬಗ್ಗೆ ಸಮರ್ಪಕ ಮಾಹಿತಿ ಪಡೆಯಲು ಡಬ್ಲ್ಯುವಿಎಸ್‌ ಸಂಸ್ಥೆಯು ತತ್ರಾಂಶವನ್ನು ಸಿದ್ದಪಡಿಸಿ ‍ಪಾಲಿಕೆಗೆ ಉಚಿತವಾಗಿ ಒದಗಿಸಿದೆ. ನಾಯಿ ಹಿಡಿದ ಸ್ಥಳ, ನಾಯಿಯ ಚಿತ್ರ ಹಾಗೂ ಭೌಗೋಳಿಕ ಸ್ಥಳದ ವಿವರಗಳುಈ ತಂತ್ರಾಂಶದಲ್ಲಿ ಲಭ್ಯವಾಗಲಿವೆ. ಎಷ್ಟು ನಾಯಿಗಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂಬ ನಿಖರ ಮಾಹಿತಿಯೂ ಇದರಲ್ಲಿ ದಾಖಲಾಗುತ್ತದೆ. ರೇಬಿಸ್ ನಿರೋಧಕ ಚುಚ್ಚುಮದ್ದು ನೀಡುವ ಅಭಿಯಾನ ಹಮ್ಮಿಕೊಳ್ಳುವಾಗ ಈ ಮಾಹಿತಿ ನೆರವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.