ADVERTISEMENT

ಬಿಬಿಎಂಪಿ: ಆಸ್ತಿ ತೆರಿಗೆ ಸಂಗ್ರಹ ₹200 ಕೋಟಿ ಹೆಚ್ಚಳ

4 ತಿಂಗಳಲ್ಲಿ ₹ 1,948 ಕೋಟಿ ತೆರಿಗೆ ಸಂಗ್ರಹ l ಜಾಗೃತಿ ಮೂಡಿಸಲು ವಾರಕ್ಕೊಮ್ಮೆ ಆಂದೋಲನ

ಪ್ರವೀಣ ಕುಮಾರ್ ಪಿ.ವಿ.
Published 13 ಆಗಸ್ಟ್ 2019, 20:12 IST
Last Updated 13 ಆಗಸ್ಟ್ 2019, 20:12 IST
   

ಬೆಂಗಳೂರು: ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹದಲ್ಲಿ ₹200 ಕೋಟಿಗಳಷ್ಟು ಹೆಚ್ಚಳ ಕಂಡುಬಂದಿದೆ. ಆಗಸ್ಟ್‌ 4 ರವರೆಗೆ ಒಟ್ಟು ₹ 1,948 ಕೋಟಿ ತೆರಿಗೆ ಪಾಲಿಕೆ ಖಾತೆಗೆ ಜಮೆಯಾಗಿದೆ.

2018–19ನೇ ಸಾಲಿನಲ್ಲಿ ಇದೇ ದಿನಾಂಕದವರೆಗೆ ಒಟ್ಟು ₹ 1,754.40 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ಪಾಲಿಕೆ 2018–19ನೇ ಸಾಲಿನಲ್ಲಿ ₹ 3,100 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಶತಾಯಗತಾಯ ಗುರಿ ತಲುಪಲೇಬೇಕೆಂಬ ಉದ್ದೇಶದಿಂದ ಪ್ರತಿ ಬುಧವಾರ ‘ತೆರಿಗೆ ವಸೂಲಿ ಆಂದೋಲನ’ ಆರಂಭಿಸಿತ್ತು. ಆದರೂ ಈ ಗುರಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ. 2018–19ನೇ ಆರ್ಥಿಕ ವರ್ಷ ಕೊನೆಗೊಂಡಾಗ ಆಸ್ತಿ ತೆರಿಗೆ ಸಂಗ್ರಹ ₹ 2,550 ಕೋಟಿವರೆಗೆ ತಲುಪಿತ್ತು. ಗುರಿ ತಲುಪಲು ಇನ್ನೂ ₹ 550 ಕೋಟಿಗಳಷ್ಟು ತೆರಿಗೆ ಸಂಗ್ರಹಿಸಬೇಕಿತ್ತು.

ADVERTISEMENT

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು ಫೆಬ್ರುವರಿಯಲ್ಲಿ ಬಜೆಟ್‌ ಮಂಡಿಸಿದಾಗ 2019–20ನೇ ಸಾಲಿಗೆ ಮೊದಲು ₹3,500 ಕೋಟಿ ತರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸಿದ್ದರು. ಬಜೆಟ್‌ ಕುರಿತು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಬಜೆಟ್‌ ಗಾತ್ರವನ್ನು ₹10,691 ಕೋಟಿಯಿಂದ ₹12,574 ಕೋಟಿಗೆ ಹೆಚ್ಚಿಸಲಾಗಿತ್ತು. ಈ ಕೊರತೆ ನೀಗಿಸಲು ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ₹4 ಸಾವಿರ ಕೋಟಿಗೆ ಪರಿಷ್ಕರಿಸಲಾಗಿತ್ತು.

‘ನಾವು ಆದಾಯ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಪ್ರತಿ ಬುಧವಾರ ತೆರಿಗೆ ಆಂದೋಲನ ಹಮ್ಮಿಕೊಳ್ಳುತ್ತಿದ್ದೇವೆ. ಆ ದಿನ ಕಂದಾಯ ಅಧಿಕಾರಿಗಳು ತೆರಿಗೆ ಸಂಗ್ರಹದ ಬಗ್ಗೆ ಜನ ಜಾಗೃತಿ ಮೂಡಿಸುತ್ತಾರೆ ಹಾಗೂ ಬಾಕಿ ತೆರಿಗೆ ವಸೂಲಿಗೂ ಆದ್ಯತೆ ನೀಡುತ್ತಿದ್ದೇವೆ. ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕಂದಾಯ ಅಧಿಕಾರಿಗಳು ನೋಟಿಸ್‌ ಜಾರಿ ಮಾಡುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2018–19ರಲ್ಲಿ ₹ 2,550 ಕೋಟಿ ಸಂಗ್ರಹವಾಗಿದ್ದೇ ವರ್ಷವೊಂದರಲ್ಲಿ ಸಂಗ್ರಹವಾದ ಗರಿಷ್ಠ ಪ್ರಮಾಣದ ತೆರಿಗೆ. ನಾವು ನಾಲ್ಕೇ ತಿಂಗಳಲ್ಲಿ ಈ ಸಾಲಿನ ಗುರಿಯ ಅರ್ಧದಷ್ಟನ್ನು ತಲುಪಿರಬಹುದು. ಆದರೂ ಈಗಿನ ವೇಗದಲ್ಲೇ ತೆರಿಗೆ ಸಂಗ್ರಹವಾಗುತ್ತಾ ಹೋದರೂ ಈ ಆರ್ಥಿಕ ವರ್ಷದಲ್ಲಿ ಗುರಿ ತಲುಪುವ ನಿರೀಕ್ಷೆ ಕಡಿಮೆ. ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ನೀಡುವುದರಿಂದ ಆ ತಿಂಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಈ ಬಾರಿಯೂ ಏಪ್ರಿಲ್‌ ತಿಂಗಳೊಂದರಲ್ಲೇ ₹1,000 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿತ್ತು’ ಎಂದು ಅವರು ವಿವರಿಸಿದರು.

₹314 ಕೋಟಿ ಹಳೆ ಬಾಕಿ ವಸೂಲಿ

‘ಈ ವರ್ಷದ ಆರಂಭದಲ್ಲಿ ಆಸ್ತಿ ತೆರಿಗೆಯ ಹಳೆ ಬಾಕಿ ₹ 700 ಕೋಟಿ ಇತ್ತು. ಇದುವರೆಗೆ ₹ 314 ಕೋಟಿ ಹಳೆ ಬಾಕಿ ವಸೂಲಿ ಆಗಿದೆ. ಇದಲ್ಲದೆ, ಇನ್ನೂ ಸುಮಾರು ₹ 386 ಕೋಟಿಗಳಷ್ಟು ಹಳೆ ಬಾಕಿ ವಸೂಲಿ ಆಗಬೇಕಿದೆ. ಈ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ’ ಎಂದು ಪಾಲಿಕೆಯ ಅಧಿಕಾರಿ ತಿಳಿಸಿದರು.

ವರ್ಷ; ಹಳೆ ಬಾಕಿ (₹ ಕೋಟಿ); ಆಯಾ ವರ್ಷದ ತೆರಿಗೆ (₹ ಕೋಟಿ); ಪಾವತಿಸಿದವರು; ಒಟ್ಟು

2016–17; 64.32; 1,314.22; 9.25 ಲಕ್ಷ; 1,378.54

2017–18; 193.41; 1,418.10; 10.01 ಲಕ್ಷ; 1611

2018–19; 221.63; 1,532.78; 9.90 ಲಕ್ಷ; 1,754.40

2019–20; 260.80;1687; 10.72 ಲಕ್ಷ ; 1,948.55


ಯಾವ ವಲಯದಲ್ಲಿ ಎಷ್ಟು ತೆರಿಗೆ ಸಂಗ್ರಹ?

ವಲಯ; ಮೊತ್ತ (₹ ಕೋಟಿಗಳಲ್ಲಿ)

ಬೊಮ್ಮನಹಳ್ಳಿ; 191.13

ದಾಸರಹಳ್ಳಿ; 55.18

ಪೂರ್ವ; 387.56

ಮಹದೇವಪುರ; 487.15

ಆರ್‌.ಆರ್‌.ನಗರ; 125.05

ದಕ್ಷಿಣ; 321.08

ಪಶ್ಚಿಮ; 220.05

ಯಲಹಂಕ; 161.36

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.