ADVERTISEMENT

ಬಿಬಿಎಂಪಿ: ಟಿಡಿಆರ್‌ ಕಡತಗಳು ನಾಪತ್ತೆ!

ಬಿಬಿಎಂಪಿಗೆ ಕೇಳಿದ್ದು 19 ಫೈಲ್‌; ಬಂದಿದ್ದು 11 ಮಾತ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2019, 19:44 IST
Last Updated 28 ಮೇ 2019, 19:44 IST
   

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವರ್ಗಾವಣೆ‘ (ಟಿಡಿಆರ್) ಸಂಬಂಧದ ಕಡತಗಳು ‘ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ’ (ಬಿಬಿಎಂಪಿ) ಕಪಾಟಿನೊಳಗಿಂದ ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬಯಲಿಗೆ ಬಂದಿದೆ.

‘ಟಿಡಿಆರ್‌’ ವಂಚನೆ ಕುರಿತು ತನಿಖೆ ನಡೆಸುತ್ತಿರುವ ‘ಭ್ರಷ್ಟಾಚಾರ ನಿಗ್ರಹ ದಳ’ವು (ಎಸಿಬಿ) ಬಿಬಿಎಂಪಿಗೆ 19 ಕಡತಗಳನ್ನು ಒದಗಿಸುವಂತೆ ಕೇಳಿತ್ತು. ಆದರೆ, 11 ಕಡತ ಮಾತ್ರ ಕೊಡಲಾಗಿದೆ ಮಿಕ್ಕ ಎಂಟು ಕಡತ ಏನಾದವು ಎಂಬ ಮಾಹಿತಿ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಸಂಬಂಧದ ಟಿಡಿಆರ್‌ ಪ್ರಕರಣದಲ್ಲಿ ಎರಡು ಫೈಲ್‌ಗಳನ್ನು ತನಿಖಾದಳ ಕೇಳಿತ್ತು. ಒಂದನ್ನು ಮಾತ್ರ ನೀಡಲಾಗಿದೆ. ಮತ್ತೊಂದು ಬಂದಿಲ್ಲ. ಇದರಿಂದಾಗಿ ಎಸಿಬಿ ಅಧಿಕಾರಿಗಳೇ ಬಿಬಿಎಂಪಿ ಕಚೇರಿಗೆ ತೆರಳಿ ಕಪಾಟುಗಳನ್ನು ಜಾಲಾಡುತ್ತಿದ್ದಾರೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

2005ರಲ್ಲಿ ಟಿಡಿಆರ್‌ ವ್ಯವಸ್ಥೆ ಜಾರಿಗೆ ಬಂದ ಬಳಿಕ ಬಿಬಿಎಂಪಿ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಕಟ್ಟಡಗಳು, ನಿವೇಶನಗಳಿಗೆ ಸಂಬಂಧಿಸಿದಂತೆ ಎಷ್ಟು ಟಿಡಿಆರ್‌ ಪ್ರಕರಣಗಳಿವೆ. ಎಷ್ಟು ಅಭಿವೃದ್ಧಿ ಹಕ್ಕು ಪತ್ರ (ಡಿಆರ್‌ಸಿ) ವಿತರಿಸಲಾಗಿದೆ ಎಂಬ ಸಮಗ್ರ ಮಾಹಿತಿ ಬಿಬಿಎಂಪಿಯಲ್ಲಿಲ್ಲ. ಈ ಬಗ್ಗೆ ಪಾಲಿಕೆ ಹಿರಿಯ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ. ಈ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಬೇಕಿತ್ತು. ಆದರೆ, ಕೈಯಲ್ಲಿ ಬರೆಯಲಾಗಿದೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇನ್ನೂ ಎರಡು ಪ್ರಕರಣ?
ಟಿಡಿಆರ್‌ ವಂಚನೆಗೆ ಸಂಬಂಧಿಸಿದಂತೆ ಇನ್ನೂ ಎರಡು ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲು ಅನುಮತಿ ನೀಡುವಂತೆ ಎಸಿಬಿ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ (ಬಿಬಿಎಂಪಿ) ಪತ್ರ ಬರೆದಿದ್ದಾರೆ.

ಭಟ್ಟರಹಳ್ಳಿ–ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಜಾಗವೊಂದರ ಸಂಬಂಧ ನಡೆದಿರುವ ವಂಚನೆ ಪ್ರಕರಣದ ತನಿಖೆಯನ್ನು ಎಸಿಬಿ ಆರಂಭಿಸುತ್ತಿದ್ದಂತೆ ಬಂದಿರುವ ಇನ್ನೂ 20 ದೂರುಗಳ ಪ್ರಾಥಮಿಕ ತನಿಖೆ ಪೂರ್ಣಗೊಳಿಸಲಾಗಿದ್ದು, ಎರಡು ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲು ಅನುಮತಿ ಕೇಳಲಾಗಿದೆ ಎಂದು ಮೂಲಗಳು ಹೇಳಿವೆ.

ಟಿಡಿಆರ್‌ ವಂಚನೆ ಅತ್ಯಂತ ಗಂಭೀರ ಹಗರಣವಾಗಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಒಪ್ಪಿಗೆ ನೀಡಬಹುದು ಎಂಬ ವಿಶ್ವಾಸವಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಒಪ್ಪಿಗೆ ಕೊಡಲು 3 ತಿಂಗಳು ಕಾಯಿಸಲು ಅವಕಾಶವಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ. ಯಾವ ಅಧಿಕಾರಿಯ ವಿರುದ್ಧ ಅನುಮತಿ ಕೇಳಲಾಗಿದೆ ಎಂಬುದನ್ನು ಮೂಲಗಳು ಬಹಿರಂಗಪಡಿಸಲಿಲ್ಲ.

**
ಟಿಡಿಆರ್‌ಗೆ ಸಂಬಂಧಿಸಿದ ಯಾವುದೇ ಕಡತಗಳು ನಾಪತ್ತೆಯಾಗಿಲ್ಲ. ಎಸಿಬಿ ಅಧಿಕಾರಿಗಳು ಕೇಳಿದ್ದ ಕಡತಗಳನ್ನು ಕೊಡಲಾಗಿದೆ. ಇನ್ನೂ ಬೇಕಿದ್ದರೆ ನೀಡಲು ಸಿದ್ಧ.
-ಮಂಜುನಾಥ ಪ್ರಸಾದ್‌, ಬಿಬಿಎಂಪಿ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.