ADVERTISEMENT

ಮಿಟಗಾನಹಳ್ಳಿ ಕ್ವಾರಿ: ಕಸ ವಿಲೇವಾರಿ ಮತ್ತಷ್ಟು ವಿಳಂಬ

ರಾಜ್ಯ ಸರ್ಕಾರದ ಇ – ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕ್‌ l ಮಹಾನಗರ ಪಾಲಿಕೆಗೂ ತಟ್ಟಿದ ಬಿಸಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
   

ಬೆಂಗಳೂರು: ರಾಜ್ಯ ಸರ್ಕಾರದ ಟೆಂಡರ್‌ ಪ್ರಕ್ರಿಯೆ ನಿಭಾಯಿಸುವ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕ್‌ ಆಗಿದ್ದು, ಇದರ ಬಿಸಿ ಬಿಬಿಎಂಪಿಗೂ ತಟ್ಟಿದೆ. ಮಿಟಗಾನಹಳ್ಳಿ ಕ್ವಾರಿಯಲ್ಲಿ ಮಿಶ್ರ ಕಸ ವಿಲೇವಾರಿ ನಿರ್ವಹಣೆಯನ್ನು ಗುತ್ತಿಗೆ ನೀಡುವ ಟೆಂಡರ್‌ ಪ್ರಕ್ರಿಯೆಯನ್ನು ಇದರಿಂದಾಗಿ ಮುಂದೂಡಲಾಗಿದೆ.

ಬೆಳ್ಳಹಳ್ಳಿಯ ಭೂಭರ್ತಿ ಘಟಕವು ಆ.20ರ ವೇಳೆ ಭರ್ತಿ ಆಗಲಿದೆ. ಹಾಗಾಗಿ ನಗರದಲ್ಲಿ ಸಂಸ್ಕರಣೆ ಆಗದ ಮಿಶ್ರ ಕಸವನ್ನು ಬೆಳ್ಳಹಳ್ಳಿ ಬದಲು ಮಿಟಗಾನಹಳ್ಳಿಯ ಕಲ್ಲುಗಣಿ ಗುಂಡಿಯಲ್ಲಿ ವಿಲೇ ಮಾಡಲು ಪಾಲಿಕೆ ನಿರ್ಧರಿಸಿತ್ತು.

‘ಗುತ್ತಿಗೆದಾರರನ್ನು ಆಯ್ಕೆ ಮಾಡಲು ಟೆಂಡರ್‌ ಕರೆದರೆ ಪ್ರಕ್ರಿಯೆ ವಿಳಂಬ ಆಗುತ್ತದೆ. ಇದನ್ನು ತಡೆಯಲು ಕೆಆರ್‌ಐಡಿಎಲ್‌ ವತಿಯಿಂದ ಕಸ ವಿಲೇ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಸಲುವಾಗಿಕೆಟಿಪಿಪಿ ಕಾಯ್ದೆಯ ಸೆಕ್ಷನ್ 4 (ಎ) ಅಡಿ ವಿನಾಯಿತಿ ನೀಡಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯನ್ನು ಪಾಲಿಕೆ ಕೋರಿತ್ತು. ಆದರೆ, ಈ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ಪಾಲಿಕೆ ಕಸ ವಿಲೇವಾರಿಗೆ ಅನಿವಾರ್ಯವಾಗಿ ಟೆಂಡರ್‌ ಕರೆದಿತ್ತು.

ADVERTISEMENT

ಟೆಂಡರ್‌ನ ಪೂರ್ವಭಾವಿ ಸಭೆಯಲ್ಲಿ ಗುತ್ತಿಗೆದಾರರಿಂದ ಬೇಡಿಕೆ ಬಂದಿದ್ದರಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಪಾಲಿಕೆ ಏಳು ದಿನ ವಿಸ್ತರಿಸಿತ್ತು. ಅರ್ಜಿ ಸಲ್ಲಿಸಲು ಆ.7 ಕೊನೆಯ ದಿನವಾಗಿತ್ತು. ಅಷ್ಟರಲ್ಲಿ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ಹ್ಯಾಕ್‌ ಆಗಿದ್ದರಿಂದ ಟೆಂಡರ್‌ಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಆ.14ಕ್ಕೆ ಮುಂದೂಡಲಾಗಿತ್ತು. ನಂತರ ಮತ್ತೆ ಅದನ್ನು ಇದೇ 19ಕ್ಕೆ ಮುಂದೂಡಲಾಗಿದೆ. ಈ ಬೆಳವಣಿಗೆಗಳಿಂದಾಗಿ ಟೆಂಡರ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

‘ಮಿಟಗಾನಹಳ್ಳಿ ಕ್ವಾರಿಯಲ್ಲಿ ಮಿಶ್ರ ಕಸ ವಿಲೇ ಮಾಡುವ ಟೆಂಡರ್‌ ಪ್ರಕ್ರಿಯೆ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನ ಸಮಸ್ಯೆಯಿಂದಾಗಿ ವಿಳಂಬವಾಗಿದ್ದು ನಿಜ. ಒಂದು ವೇಳೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅದರ ಅನುಷ್ಠಾನಕ್ಕೆ ಮೂರು ತಿಂಗಳು ಕಾಲಾವಕಾಶ ಬೇಕಿತ್ತು. ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಸದ್ಯಕ್ಕೆ ಕಸ ವಿಲೇವಾರಿಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ನಗರದ ಬಹುತೇಕ ಕಸವನ್ನು ಬೆಲ್ಲಹಳ್ಳಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅದೀಗ ಬಹುತೇಕ ಭರ್ತಿ ಆಗಿದೆ.ಮಿಶ್ರ ಕಸವನ್ನು ಮೂರು ತಿಂಗಳು ಬೆಲ್ಲಹಳ್ಳಿ ಕ್ವಾರಿ ಪಕ್ಕದಲ್ಲಿ ಖಾಸಗಿ ಕ್ವಾರಿಯಲ್ಲಿ ವಿಲೇ ಮಾಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೂ, ಟೆಂಡರ್‌ ಪ್ರಕ್ರಿಯೆ ಮತ್ತಷ್ಟು ವಿಳಂಬವಾದರೆ ಕಸ ವಿಲೇವಾರಿಗೆ ಸಮಸ್ಯೆ ಆಗುವುದು ನಿಶ್ಚಿತ’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಗುತ್ತಿಗೆ ಆಗಸ್ಟ್‌ 15ರಂದು ಕೊನೆಗೊಂಡಿದೆ. ಅಷ್ಟರೊಳಗೆ ಹೊಸ ಟೆಂಡರ್‌ ಪ್ರಕ್ರಿಯೆ ನಡೆಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿತ್ತು. ಟೆಂಡರ್‌ ಕೂಡಾ ಕರೆದಿತ್ತು. ಈ ತಿಂಗಳ ಆರಂಭದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ಈ ಟೆಂಡರ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

‘ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಟೆಂಡರ್‌ ಪ್ರಕ್ರಿಯೆಯೂ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕ್‌ ಆಗಿದ್ದರಿಂದ ಮುಂದೂಡಲ್ಪಟ್ಟಿದೆ. 15 ದಿನಗಳವರೆಗೆ ಈ ಹಿಂದಿನ ಗುತ್ತಿಗೆದಾರರೇ ಆಹಾರ ಪೂರೈಸಲಿದ್ದಾರೆ. ಅಷ್ಟರಲ್ಲಿ ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸ
ಬೇಕಿದೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.