ADVERTISEMENT

ಬಿಡ್‌ ಸಾಮರ್ಥ್ಯಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿ ಗುತ್ತಿಗೆ

ಬಿಡ್‌ ಸಾಮರ್ಥ್ಯ ಕೂಲಂಕಷವಾಗಿ ಪರಿಶೀಲಿಸಿ: ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 20:28 IST
Last Updated 10 ಜನವರಿ 2021, 20:28 IST
ಬಿಬಿಎಂಪಿ (ಸಾಂದರ್ಭಿಕ ಚಿತ್ರ)
ಬಿಬಿಎಂಪಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಗುತ್ತಿಗೆದಾರರನ್ನು ಅವರ ಬಿಡ್‌ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡುತ್ತಿಲ್ಲ. ಕೆಲವು ಗುತ್ತಿಗೆದಾರರಿಗೆ ಅವರ ಬಿಡ್‌ ಸಾಮರ್ಥ್ಯಕ್ಕಿಂತ ಹೆಚ್ಚು ಕಾಮಗಾರಿಗಳ ಗುತ್ತಿಗೆ ವಹಿಸುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆರೋಪಿಸಿದೆ.

ಈ ಕುರಿತು ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಇತ್ತೀಚೆಗೆ ದೂರು ನೀಡಿದ್ದ ಸಂಘವು, ಎಂಎಸ್‌ವಿ ಕನ್‌ಸ್ಟ್ರಕ್ಷನ್‌ ಕಂಪನಿಗೆ ಅರ್ಹತೆಗಿಂತ ಹೆಚ್ಚು ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎಂದೂ ಆರೋಪಿಸಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಶ್ವತ್ಥನಾರಾಯಣ ಅವರು, ‘ಕೆಲವು ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗುತ್ತಿಗೆದಾರರ ಪ್ರಮಾಣೀಕೃತ ಬಿಡ್‌ ಟೆಂಡರ್‌ ದಾಖಲಾತಿಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸುತ್ತಿಲ್ಲ. ಗುತ್ತಿಗೆದಾರರ ಬಿಡ್‌ ಸಾಮರ್ಥ್ಯಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಅವರಿಗೆ ವಹಿಸಬಾರದು’ ಎಂದು ನಿರ್ದೇಶನ ನೀಡಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ರಾಕೇಶ್‌ ಸಿಂಗ್‌ ಅವರಿಗೆ 2020ರ ಡಿ. 28ರಂದು ಪತ್ರ ಬರೆದಿದ್ದರು.

ADVERTISEMENT

ಈ ಪತ್ರದ ಸಾರಾಂಶವನ್ನು ಉಲ್ಲೇಖಿಸಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ 2021ರ ಜ.5ರಂದು ಪತ್ರ ಬರೆದಿದ್ದಾರೆ. ‘ಪ್ರಮಾಣೀಕೃತ ದಾಖಲೆಗಳ ಪ್ರಕಾರ ಬಿಡ್‌ ಸಾಮರ್ಥ್ಯ ಇಲ್ಲದ ಗುತ್ತಿಗೆದಾರರ ಟೆಂಡರ್‌ ಅರ್ಜಿಗಳನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಎಸಿಎಸ್‌ ಸೂಚನೆ ನೀಡಿದ್ದಾರೆ.

‘ಎಂಎಸ್‌ವಿ ಕನ್‌ಸ್ಟ್ರಕ್ಷನ್‌ ಕಂಪನಿಯ ಟೆಂಡರ್‌ ಬಿಡ್‌ ಅರ್ಹತೆಯನ್ನೂ ಗುತ್ತಿಗೆದಾರರ ಸಾಮರ್ಥ್ಯ ಅಳೆಯುವ ಸೂತ್ರದ ಪ್ರಕಾರ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕು' ಎಂದು ನಿರ್ದೇಶನ ನೀಡಿದ್ದಾರೆ.

‘ಗುತ್ತಿಗೆದಾರರಿಗೆ ಎಷ್ಟು ಮೊತ್ತದವರಗಿನ ಗುತ್ತಿಗೆ ನೀಡಬೇಕು ಎಂಬುದನ್ನು ಲೆಕ್ಕ ಹಾಕಲೆಂದೇ ಸಿದ್ಧ ಸೂತ್ರವಿದೆ. ಅದನ್ನು ಬಿಬಿಎಂಪಿ ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ. ಎಂಎಸ್‌ವಿ ಕನ್‌ಸ್ಟ್ರಕ್ಷನ್‌ ಕಂಪನಿಗೆ ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿ ನೀಡಲಾದ ಬಗ್ಗೆ ಅನೇಕ ಗುತ್ತಿಗೆದಾರರು ಸಂಘಕ್ಕೆ ದೂರು ನೀಡಿದ್ದರು. ಹಾಗಾಗಿ ಈ ಬಗ್ಗೆ ಸಂಘದಿಂದ ಉಪ ಮುಖ್ಯಮಂತ್ರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೂ ದೂರು ನೀಡಿದ್ದೆವು’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಅಂಬಿಕಾಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಎಸ್‌ವಿ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ಬೇರೆ ಬೇರೆ ವಲಯಗಳಲ್ಲಿ ಡಾಂಬರೀಕರಣ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳು ಸೇರಿ ಅನೇಕ ಸಿವಿಲ್‌ ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಅವರ ಬಿಡ್‌ ಸಾಮರ್ಥ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಒಂದೇ ಸಂಸ್ಥೆಗೆ ಅಷ್ಟೊಂದು ಪ್ರಮಾಣದ ಕಾಮಗಾರಿ ನೀಡಲು ಸಾಧ್ಯವೇ ಇಲ್ಲ. ಇದರಿಂದ ಕಾಮಗಾರಿಯ ಗುತ್ತಿಗೆ ಪಡೆಯಲು ಅರ್ಹತೆ ಹೊಂದಿರುವ ಅನ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ’ ಎಂದು ಅವರು ದೂರಿದರು.

‘ಎಂಎಸ್‌ವಿ ಕನ್‌ಸ್ಟ್ರಕ್ಷನ್‌ ಕಂಪನಿಯು ಬಿಬಿಎಂಪಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ 2018–19ನೇ ಸಾಲಿನಲ್ಲಿ ಹಿಂದಿನ ಐದು ವರ್ಷಗಳ ಒಟ್ಟು ವಾರ್ಷಿಕ ವಹಿವಾಟು ಗರಿಷ್ಠ ₹ 154 ಕೋಟಿ. ಈ ಕಂಪನಿಯು ₹ 115 ಕೋಟಿ ಮೊತ್ತದ ಕಾಮಗಾರಿಗಳನ್ನು ನಿರ್ವಹಿಸುವ ಅರ್ಹತೆ ಹೊಂದಿದೆ. ಆದರೆ, ಕಂಪನಿಗೆ ಅದರ ಅರ್ಹತೆಗಿಂತ ₹ 92 ಕೋಟಿಗಳಷ್ಟು ಹೆಚ್ಚು ಮೊತ್ತದ ಕಾಮಗಾರಿಗಳ ಗುತ್ತಿಗೆ ವಹಿಸಲಾಗಿದೆ’ ಎಂದು ಸಂಘವು ಎಸಿಎಸ್‌ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.