ADVERTISEMENT

ಮಳೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ

ರಾಜಕಾಲುವೆ ದುರಸ್ತಿ: ಆಯುಕ್ತರಿಂದ ಕಾಮಗಾರಿ ತಪಾಸಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 20:08 IST
Last Updated 16 ಸೆಪ್ಟೆಂಬರ್ 2020, 20:08 IST
ನೆಲಗದರನಗಹಳ್ಳಿ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ರಾಜಕಾಲುವೆ ಹದಗೆಟ್ಟಿರುವ ಪ್ರದೇಶವನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಬುಧವಾರ ಪರಿಶೀಲಿಸಿದರು. ಶಾಸಕ ಆರ್‌.ಮಂಜುನಾಥ್‌ ಇದ್ದರು.
ನೆಲಗದರನಗಹಳ್ಳಿ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ರಾಜಕಾಲುವೆ ಹದಗೆಟ್ಟಿರುವ ಪ್ರದೇಶವನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಬುಧವಾರ ಪರಿಶೀಲಿಸಿದರು. ಶಾಸಕ ಆರ್‌.ಮಂಜುನಾಥ್‌ ಇದ್ದರು.   

ಬೆಂಗಳೂರು: ’ಇತ್ತೀಚೆಗೆ ಸುರಿದ ಮಳೆಯ ವೇಳೆ ಬಡವರ ಮನೆಗೆ ನೀರು ನುಗ್ಗಿ ಸ್ವತ್ತುಗಳಿಗೆ ಹಾನಿಯಾಗಿದ್ದರೆ, ಪರಿಶೀಲನೆ ನಡೆಸಿ ಅವರಿಗೆ ಪಾಲಿಕೆಯಿಂದ ಪರಿಹಾರ ನೀಡಲಾಗುವುದು. ಸ್ವತ್ತು ನಷ್ಟ ಅನುಭವಿಸಿದವರು ಬಿಬಿಎಂಪಿಯ ವಲಯ ಆಯುಕ್ತರ ಕಚೇರಿಗೆ ಮಾಹಿತಿ ನೀಡಬಹುದು‘ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ದಾಸರಹಳ್ಳಿ ವಲಯ ವ್ಯಾಪ್ತಿಯ ನೆಲಗದರನಹಳ್ಳಿಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ರಸ್ತೆ ಹಾಗೂ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಆಯುಕ್ತರು ಬುಧವಾರ ಪರಿಶೀಲಿಸಿದರು. ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂಸರ್ವೆ ನಡೆಸಿ ಒತ್ತುವರಿಗಳನ್ನು ತೆರವು ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಮೂಲಕ ರಾಜಕಾಲುವೆ ಹಾದುಹೋಗುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರ ಅಗಲ ಕಿರಿದಾಗಿರುವುದರಿಂದ ಮಳೆನೀರು ಮನೆಗಳಿಗೆ ನುಗ್ಗಿದೆ. ಕಾಲುವೆಯನ್ನು ಅಗಲ ಮಾಡಬೇಕು ಎಂದು ಸ್ಥಳೀಯರು ಕೋರಿದರು.

ADVERTISEMENT

ಶಾಸಕ ಆರ್.ಮಂಜುನಾಥ್, ದಾಸರಹಳ್ಳಿ ವಲಯ ಜಂಟಿ ಆಯುಕ್ತ ನರಸಿಂಹಮೂರ್ತಿ, ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಪ್ರಸಾದ್, ವಲಯದ ಮುಖ್ಯ ಎಂಜಿನಿಯರ್ ದೊಡ್ಡಯ್ಯ ಜೊತೆಗಿದ್ದರು.

ದಾಸರಹಳ್ಳಿ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ(ಅಂದರಹಳ್ಳಿ ರಸ್ತೆ) ಸುಮಾರು 2.5 ಕಿ.ಮೀ ಉದ್ದದಷ್ಟು ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಜಾಗ ಬಿಟ್ಟುಕೊಟ್ಟ ಅನೇಕರಿಗೆ ಈಗಾಗಲೇ ಕಲವರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣಪತ್ರ (ಟಿಡಿಆರ್‌ಸಿ) ನೀಡಲಾಗಿದೆ. ಕೆಲವು ಸಮಸ್ಯೆಗಳಿಂದಾಗಿ ಇನ್ನು ಕೆಲವರಿಗೆ ಟಿಡಿಆರ್‌ಸಿ ನೀಡುವುದು ಬಾಕಿ ಇದೆ.

‘ಸಮಸ್ಯೆ ಬಗೆಹರಿಸಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು’ ಎಂದು ಆಯುಕ್ತರು ಮೂಲಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.